ADVERTISEMENT

ಪ್ರಿಯಾಂಕ್ ಪತ್ರ: ಬಿಜೆಪಿಗೆ ಭಯವೇಕೆ? ರಮೇಶ್ ಬಾಬು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 16:21 IST
Last Updated 14 ಅಕ್ಟೋಬರ್ 2025, 16:21 IST
ರಮೇಶ್‌ ಬಾಬು
ರಮೇಶ್‌ ಬಾಬು   

ಬೆಂಗಳೂರು: ‘ಆರ್‌ಎಸ್‌ಎಸ್‌ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದಾದರೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಬಿಜೆಪಿ ಮತ್ತು ಸಂಘ ಪರಿವಾರ ಹೆದರುತ್ತಿರುವುದು ಏಕೆ’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘ ಪರಿವಾರದಿಂದ ಬಿಜೆಪಿ ನಾಯಕರು ಸಭ್ಯತೆ ಕಲಿತಿದ್ದರೆ, ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದ ಬಗ್ಗೆ ಚರ್ಚೆಯಾಗಲಿ ಎಂದು ಹೇಳಬೇಕು’ ಎಂದರು.

‘ಬಿಜೆಪಿ ನಾಯಕರು ಮೊದಲು ಪ್ರಿಯಾಂಕ್ ಅವರ ಪತ್ರವನ್ನು ಓದಲಿ. ಸಂಘದ ಹೆಸರಿನಲ್ಲಿ ಸರ್ಕಾರಿ ಸ್ಥಳಗಳಲ್ಲಿ ಕೋಮುದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದರೆ ಬಿಜೆಪಿಯವರು ಕಾನೂನಿಗೆ ಹೆದರಬೇಕಾಗುತ್ತದೆ. ಅದರ ಹೊರತಾಗಿ ದಮ್ಮು, ತಾಕತ್ತು ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ’ ಎಂದರು.

ADVERTISEMENT

‘ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಮಾತೆತ್ತಿದರೆ ಕೊಲೆಗಡುಕ ಸರ್ಕಾರ, ಈ ಸರ್ಕಾರಕ್ಕೆ ಧಮ್, ತಾಕತ್ತಿಲ್ಲ ಎಂಬ ಪದ ಬಳಕೆ ಮಾಡಿ ಆರೋಪ ಮಾಡುತ್ತಿದ್ದಾರೆ. ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕೆಸರೆರಚುವ ಕೆಲಸ ಮಾಡುತ್ತಿದ್ದಾರೆ. ಜನರ ಪರವಾಗಿ ಮಾತನಾಡದೆ, ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕುವವರಿಗೆ ಪ್ರಚೋದನೆ ನೀಡುವ ಕೆಲಸವನ್ನು ಬಿಜೆಪಿ ನಾಯಕರು ನಿಲ್ಲಿಸಬೇಕು. ಗಾಂಧಿಯವರ ಹತ್ಯೆ ಮಾಡಿದಾಗಿನಿಂದ ಇಲ್ಲಿಯವರೆಗೆ ಸಂಘ ಪರಿವಾರದ ಚಟುವಟಿಕೆಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಪರಿಶೀಲಿಸುತ್ತಲೇ ಬಂದಿದೆ. ಸಮುದಾಯಗಳ ಮಧ್ಯೆ ವಿಷಬೀಜ ಬಿತ್ತುವ ಪ್ರಯತ್ನ ಮಾಡಿದಾಗ ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ಪ್ರಶ್ನೆ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.