ADVERTISEMENT

ಪ್ರಿಯಾಂಕ್ ಅವರಲ್ಲಿ ದಲಿತತ್ವ ಇಲ್ಲ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 15:35 IST
Last Updated 22 ಫೆಬ್ರುವರಿ 2026, 15:35 IST
<div class="paragraphs"><p>ಛಲವಾದಿ ನಾರಾಯಣಸ್ವಾಮಿ</p></div>

ಛಲವಾದಿ ನಾರಾಯಣಸ್ವಾಮಿ

   

ಬೆಂಗಳೂರು: ‘ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ದಲಿತತ್ವ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುತ್ತಾರೆಯೇ ಹೊರತು ದಲಿತತ್ವ ಅವರ ಕುಟುಂಬದಲ್ಲಿ ಇಲ್ಲ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

‘ಪ್ರಿಯಾಂಕ್ ಅವರು ಅಪ್ಪನ ನೆರಳಿನಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಅವರಿಗೆ ಯಾವ ಬದ್ಧತೆಯೂ ಇಲ್ಲ. ನಿಜವಾದ ರಾಜಕಾರಣಿಯೂ ಅಲ್ಲ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

‘ಒಳಮೀಸಲಾತಿ ವಿಚಾರವಾಗಿ ಪ್ರಿಯಾಂಕ್ ಈವರೆಗೆ ಒಂದೂ ಮಾತು ಆಡಲಿಲ್ಲ. ಒಳ ಮೀಸಲಾತಿ ನ್ಯೂನತೆಗಳ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆದಿದ್ದೆ. ಅನ್ಯಾಯವಾಗುತ್ತಿದೆ ಎಂದು ಮುಖ್ಯಮಂತ್ರಿಯವರಿಗೆ ಸದನದಲ್ಲಿ ಎಚ್ಚರಿಸಿದ್ದೆ. ಆದರೆ, ಅವರು ಗಮನ ಹರಿಸಲಿಲ್ಲ. ಇದನ್ನು ಸರಿ ಮಾಡಿ ಎಂದು ಡಾ.ಎಚ್‌.ಸಿ.ಮಹದೇವಪ್ಪ ಅವರಿಗೂ ಹೇಳಿದ್ದೆ. ಅವರೂ ಗಮನಹರಿಸಲಿಲ್ಲ. ಒಳಮೀಸಲಾತಿಯಲ್ಲಿ ಜನಾಂಗಗಳ ಲೋಪ ಇಲ್ಲ. ಅದು ಸರ್ಕಾರದ ಲೋಪ.  ಸರ್ಕಾರವೇ ಸರಿ ಮಾಡಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್‌ ಸಾಮಾಜಿಕ ನ್ಯಾಯದ ವಿರುದ್ಧ ಇದೆ. ಸ್ವಾತಂತ್ರ್ಯ ಬಂದು 80 ವರ್ಷ ಆದರೂ ಅಂದಿನಿಂದ ನೀವು ದಲಿತರನ್ನು ವಂಚನೆ ಮಾಡುತ್ತಾ ಬಂದಿದ್ದೀರಿ. ಪರಮೇಶ್ವರ ಅವರು ಚುನಾವಣೆಯಲ್ಲಿ ಸೋತಾಗ ಕಣ್ಣೀರು ಹಾಕಿದರೆಂದು ಆಗ ಅವರನ್ನು ವಿಧಾನಪರಿಷತ್ ಸದಸ್ಯ ಮಾಡಿ ಮಂತ್ರಿ ಮಾಡಿದಿರಿ. ಉಪಮುಖ್ಯಮಂತ್ರಿ ಮಾಡಲಿಲ್ಲ. ಈ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ಪರಮೇಶ್ವರ ಅವರನ್ನು ಉಪಮುಖ್ಯಮಂತ್ರಿ ಮಾಡಬಹುದಿತ್ತು. ಸಾಮಾಜಿಕ ನ್ಯಾಯ ಕಾಂಗ್ರೆಸ್‌ನಲ್ಲಿ ಸತ್ತು ಹೋಗಿದೆ. ಆದರೆ ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯವಿದೆ. ಹೀಗಾಗಿ ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿದೆವು. ಅಂಬೇಡ್ಕರ್ ಅವರಿಗೆ ಬಿಜೆಪಿ ಕೊಟ್ಟಷ್ಟು ಗೌರವ ಯಾರೂ ನೀಡಿಲ್ಲ’ ಎಂದರು.

‘ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದು ಸಿದ್ದರಾಮಯ್ಯ ಮತ್ತು ಅವರ ತಂಡ. ಪರಮೇಶ್ವರ ಅವರನ್ನು ಸೋಲಿಸಿದ್ದೂ ಅದೇ ತಂಡ. ಆದರೆ, ಸಿದ್ದರಾಮಯ್ಯ ಅವರು ಈಗ ಸತ್ಯಹರಿಶ್ಚಂದ್ರ ರೀತಿ ಮಾತನಾಡುತ್ತಾರೆ’ ಎಂದು ಛಲವಾದಿ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.