
ಬೆಂಗಳೂರು: ‘ಆರ್‌ಎಸ್‌ಎಸ್‌ಗೆ ದೇಣಿಗೆ ಕೊಡುವ ಸ್ವಯಂಸೇವಕರು ಯಾರು, ಅವರನ್ನು ಹೇಗೆ ಗುರುತಿಸಲಾಗುತ್ತದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
‘ತನ್ನ ಸ್ವಯಂಸೇವಕರು ನೀಡುವ ದೇಣಿಗೆಗಳ ಮೂಲಕ ಆರ್‌ಎಸ್‌ಎಸ್ ಕಾರ್ಯನಿರ್ವಹಿಸುತ್ತದೆ’ ಎಂಬ ಆರ್‌ಎಸ್‌ಎಸ್ ಸರ ಸಂಘಚಾಲಕ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್, ‘ಈ ಹೇಳಿಕೆಗೆ ಸಂಬಂಧಿಸಿದಂತೆ ಹಲವಾರು ಕಾನೂನುಬದ್ಧ ಪ್ರಶ್ನೆಗಳು ಉದ್ಭವಿಸುತ್ತವೆ’ ಎಂದಿದ್ದಾರೆ.
‘ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾದ ಪ್ರಭಾವ ಮತ್ತು ಉಪಸ್ಥಿತಿಯ ಹೊರತಾಗಿಯೂ ಆರ್‌ಎಸ್‌ಎಸ್ ನೋಂದಣಿಯಾಗದೆ ಏಕೆ ಮುಂದುವರೆದಿದೆ, ಭಾರತದಲ್ಲಿರುವ ಪ್ರತಿಯೊಂದು ಧಾರ್ಮಿಕ ಅಥವಾ ದತ್ತಿ ಸಂಸ್ಥೆಯು ಆರ್ಥಿಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಾದಾಗ, ಆರ್‌ಎಸ್‌ಎಸ್‌ಗೆ ಇದೇ ರೀತಿಯ ಹೊಣೆಗಾರಿಕೆ ಕಾರ್ಯವಿಧಾನಗಳ ಅನುಪಸ್ಥಿತಿಯನ್ನು ಸಮರ್ಥಿಸುವುದು ಏನು’ ಎಂದೂ ಅವರು ಪ್ರಶ್ನಿಸಿದ್ದಾರೆ.
‘ನೀಡಲಾದ ದೇಣಿಗೆಗಳ ಪ್ರಮಾಣ ಮತ್ತು ಸ್ವರೂಪ ಏನು? ಈ ಕೊಡುಗೆಗಳನ್ನು ಹೇಗೆಲ್ಲ ಸ್ವೀಕರಿಸಲಾಗುತ್ತದೆ? ಆರ್‌ಎಸ್‌ಎಸ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತನ್ನದೇ ಆದ ನೋಂದಾಯಿತ ಗುರುತಿನಡಿಯಲ್ಲಿ ಸಂಸ್ಥೆಗೆ ನೇರವಾಗಿ ದೇಣಿಗೆಗಳನ್ನು ಏಕೆ ನೀಡಲಾಗುವುದಿಲ್ಲ? ನೋಂದಾಯಿತ ಘಟಕವಾಗದೆ ಆರ್‌ಎಸ್‌ಎಸ್ ತನ್ನ ಹಣಕಾಸು ಮತ್ತು ಸಾಂಸ್ಥಿಕ ರಚನೆಯನ್ನು ಹೇಗೆ ಉಳಿಸಿಕೊಳ್ಳುತ್ತದೆ? ಪೂರ್ಣ ಸಮಯದ ಪ್ರಚಾರಕರಿಗೆ ಯಾರು ವೇತನ ನೀಡುತ್ತಾರೆ ಮತ್ತು ಸಂಸ್ಥೆಯ ದಿನನಿತ್ಯದ ಕಾರ್ಯಾಚರಣೆಯ ವೆಚ್ಚಗಳನ್ನು ಪೂರೈಸುತ್ತಾರೆ’ ಎಂದೂ ಪ್ರಿಯಾಂಕ್ ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.