ADVERTISEMENT

‘ಎಸ್‌ಐ ಅಕ್ರಮ; ಸರ್ಕಾರದ ರಕ್ಷಣಾತ್ಮಕ ಆಟ: ಪ್ರಿಯಾಂಕ್‌ ಖರ್ಗೆ

ತನಿಖೆಯ ಪೂರ್ಣ ವರದಿ ಜನರ ಮುಂದಿಡಲು ಶಾಸಕ ಪ್ರಿಯಾಂಕ್‌ ಖರ್ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಮೇ 2022, 12:40 IST
Last Updated 14 ಮೇ 2022, 12:40 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಕಲಬುರಗಿ: ‘ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆಯಲ್ಲಿ ರಾಜ್ಯ ಸರ್ಕಾರ ರಕ್ಷಣಾತ್ಮಕ ಆಟವಾಡುತ್ತಿದೆ. ಗೃಹಮಂತ್ರಿ ತಮಗೆ ಏನು ಬೇಕೋ ಆ ಸಂಗತಿಯನ್ನು ಮಾತ್ರ ಬಹಿರಂಗ ಮಾಡಿಸುತ್ತಿದ್ದಾರೆ. ತನಿಖೆಯ ಪೂರ್ಣ ಮಾಹಿತಿಯನ್ನು ಜನರ ಮುಂದಿಡಬೇಕು’ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

‘ಸದ್ಯ ತನಿಖೆಯನ್ನು ಕಲಬುರಗಿ ಸುತ್ತಲೇ ಗಿರಕಿ ಹೊಡೆಸುತ್ತಿದ್ದಾರೆ. ಇಲ್ಲಿ ಸಿಕ್ಕವರು ಪಾತ್ರಧಾರಿಗಳು ಮಾತ್ರ, ಅಕ್ರಮದ ಸೂತ್ರಧಾರಿಗಳು ಬೆಂಗಳೂರಿನಲ್ಲೇ ಇದ್ದಾರೆ. ಸ್ವತಃ ಗೃಹಸಚಿವರು ಅವರ ರಕ್ಷಣೆಗೆ ನಿಂತಿದ್ದಾರೆ. ನೀವು ಯಾರನ್ನು ರಕ್ಷಣೆ ಮಾಡುತ್ತಿದ್ದೀರೋ ಅವರಿಂದಲೇ ನಿಮ್ಮ ರಾಜಕೀಯ ಭವಿಷ್ಯ ಹಾಳಾಗುತ್ತದೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಈ ಅಕ್ರಮದ ಬಗ್ಗೆ ಕೇಳಲಾದ ಪ್ರಶ್ನೆಗೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು ವಿಧಾನ ಪರಿಷತ್‌ನಲ್ಲಿ ಮಾರ್ಚ್‌ 10ರಂದು ಉತ್ತರ ನೀಡಿದ್ದರು. ‘ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಐವರು ಅಭ್ಯರ್ಥಿಗಳು ದೂರು ಸಲ್ಲಿಸಿದ್ದು ನಿಜ, ಈ ಬಗ್ಗೆ ಹಿರಿಯ ಅಧಿಕಾರಿಗಳ ತಂಡದಿಂದ ಪರಿಶೀಲನೆ ಮಾಡಿಸಿದ್ದೇವೆ. ಎಲ್ಲಿಯೂ ಲೋಪ ಕಂಡುಬಂದಿಲ್ಲ, ಅಭ್ಯರ್ಥಿಗಳು ಅರ್ಹತೆಗೆ ತಕ್ಕ ಅಂಕ ಪಡೆದಿದ್ದಾಗಿ ಅಧಿಕಾರಿಗಳು ವರದಿ ನೀಡಿದ್ದಾರೆ’ ಎಂದು ಜ್ಞಾನೇಂದ್ರ ಉತ್ತರಿಸಿದ್ದರು. ಆದರೆ, ಈಗ ಅದೇ ಗೃಹಸಚಿವರು ಇದರಲ್ಲಿ ಬ್ರಜ್ಮಾಂಡ ಭ್ರಷ್ಟಾಚಾರ ನಡೆದಿದೆ ಎನ್ನುತ್ತಿದ್ದಾರೆ. ಹಿರಿಯ ಅಧಿಕಾರಿಗಳ ತಂಡ ನಡೆಸಿದ ತನಿಖೆಯಲ್ಲಿ ಲೋಪ ಕಂಡುಂದಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಲೋಪ ಎಸಗಿದ ಅಧಿಕಾರಿಗಳ ಮೇಲೆ ಇನ್ನೂ ಏಕೆ ಕ್ರಮ ವಹಿಸಿಲ್ಲ?’ ಎಂದು ಪ್ರಶ್ನಿಸಿದರು.

ADVERTISEMENT

‘ಪ್ರಕರಣವನ್ನು ಸಿಐಡಿಗೆ ಒಪ್ಪಿಸಿದ ಮೇಲೆ ಹಿಂದಿನ ಎಲ್ಲ ವರದಿಗಳನ್ನೂ ನೀಡಬೇಕಿತ್ತು. ಇದೂವರೆಗೆ ನೀಡಿಲ್ಲ. ಅಧಿಕಾರಿಗಳ ಪರಿಶೀಲನಾ ವರದಿಯಲ್ಲಿ ಏನಿತ್ತು? ಸ್ವತಃ ಗೃಹಸಚಿವರೇ ಅವರನ್ನು ಏಕೆ ಇನ್ನೂ ರಕ್ಷಿಸುತ್ತಿದ್ದಾರೆ ಎಂಬುದಕ್ಕೆ ಉತ್ತರಿಸಬೇಕು’ ಎಂದರು.

