ADVERTISEMENT

ಸಚಿವರಿಗೂ ನೋಟಿಸ್‌ ನೀಡಿದ್ದೀರಾ: ಪ್ರಿಯಾಂಕ್‌ ಪ್ರಶ್ನೆ

ರಾಜಕೀಯ ‘ಬಾಸ್’ ಪ್ರಭಾವದಿಂದ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 6 ಮೇ 2022, 16:31 IST
Last Updated 6 ಮೇ 2022, 16:31 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ‘ಪಿಎಸ್‌ಐ ಅಕ್ರಮದ ವಿಚಾರದಲ್ಲಿ ಸಚಿವರು, ಬಿಜೆಪಿ ಶಾಸಕರಿಗೂ ಸಿಐಡಿ ಪೊಲೀಸರು ನೋಟಿಸ್‌ ನೀಡಿ ವಿಚಾರಣೆಗೆ ಕರೆದಿದ್ದಾರೆಯೇ’ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಪ್ರಶ್ನಿಸಿದ್ದಾರೆ.

ಈ ಸಂಬಂಧ ಸಿಐಡಿ ಪೊಲೀಸರ ಮೂರನೇ ನೋಟಿಸ್‌ಗೆ ಗುರುವಾರ ಲಿಖಿತ ಉತ್ತರ ನೀಡಿರುವ ಅವರು, ಗೃಹ ಸಚಿವರಿಗೆ ಪ್ರತ್ಯೇಕ ಪತ್ರವನ್ನೂ ಬರೆದಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ಎರಡೂ ಪತ್ರಗಳನ್ನು ಬಿಡುಗಡೆ ಮಾಡಿದರು.

‘ನೋಟಿಸ್‌ಗೆ ವಕೀಲರ ಮೂಲಕ ಉತ್ತರ ಕಳುಹಿಸಿದ್ದೇನೆ. ತನಿಖಾಧಿಕಾರಿ ಎದುರು ಹಾಜರಾಗುವ ಪ್ರಶ್ನೆಯೇ ಇಲ್ಲ’ ಎಂದರು.

ADVERTISEMENT

‘ಅಕ್ರಮ ನಡೆದಿದೆ ಎಂದು ಆರೋಪಿಸಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಫೆ.2ರಂದು ಪತ್ರ ಬರೆದಿದ್ದರು. ಬಿಜೆಪಿ ಸದಸ್ಯ ಎಸ್‌.ವಿ. ಸಂಕನೂರ ಮಾರ್ಚ್‌ 3ರಂದು ವಿಧಾನ ಪರಿಷತ್‌ನಲ್ಲಿ ಪ್ರಶ್ನೆ ಕೇಳಿದ್ದರು. ಪರಿಷತ್‌ನ ಬಿಜೆಪಿ ಸದಸ್ಯ ಶಶೀಲ್‌ ಜಿ.ನಮೋಶಿ ಇದೇ ವಿಚಾರದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಜತೆ ಚರ್ಚಿಸಿರುವುದಾಗಿ ಟ್ವೀಟ್‌ ಮಾಡಿದ್ದರು.ಈ ಎಲ್ಲರಿಗೂ ನೋಟಿಸ್‌ ನೀಡಲಾ
ಗಿದೆಯೆ’ ಎಂದು ಕೇಳಿದ್ದಾರೆ.

ಸಿಐಡಿ ಡಿಜಿಪಿಗೆ ಏಳು ಪುಟಗಳ ಪತ್ರ ಬರೆದಿರುವ ಪ್ರಿಯಾಂಕ್‌, ‘ತನಿಖಾಧಿಕಾರಿಗಳು ಅವರ ರಾಜಕೀಯ ‘ಬಾಸ್‌’ಗಳ ಪ್ರಭಾವಕ್ಕೆ ಮಣಿದು ನೋಟಿಸ್‌ ನೀಡಿದ್ದಾರೆ. ಸರ್ಕಾರದ ವಿರುದ್ಧ ಪತ್ರಿಕಾಗೋಷ್ಠಿ ನಡೆಸದಂತೆ ತಡೆಯಲು ಹೀಗೆ ಮಾಡಿದ್ದಾರೆ’ ಎಂದು ದೂರಿದ್ದಾರೆ. ‘ಆಡಿಯೊ ತುಣುಕಿನ ಸತ್ಯಾಸತ್ಯತೆ ಬಗ್ಗೆ ನೋಟಿಸ್‌ನಲ್ಲಿ ಸಿಐಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ನಾನು ಹೇಳಿದ್ದನ್ನು ನಂಬುವುದಾದರೆ ಪ್ರಕರಣದಲ್ಲಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನೂ ಬಂಧಿಸಬೇಕಲ್ಲವೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.