ADVERTISEMENT

ರಾಜ್ಯಪಾಲರ ಮೂಲಕ ಕನ್ನಡಿಗರ ಅವಮಾನಿಸಿದ ಬಿಜೆಪಿ: ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 8:13 IST
Last Updated 22 ಜನವರಿ 2026, 8:13 IST
   

ಬೆಂಗಳೂರು: ‘ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಆಡಳಿತಾತ್ಮಕವಾಗಿ ಕನ್ನಡಿಗರನ್ನು ಮತ್ತು ಕರ್ನಾಟಕವನ್ನು ಕಡೆಗಣಿಸಿ, ಶೋಷಿಸಿದ್ದ ಬಿಜೆಪಿ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ರಾಜ್ಯಪಾಲರ ಮೂಲಕವೇ ಕನ್ನಡಿಗರನ್ನು ಅವಮಾನಿಸಿದೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.

ಇಂದು (ಗುರುವಾರ) ಸದನದಲ್ಲಿ ನಡೆದ ಬೆಳವಣಿಗೆಗಳ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಖರ್ಗೆ, ‘ಸರ್ಕಾರದ ಭಾಷಣವನ್ನು ಉಲ್ಲಂಘಿಸುವ ಮೂಲಕ ರಾಜ್ಯಪಾಲರು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ’ ಎಂದು ಹೇಳಿದ್ದಾರೆ.

‘ರಾಷ್ಟ್ರಗೀತೆ ನುಡಿಸುವವರೆಗೂ ಕಾಯದೆ ಎದ್ದು ಹೊರಟ ರಾಜ್ಯಪಾಲರು ಶಿಷ್ಟಾಚಾರವನ್ನು ಬದಿಗೊತ್ತಿ ರಾಷ್ಟ್ರಗೀತೆಗೂ ಅವಮಾನಿಸಿದ್ದಾರೆ. ಈ ಮೂಲಕ ಬಿಜೆಪಿ ರಾಷ್ಟ್ರ ಗೀತೆಯ ವಿರೋಧಿ, ಸಂವಿಧಾನ ವಿರೋಧಿ, ಕನ್ನಡಿಗರ ವಿರೋಧಿ ಎನ್ನುವುದು ಜಗಜ್ಜಾಹೀರಾಗಿದೆ’ ಎಂದಿದ್ದಾರೆ.

ADVERTISEMENT

‘ಕನ್ನಡಿಗರನ್ನು ಉದ್ದೇಶಿಸಿ ಪೂರ್ಣ ಭಾಷಣ ಮಾಡದಷ್ಟು ತೀವ್ರ ಅಸಹನೆಯನ್ನು ತೋರಿರುವ ರಾಜ್ಯಪಾಲರು ಬಿಜೆಪಿಯ ದರ್ಪ, ದ್ರಾಷ್ಟ್ಯದ ವಕ್ತಾರರಾಗಿ ನಿರೂಪಿಸಿದ್ದಾರೆ. ಅಸಡ್ಡೆಯಿಂದ ಕೂಡಿದ ನಾಲ್ಕು ಸಾಲಿನ ಮಾತು, ಸರ್ಕಾರದ ಭಾಷಣದ ತಿರಸ್ಕಾರವು ಸಂವಿಧಾನದ ಆಶಯಗಳ ಉಲ್ಲಂಘನೆ ಮಾತ್ರವಲ್ಲ, ಕನ್ನಡಿಗರಿಗೆ ಎಸಗಿದ ಘೋರ ಅವಮಾನ. ರಾಜ್ಯಪಾಲರ ಮೂಲಕ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ನೆಲಕ್ಕೆ ಹಾಕಿ ಹೊಸಕುತ್ತಿರುವ ಬಿಜೆಪಿಗೆ ಕನ್ನಡಿಗರು ಪಾಠ ಕಲಿಸುವುದು ನಿಶ್ಚಿತ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.