‘ಒಎಂಆರ್‌ ಶೀಟ್‌ ಮರುಪರಿಶೀಲನೆಗೆ ಬಂದವರೆಷ್ಟು? ತಪ್ಪಿಸಿಕೊಂಡವರೆಷ್ಟು? ಪರೀಕ್ಷೆ ಬರೆದವರಲ್ಲಿ ಈಗಾಗಲೇ ಪೊಲೀಸ್‌ ಸೇವೆಯಲ್ಲಿ ಇರುವವರು ಎಷ್ಟು ಮಂದಿ? ಎಂದು ಇನ್ನೂ ಉತ್ತರ ನೀಡಿಲ್ಲ. ಹಗರಣದ ಆರೋಪ ಹೊತ್ತ 12 ಮಂದಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಆದರೆ, ಅವರ ಪಾತ್ರ ಏನು ಎಂದು ಸ್ಪಷ್ಟಪಡಿಸಿಲ್ಲ. ಜನರ ಕಣ್ಣಿಗೆ ಮಣ್ಣೆರೆಚಲು ತಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಅಧಿಕಾರಿಗಳಿಂದ ‘ಲೀಕ್‌’ ಮಾಡಿಸುತ್ತಿದ್ದಾರೆ’ ಎಂದೂ ಪ್ರಿಯಾಂಕ್‌ ಕಿಡಿ ಕಾರಿದರು.

‘ಪಿಎಸ್‌ಐ ನೇಮಕಾತಿ ಪರೀಕ್ಷೆ ನಂತರ, 2021ರ ಅಕ್ಟೋಬರ್‌ 23ರಂದು ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆ ನಡೆಯಿತು. ಅದರಲ್ಲಿ ಕೂಡ ಬೆಳಗಾವಿ ಹಾಗೂ ಕಲಬುರಗಿಯಲ್ಲಿ ಬ್ಲೂಟೂತ್‌ ಬಳಸಿದ ಬಗ್ಗೆ ದೂರು ದಾಖಲಾಗಿವೆ. ಅದರ ತನಿಖೆ ಎಲ್ಲಿಗೆ ಬಂತು ಎಂದು ಗೃಹಸಚಿವರು ಉತ್ತರಿಸಬೇಕು. ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿದವರೇ ಕಾನ್‌ಸ್ಟೆಬಲ್‌ ಪರೀಕ್ಷೆಯಲ್ಲೂ ಭಾಗಿಯಾದ ಶಂಕೆ ಇದೆ. ಸರ್ಕಾರವೇ ತಮ್ಮ ರಕ್ಷಣೆಗೆ ನಿಂತಿದೆ ಎಂಬ ಹುಂಬ ಧೈರ್ಯವೇ ಇದಕ್ಕೆ ಕಾರಣ’ ಎಂದರು.

‘ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳನ್ನೂ ಮರುಪರಿಶೀಲಿಸಬೇಕು, ಸಿಸಿಟಿವಿ ಕ್ಯಾಮೆರಾ ದಾಖಲೆಗಳನ್ನು ಸಂಗ್ರಹಿಸಬೇಕು, ಇದರಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆ ಆಗಬೇಕು. ಅಲ್ಲಿಯವರೆಗೂ ನಾನು ಪ್ರಶ್ನೆ ಮಾಡುತ್ತಲೇ ಇರುತ್ತೇನೆ. ನೀವು ನೋಟಿಸ್‌ ಕೊಟ್ಟು ನನ್ನ ಬಾಯಿ ಮುಚ್ಚಿಸಲು ಆಗುವುದಿಲ್ಲ’ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ‌ ಹೊನಗುಂಟಿ, ಮುಖಂಡರಾದಅಲ್ಲಮಪ್ರಭು ಪಾಟೀಲ, ರಾಜೀವ್ ಜಾನೆ, ಪ್ರವೀಣ ಹರವಾಳ, ಡಾ.ಕಿರಣ್ ದೇಶಮುಖ ಇದ್ದರು.

ವೆಬ್‌ಸೈಟ್‌ ನಿಷ್ಕ್ರಿಯ ಮಾಡಿದ್ದೇಕೆ?

ಪೊಲೀಸ್‌ ನೇಮಕಾತಿಯ ಎಲ್ಲ ಪರೀಕ್ಷೆಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಅಪ್ಡೇಟ್‌ ಮಾಡಲಾಗುತ್ತಿತ್ತು. ಆದರೆ, ಫೆಬ್ರುವರಿಯಿಂದ ಈ ವೆಬ್‌ಸೈಟ್‌ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಕಾರಣವೇನು? ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

ತಾತ್ಕಾಲಿಕ ಆಯ್ಕೆ‍ಪಟ್ಟಿಯಲ್ಲಿ ಬಂದ ಎಲ್ಲರ ಒಎಂಆರ್‌ ಶೀಟ್‌ಗಳನ್ನೂ ಇದರಲ್ಲಿ ಅಪ್ಲೋಡ್‌ ಮಾಡಬೇಕಿತ್ತು, ಏಕೆ ಮಾಡಿಲ್ಲ? ಕಳೆದ ನಾಲ್ಕು ವರ್ಷಗಳಿಂದ ನಡೆದ ಯಾವುದೇ ನೇಮಕಾತಿಯ ಬಗ್ಗೆಯೂ ಇದರಲ್ಲಿ ವಿವರಣೆ ಇಲ್ಲ. ಮುಚ್ಚಿಡಲು ಕಾರಣವೇನು?’ ಎಂದೂ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.