
ಪ್ರಿಯಾಂಕ್ ಖರ್ಗೆ
ಬೆಂಗಳೂರು: ‘ಗ್ರಾಮೀಣ ಪ್ರದೇಶ ಗಳಿಗೆ ಶುದ್ಧ ನೀರು ಪೂರೈಸುವ ಉದ್ದೇಶದಿಂದ ಗುಣಮಟ್ಟ ಪರೀಕ್ಷೆಗೆ ರಾಜ್ಯ ಸರ್ಕಾರ ಎರಡು ವರ್ಷಗಳಲ್ಲಿ ₹52 ಕೋಟಿ ವೆಚ್ಚ ಮಾಡಿದೆ. ಆದರೆ, ಈ ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ನೀಡಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
‘ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ನಿರ್ವಹಣೆಗಾಗಿ ರಾಜ್ಯದಾ
ದ್ಯಂತ ಸ್ಥಾಪಿಸಲಾಗಿರುವ ಪ್ರಯೋಗಾಲಯಗಳ ಮೂಲಕ ಗುಣಮಟ್ಟ ಪರೀಕ್ಷೆ ಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಈ ಉದ್ದೇಶಕ್ಕೆ 2024-25 ನೇ ಸಾಲಿನಲ್ಲಿ ₹23.52 ಕೋಟಿ, ಪ್ರಸಕ್ತ ಸಾಲಿನಲ್ಲಿ ಈವರೆಗೆ ₹ 28.85 ಕೋಟಿ ವೆಚ್ಚ ಮಾಡಿದೆ’ ಎಂದಿದ್ದಾರೆ.
‘ಕೇಂದ್ರ ಸರ್ಕಾರ ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಗುಣಮಟ್ಟ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕಾರ್ಯಕ್ರಮಕ್ಕೆ ಶೇ 2ರಷ್ಟು ಅನುದಾನ ಬಿಡುಗಡೆಗೊಳಿಸಬೇಕಿದೆ. ಆದರೆ, ಎರಡು ವರ್ಷದಿಂದ ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡಿಲ್ಲ’ ಎಂದು ತಿಳಿಸಿದ್ದಾರೆ.
‘ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಮೂಲಗಳನ್ನು ನಿಗದಿಪಡಿಸಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಉದ್ದೇಶಕ್ಕೆ ಜಿಲ್ಲಾಮಟ್ಟದ ಪ್ರಯೋಗಾಲಯಗಳು ಮತ್ತು 47 ತಾಲ್ಲೂಕು ಮಟ್ಟದ ಪ್ರಯೋಗಾಲಯ ಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಹೇಳಿದ್ದಾರೆ.
‘ರಾಜ್ಯದಲ್ಲಿ 2024-25ರಲ್ಲಿ 3.90 ಲಕ್ಷ, 2025-26ರಲ್ಲಿ 2.46 ಲಕ್ಷ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ, ಕೆಲವು ಮಾದರಿಯಲ್ಲಿ ರಾಸಾಯನಿಕಗಳು, ಬ್ಯಾಕ್ಟೀರಿಯಾ ಪತ್ತೆಯಾಗಿದ್ದವು. ಕಲುಷಿತ ಎಂದು ಕಂಡುಬಂದ 49,309 ನೀರಿನ ಮಾದರಿಗಳಿಗೆ ಪರ್ಯಾಯ ಕ್ರಮಗಳನ್ನು
ಕೈಗೊಂಡು ನೀರು ಪೂರೈಸಲಾಗಿದೆ’ ಎಂದು ಪ್ರಿಯಾಂಕ್ ವಿವರಿಸಿದ್ದಾರೆ.
‘ನೀರಿನ ಗುಣಮಟ್ಟದ ಪರೀಕ್ಷೆ ನಡೆಸಲು ಎನ್‌ಎಬಿಎಲ್ ಮಾನ್ಯತೆ ಪಡೆದಿರುವ ಖಾಸಗಿ ಪ್ರಯೋಗಾಲಯಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ಒಟ್ಟು 66,811 ನೀರಿನ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಅದಕ್ಕೆ ತಗಲಿದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಿದೆ. ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ನೀರಿನ ಮಾದರಿಗಳ ಗುಣಮಟ್ಟ ಪರೀಕ್ಷೆ ಕೈಗೊಳ್ಳಲು ರಾಯಚೂರು ಕೃಷಿ ವಿಶ್ವವಿದ್ಯಾಲಯದೊಂದಿಗೆ ಕರಾರು ಮಾಡಿಕೊಳ್ಳಲಾಗಿದೆ’ ಎಂದೂ ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.