
ಪ್ರಿಯಾಂಕ್ ಖರ್ಗೆ, ಚಲವಾದಿ ನಾರಾಯಣಸ್ವಾಮಿ
ಬೆಂಗಳೂರು: ‘ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ದಲಿತತ್ವ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುತ್ತಾರೆಯೇ ಹೊರತು ದಲಿತತ್ವ ಅವರ ಕುಟುಂಬದಲ್ಲಿ ಇಲ್ಲ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಕ್ಕೆ ಪ್ರಿಯಾಂಕ್ ಅವರು ತಿರುಗೇಟು ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಸುದೀರ್ಘ ಟ್ವಿಟ್ ಮಾಡಿರುವ ಅವರು, ಚಲವಾದಿ ನಾರಾಯಣಸ್ವಾಮಿಯವರು ತೆಗಳುಭಟರ ಪಡೆಯ ಅಧ್ಯಕ್ಷರಾಗಿ, ತೆಗಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಕುಹಕವಾಡಿದ್ದಾರೆ.
‘ಸೂರ್ಯ, ಚಂದ್ರ ಮತ್ತು ಸತ್ಯ ಈ ಮೂರು ವಿಷಯಗಳನ್ನು ಯಾರೂ ಸಹ ದೀರ್ಘಕಾಲ ಮುಚ್ಚಿಡಲು ಸಾಧ್ಯವಿಲ್ಲ" ಬುದ್ಧನ ಈ ಮಾತು ಚಲವಾದಿ ನಾರಾಯಣಸ್ವಾಮಿಯವರ ವಿಷಯದಲ್ಲಿ ಹೆಚ್ಚು ಪ್ರಸ್ತುತ ಎನಿಸಿಕೊಳ್ಳುತ್ತದೆ, ನಾರಾಯಣಸ್ವಾಮಿಯವರು ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ ದಿನವೇ ಅವರ ರಾಜಕೀಯ ಜೀವನ ಅಂತ್ಯವಾಗುತ್ತದೆ, ಇದೇ ಆ ಸತ್ಯ! ಎಂದು ತಿವಿದಿದ್ದಾರೆ.
ನಾರಾಯಣಸ್ವಾಮಿಯವರು ದಲಿತತ್ವವನ್ನು ಸಿಂಪಥಿ ಕಾರ್ಡ್ ಆಗಿ ಬಳಸಿಕೊಂಡರೆ, ನಾವು ದಲಿತತ್ವವನ್ನು ಸ್ವಾಭಿಮಾನವಾಗಿ, ಹೋರಾಟವಾಗಿ ಕಾಣುತ್ತೇವೆ, ಬಾಬಾ ಸಾಹೇಬರು ಇದನ್ನೇ ನಮಗೆ ಹೇಳಿಕೊಟ್ಟಿದ್ದು. ನಾನು ಶೋಷಣೆಯನ್ನು ಅನುಭವಿಸಿದ್ದೇನೆ ಎನ್ನುವ ನಾರಾಯಣಸ್ವಾಮಿಯವರು ಇಂದು ಆ ಶೋಷಣೆಗೆ ಕಾರಣವಾದ RSS ಸಿದ್ದಾಂತದವರ ಜೊತೆಯೇ ನಿಂತಿರುವುದು ಅವರ ಡೋಂಗಿತನವನ್ನು ಸಾರುತ್ತದೆ ಎಂದು ಹೇಳಿದ್ದಾರೆ.
