ADVERTISEMENT

ಸಾರ್ವಕರ್‌ ಮಾತಿನಂತೆ ಬಿಜೆಪಿಗರು ಗೋಪೂಜೆ ನಿಲ್ಲಿಸುತ್ತಾರೆಯೇ: ಪ್ರಿಯಾಂಕ್‌ ಖರ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಸೆಪ್ಟೆಂಬರ್ 2022, 15:53 IST
Last Updated 1 ಸೆಪ್ಟೆಂಬರ್ 2022, 15:53 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ವಿ.ಡಿ.ಸಾವರ್ಕರ್‌ ಅವರೊಬ್ಬ ವಿಚಾರವಾದಿ ಎಂಬುದು ಬಿಜೆಪಿಯ ಹೆಚ್ಚಿನವರಿಗೆ ತಿಳಿದಿಲ್ಲ ಎಂದಿರುವ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ, ಗೋಪೂಜೆಗೆ ಸಂಬಂಧಿಸಿದ ಅವರ ಮಾತುಗಳಿಗೆ ಬಿಜೆಪಿ ಬದ್ಧವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಗೋಪೂಜೆಯನ್ನು ಸಾವರ್ಕರ್‌ ವಿರೋಧಿಸಿದ್ದರ ಬಗ್ಗೆ ಸರಣಿ ಟ್ವೀಟ್‌ ಮಾಡಿದ್ದಾರೆ.

ಬಿಜೆಪಿ ತುಂಬ ಗೊಂದಲದಲ್ಲಿದೆ. ವಿ.ಡಿ. ಸಾವರ್ಕರ್‌ ಅವರನ್ನು 'ಹಿಂದುತ್ವದ ಪಿತಾಮಹ' ಎಂದು ಗೌರವಿಸುತ್ತಿದೆ. ಆದರೆ ಹೆಚ್ಚಿನವರಿಗೆ ಅವರೊಬ್ಬ ವಿಚಾರವಾದಿ ಎಂಬುದು ತಿಳಿದಿಲ್ಲ. ಅವರು ಗೋವನ್ನು ಪೂಜಿಸುವುದರ ಕಟ್ಟಾ ವಿರೋಧಿಯಾಗಿದ್ದರು. ಇಂತಹ ಮೂಢ ಪದ್ಧತಿಯನ್ನು ನಿಷೇಧಿಸಬೇಕು ಎಂದು ಬಯಸಿದ್ದರು. ಗೋಮೂತ್ರ ಸೇವನೆ ಅಸಹ್ಯಕರವೆಂದಿದ್ದರು ಎಂದು ಪ್ರಿಯಾಂಕ್‌ ಖರ್ಗೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಗೋವು ಪ್ರತಿಯೊಬ್ಬರಿಗೂ ತಾಯಿ ಎಂದಾದರೆ ಅದು ಎತ್ತುಗಳಿಗೆ, ಹಿಂದೂಗಳಿಗೆ ಅಲ್ಲ. ಹಿಂದುತ್ವವು ಆಧಾರವಾಗಿ ಗೋವುಗಳ ಕಾಲುಗಳ ಮೇಲೆ ನಿಲ್ಲುತ್ತದೆ ಎಂದಾದರೆ ಸಣ್ಣ ಬಿಕ್ಕಟ್ಟು ಎದುರಾದರೂ ಕುಸಿಯುತ್ತದೆ ಎಂದು ಮರಾಠಿಯ ಕಿರ್ಲೋಸ್ಕರ್‌ ಪತ್ರಿಕೆಯಲ್ಲಿ ಸಾವರ್ಕರ್‌ ಬರೆದಿದ್ದರು ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ADVERTISEMENT

ಗೋಮಾತೆ ಬಗೆಗಿನ ತಮ್ಮ ಹೇಳಿಕೆಗಳನ್ನು ಧರ್ಮನಿಂದನೆಯೆಂದು ಆಪಾದಿಸಿದವರಿಗೆ, 'ನೋಡಿ, ನಿಮ್ಮ 33 ಕೋಟಿ ದೇವತೆಗಳು ಗೋವಿನ ಹೊಟ್ಟೆಯಲ್ಲಿ ಹೇಗೆ ಸೇರಿಕೊಂಡಿವೆ' ಎಂದು ಸಾವರ್ಕರ್‌ ಪ್ರತಿಕ್ರಿಯಿಸಿದ್ದರು ಎಂದು ಪ್ರಿಯಾಂಕ್‌ ಖರ್ಗೆ ಉಲ್ಲೇಖಿಸಿದ್ದಾರೆ.

ಹಿಂದುತ್ವದ ಸಂಕೇತ ಗೋವು ಅಲ್ಲ, ನರಸಿಂಹ. ದೇವರ ಗುಣಗಳು ಭಕ್ತರಿಗೆ ವ್ಯಾಪಿಸುತ್ತವೆ. ಹೀಗಿರುವಾಗ ಗೋವನ್ನು ಪವಿತ್ರ ಮತ್ತು ಪೂಜಾರ್ಹವೆಂದು ನಿರ್ಧರಿಸಿದರೆ ಸಂಪೂರ್ಣ ಹಿಂದೂ ರಾಷ್ಟ್ರವು ಗೋವಿನಂತೆ ವಿಧೇಯವಾಗುತ್ತದೆ. ಅದು ಹುಲ್ಲನ್ನು ಮೇಯಲು ಆರಂಭಿಸುತ್ತದೆ ಎಂದು ಸಾವರ್ಕರ್‌ ಹೇಳಿದ್ದರು ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಸಾವರ್ಕರ್‌ ಅವರು ಗೋಮಾತೆಯನ್ನು ಪೂಜಿಸುವುದನ್ನು ವಿರೋಧಿಸುತ್ತಿದ್ದರು. ಬಿಜೆಪಿ ಅವರ ಪ್ರಕಾರ ಸಾವರ್ಕರ್‌ ಅವರು ಹಿಂದುತ್ವದ ಪಿತಾಮಹ ಎಂದಾದರೆ ಗೋಮಾತೆಯನ್ನು ಪೂಜಿಸುವುದನ್ನು ನಿಲ್ಲಿಸುತ್ತಾರೆಯೇ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂತೆಗೆದುಕೊಳ್ಳುತ್ತಾರೆಯೇ? ಅಥವಾ ಅವರ ಸಲಹೆಗಳನ್ನು ಒಪ್ಪಿ ಆರ್ಥಿಕ ಚಟುವಟಿಕೆಗಳಿಗೆ ಉಪಯುಕ್ತ ಪ್ರಾಣಿ ಎಂದು ನಿರ್ಧರಿಸುತ್ತಾರೆಯೇ? ಎಂದು ಪ್ರಿಯಾಂಕ್‌ ಖರ್ಗೆ ಬಿಜೆಪಿಗೆ ಸವಾಲು ಒಡ್ಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.