ಪ್ರತಾಪ ಸಿಂಹ ಹಾಗೂ ಪ್ರಿಯಾಂಕ್ ಖರ್ಗೆ
– ಫೇಸ್‌ಬುಕ್ ಚಿತ್ರಗಳು
ಬೆಂಗಳೂರು: ಕತ್ತಲೆ ಜಗತ್ತಿನ ರಹಸ್ಯಗಳ ಬಗ್ಗೆ ಭಯವೇಕೆ ಎಂದು ಬಿಜೆಪಿ ನಾಯಕ ಪ್ರತಾಪ ಸಿಂಹ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆಸಿದ್ದಾರೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಅವರು, ‘ನಿಮ್ಮ ಕತ್ತಲೆ ಜಗತ್ತಿನಲ್ಲಿ ಎಂತೆಂತಹ ಕರಾಳ ಕತೆಗಳ ರಹಸ್ಯ ಅಡಗಿವೆ? ಕತ್ತಲೆ ಜಗತ್ತಿನ ರಹಸ್ಯಗಳ ಪುಸ್ತಕಕ್ಕೆ ನೀವು ತಡೆಯಾಜ್ಞೆ ತಂದಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
‘ಬಿಜೆಪಿಯಿಂದ ತಿರಸ್ಕೃತಗೊಂಡ ನಿರುದ್ಯೋಗಿ ಪ್ರತಾಪ ಸಿಂಹ ಸುದ್ದಿಯಲ್ಲಿರಲು ಸಲುವಾಗಿ ಮೈಸೂರಿನ ಪತ್ರಕರ್ತರ ಕೈಕಾಲು ಹಿಡಿದು ಪ್ರತಿದಿನವೂ ನನ್ನ ಪ್ರತಿಕ್ರಿಯೆ ತಗೋಳಿ ಅಂತ ಅಂಗಲಾಚುತ್ತಿದ್ದಾರೆ ಎಂಬುದು ಮಾಧ್ಯಮ ಮಿತ್ರರ ಆಫ್ ದಿ ರೆಕಾರ್ಡ್ ವರದಿ’ ಎಂದು ಹೇಳಿದ್ದಾರೆ.
ಎಲ್ಲಾ ವಿಷಯಕ್ಕೂ ಬಾಯಿ ಹಾಕುವ ಪ್ರತಾಪ ಸಿಂಹರವರು ಬಿಜೆಪಿ ಪಕ್ಷದ ಯಾವ ‘ಪೊಸಿಷನ್‘ನಲ್ಲಿದ್ದಾರೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಬರೆದುಕೊಂಡಿದ್ದಾರೆ.
ನನ್ನ ಅರ್ಹತೆಯನ್ನು ಪ್ರಶ್ನಿಸುವ ಪ್ರತಾಪ ಸಿಂಹರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ಅವರಿಗೆ ಅರ್ಹತೆ ಇಲ್ಲದ್ದಕ್ಕೆ ಅಲ್ಲವೇ? ನನ್ನ ಅರ್ಹತೆಯ ಬಗ್ಗೆ, ಇಲಾಖೆಗಳಲ್ಲಿ ನನ್ನ ಕಾರ್ಯವೈಖರಿಯ ಬಗ್ಗೆ ನಾನು ಹೇಳಿಕೊಳ್ಳುವುದಕ್ಕಿಂತ ಬಿಜೆಪಿಯ ಕೇಂದ್ರ ಸರ್ಕಾರದ ದಾಖಲೆಗಳು, ಅಂಕಿ ಅಂಶಗಳು ಹೇಳುತ್ತವೆ ಎಂದು ಹೇಳಿದ್ದಾರೆ
‘ಪಂಚಾಯತ್ ರಾಜ್ ವಿಕೇಂದ್ರಿಕರಣದಲ್ಲಿ ಕರ್ನಾಟಕ ನಂ1 ಸ್ಥಾನದಲ್ಲಿದೆ ಎಂದು ಹೇಳಿದ್ದು ಕೇಂದ್ರ ಸರ್ಕಾರ. ಕರ್ನಾಟಕದ ಗ್ರಾಮ ಪಂಚಾಯಿತಿಗಳು ತೆರಿಗೆ ಸಂಗ್ರಹದಲ್ಲಿ ದಾಖಲೆಯ ಸಾಧನೆ ಮಾಡಿದೆ ಎಂದು ಒಪ್ಪಿಕೊಂಡಿದ್ದು ಕೇಂದ್ರ ಸರ್ಕಾರ. ಐಟಿ ರಫ್ತಿನಲ್ಲಿ 38% ಪಾಲು ಹೊಂದುವ ಮೂಲಕ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ, ಅತಿ ಹೆಚ್ಚು R&D ಕೇಂದ್ರಗಳನ್ನು ಹೊಂದುವ ಮೂಲಕ ನವೋಧ್ಯಮಗಳಿಗೆ ಉತ್ತೇಜನ ನೀಡುವ ಪ್ರಥಮ ರಾಜ್ಯ ಕರ್ನಾಟಕ’ ಎಂದು ಹೇಳಿದ್ದಾರೆ.
ಪ್ರತಾಪ ಸಿಂಹ ಅವರು ಒಂದಿಷ್ಟು ಅಧ್ಯಯನ ನಡೆಸುವ, ಆಗುಹೋಗುಗಳ ಸುದ್ದಿಯನ್ನು ಓದುವ ಅಭ್ಯಾಸ ಹೊಂದಿದ್ದರೆ ಇದೆಲ್ಲವೂ ತಿಳಿಯುತ್ತಿತ್ತು. ಅಂದಹಾಗೆ ಪ್ರತಾಪ ಸಿಂಹ ಅವರೇ ನಿಮ್ಮ ನರೇಂದ್ರ ಮೋದಿಯವರ ವಿದ್ಯಾರ್ಹತೆ ಏನು? ಸರ್ಟಿಫಿಕೇಟ್ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.