ಹಿಂದೆ ಕಾಂಗ್ರೆಸ್ ನಲ್ಲಿ "ಚಲವಾದಿ ನಾರಾಯಣಸ್ವಾಮಿ"ಯಾಗಿದ್ದವರು, ಬಿಜೆಪಿಗೆ ಹೋಗಿ "ಅವಕಾಶವಾದಿ ನಾರಾಯಣಸ್ವಾಮಿ"ಯಾಗಿ ನಮ್ಮ ನಿಂದನೆಯನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ. ನಾರಾಯಣಸ್ವಾಮಿಯವರ ಅಸ್ತಿತ್ವವು ನನ್ನ ಅಸ್ತಿತ್ವದ ಮೇಲೆ ಅವಲಂಬನೆಯಾಗಿದೆ, ನಾನು ಮುಗಿದುಹೋದರೆ ನಾರಾಯಣಸ್ವಾಮಿಯವರೂ ಮುಗಿದು ಹೋಗುತ್ತಾರೆ! ಮಾನ್ಯ ನಾರಾಯಣಸ್ವಾಮಿಯವರೇ, ಕಾಂಗ್ರೆಸ್ ಪಕ್ಷ ನಿಮ್ಮನ್ನು ನಾಯಕನನ್ನಾಗಿ ಬೆಳೆಸಿದ್ದಕ್ಕಾಗಿಯೇ ನಿಮ್ಮನ್ನು ಬಿಜೆಪಿ ಕರೆದುಕೊಂಡಿದ್ದು, ನಿಮ್ಮ ಸೇವೆಗಾಗಿಯೇ ಕಾಂಗ್ರೆಸ್ ನಿಮಗೆ ಅವಕಾಶಗಳನ್ನು ನೀಡಿದ್ದು, ನಿಮ್ಮನ್ನು ರಾಷ್ಟ್ರಮಟ್ಟದ ರೈಲ್ವೆ ಬೋರ್ಡ್ ಚೆರ್ಮೆನ್ ಮಾಡಿದ್ದು, ಎರಡೆರಡು ಬಾರಿ ರಾಜ್ಯ ಮಟ್ಟದ ಬೋರ್ಡ್ ಚೆರ್ಮೆನ್ ಮಾಡಿದ್ದು, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿದ್ದು. ನಿಮ್ಮನ್ನು ಜೀರೋದಿಂದ ಹೀರೋ ಮಾಡಿದ್ದು ಕಾಂಗ್ರೆಸ್ ಪಕ್ಷ, ಹೀರೋ ಆದಮೇಲೆಯೇ ಬಿಜೆಪಿ ನಿಮ್ಮನ್ನು ಬಿಜೆಪಿ ಕರೆದುಕೊಂಡಿದ್ದೇ ಹೊರತು ಬಿಜೆಪಿ ನಿಮ್ಮನ್ನು ಜೀರೋದಿಂದ ಬೆಳೆಸಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾರಾಯಣಸ್ವಾಮಿಯವರೇ, ನಾನು ಮೂರು ಬಾರಿ ಜನರಿಂದ ಆಯ್ಕೆಯಾಗಿದ್ದೇನೆ ಹೊರತು ಚಡ್ಡಿ ಹೊತ್ತು ಹುದ್ದೆ ಪಡೆಯಲಿಲ್ಲ, ನಾನು ಎಲೆಕ್ಟೆಡ್ ರಾಜಕಾರಿಣಿ, ನೀವು ಸಧ್ಯಕ್ಕೆ ಸೆಲೆಕ್ಟೆಡ್ ರಾಜಕಾರಿಣಿ, ಹೆಬ್ಬಾಳ ಕ್ಷೇತ್ರದಲ್ಲಿ ಜನರಿಂದ ತಿರಸ್ಕೃತರಾಗಿದ್ದ ತಾವು ಒಮ್ಮೆಯಾದರೂ ಎಲೆಕ್ಟೆಡ್ ರಾಜಕಾರಿಣಿಯಾಗಿ, ನಂತರ ನನ್ನ ಬಗ್ಗೆ ಮಾತನಾಡುವಿರಂತೆ ಎಂದಿದ್ದಾರೆ.
ಅಂದಹಾಗೆ, ನಿಮ್ಮ ರಾಜೀನಾಮೆ ಮತ್ತು ರಾಜಕೀಯ ನಿವೃತ್ತಿಯ ಪ್ರತಿಜ್ಞೆಯೊಂದು ಕಾರ್ಯಗತವಾಗದೆ ಉಳಿದುಕೊಂಡಿದೆ, ಆಡಿದ ಮಾತನ್ನು ಉಳಿಸಿಕೊಳ್ಳುವುದೇ ನಿಜವಾದ ದಲಿತತ್ವ, ರಾಜೀನಾಮೆ ಕೊಟ್ಟು ನಿಮ್ಮ ದಲಿತತ್ವವನ್ನು ಉಳಿಸಿಕೊಳ್ಳುವುದು ಯಾವಾಗ? ಈಗಾಗಲೇ ತುಂಬಾ ತಡವಾಗಿದೆ. ರಾಜೀನಾಮೆ ಮಾತ್ರ ಕೊಡಿ ಸಾಕು, ರಾಜಕೀಯ ನಿವೃತ್ತಿ ಘೋಷಿಸಬೇಕಿಲ್ಲ, ನನ್ನ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರೆ ಸಾಕು ರಾಜಕೀಯ ನಿವೃತ್ತಿಯು ನಿಮಗೆ ಅನಿವಾರ್ಯವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.