ADVERTISEMENT

ಪ್ರಜಾವಾಣಿ ದೀಪಾವಳಿ ವಿಶೇಷಾಂಕ: ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2023, 19:12 IST
Last Updated 3 ಡಿಸೆಂಬರ್ 2023, 19:12 IST
<div class="paragraphs"><p>ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ&nbsp; ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕ–2023ರ ಕಥೆ ಹಾಗೂ ಕಾವ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.</p></div>

ಧಾರವಾಡದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕ–2023ರ ಕಥೆ ಹಾಗೂ ಕಾವ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

   

–ಪ್ರಜಾವಾಣಿ ಚಿತ್ರ

ಧಾರವಾಡ: ‘ಬಹುಮಾನ ದೊಡ್ಡದಲ್ಲ. ಶಾಶ್ವತ ಹಾಗೂ ಸ್ಥಿರವಾದದ್ದೂ ಅಲ್ಲ. ಆದರೆ, ನಿಮ್ಮ ಕಥೆ, ಕವನದ ಓದುಗರ ಬಳಗವು ಕೊಡುವಂತಹ ಪ್ರಶಸ್ತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹೀಗಾಗಿ ಬರವಣಿಗೆಯನ್ನು ನಿಲ್ಲಿಸಬಾರದು. ರಚನಾತ್ಮಕ, ಕ್ರಿಯಾತ್ಮಕವಾದ ಬರಹವನ್ನು ಮುಂದುವರಿಸಬೇಕು’ ಎಂದು ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಸಲಹೆ ನೀಡಿದರು. 

ADVERTISEMENT

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕ–2023ರ ಕಥೆ ಹಾಗೂ ಕಾವ್ಯ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಿ ಅವರು ಮಾತನಾಡಿದರು. 

‘ಬಹುಮಾನಗಳು ಎಂದಿಗೂ ನಿಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಹೊಸ ವಿಷಯಗಳ ಕುರಿತು ನಿರಂತರವಾಗಿ ಬರೆಯುತ್ತಲೇ ಇರಬೇಕು. ಬರಹಗಾರನು ಋಷಿ ಮನಸ್ಥಿತಿಯನ್ನು ಹೊಂದಿರಬೇಕು. ಆಗ ಸಹಜವಾಗಿಯೇ ಉತ್ತಮ ಕಥೆ, ಕವನ ರೂಪುಗೊಳ್ಳುತ್ತವೆ. ಕಥೆ, ಕವನ, ಬರಹ ರಚಿತವಾದ ನಂತರ ಬರೆದವರು ತನ್ನ ಕೃತಿಗೆ ಸ್ವತಃ ತಾನೇ ಓದುಗ, ವಿಮರ್ಶಕನಾಗಬೇಕು. ಆಗ ಮಾತ್ರ ಇನ್ನೂ ಉತ್ತಮವಾದ ಬರಹಗಳು ರೂಪುಗೊಳ್ಳಲು ಸಾಧ್ಯವಾಗುತ್ತವೆ’ ಎಂದು ಸ್ಪರ್ಧಾ ವಿಜೇತರಿಗೆ ಕಿವಿಮಾತು ಹೇಳಿದರು. 

‘ಯಾವುದೇ ಕಥೆ, ಕವನ ಬರೆದ ನಂತರ ಸಾಧ್ಯವಾದರೆ ಸ್ನೇಹಿತರ ಬಳಗದೊಂದಿಗೆ ಚರ್ಚಿಸಿ, ಅವರ ಮಾತುಗಳನ್ನೂ ಆಲಿಸಿ. ಅದು ಕ್ರಿಯಾತ್ಮಕ ಬರಹಕ್ಕೆ ನೆರವಾಗಲಿದೆ. ನಮ್ಮ ಕೃತಿಗಳಿಗೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವಂತಿರಬೇಕು’ ಎಂದರು. 

‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕದ ಸ್ಪರ್ಧೆಯಲ್ಲಿ ಬಹುಮಾನ ದೊರೆಯುವುದೇ ದೊಡ್ಡ ಗೌರವ. ಈ ಗೌರವ ಸಿಕ್ಕ ನಂತರ ಮತ್ತೊಮ್ಮೆ ನೀವು ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು. ಕಾಲಕ್ಕೆ ಅನುಗುಣವಾಗಿ ಮತ್ತಷ್ಟು ಉತ್ತಮ ಕಥೆ, ಕವನಗಳ ರಚನೆಯತ್ತ ಗಮನಹರಿಸಬೇಕು’ ಎಂದು ಸಲಹೆ ನೀಡಿದರು. 

ಬಹುಮಾನ ವಿತರಣೆ: ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕ–2023ರ ಕಥಾ ಸ್ಪರ್ಧೆಯಲ್ಲಿ ಸಂಪತ್‌ ಸಿರಿಮನೆ ಅವರ ಕಥೆ ‘ಪತನ’ ಕೃತಿಗೆ ಪ್ರಥಮ ಬಹುಮಾನ, ಸಿದ್ದು ಸತ್ಯಣ್ಣವರ ಅವರ ‘ಒಂದು ತೇಗದ ಖುರ್ಚಿ’ ದ್ವಿತೀಯ ಹಾಗೂ ಬಸವಣ್ಣೆಪ್ಪ ಕಂಬಾರ ಅವರ ‘ಚಂದ್ರಾಮ ಕನ್ನಡಿ ಹರಳ’ ಕಥೆಗೆ ತೃತೀಯ ಬಹುಮಾನ ನೀಡಲಾಯಿತು. 

ಕವನ ಸ್ಪರ್ಧೆ: ಲಕ್ಷ್ಮಣ ವಿ.ಎ. ಅವರ ಕವನ ‘ಬಾಲೆ, ಬೆತ್ತಲೆ ಬೊಂಬೆ ಮತ್ತು ಕಡಲು’ (ಪ್ರಥಮ), ಮೆಹಬೂಬ ಮುಲ್ತಾನಿ ಅವರ ‘ಮತ್ತೊಂದು ನರಕ’ (ದ್ವಿತೀಯ), ಹೇಮಾ ಅವರ ‘ಬೆಟ್ಟದೂರು ಮತ್ತು ನಾನು’ ಕವನಕ್ಕೆ (ತೃತೀಯ) ಬಹುಮಾನ ನೀಡಲಾಯಿತು. 

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಶಿವರಾಂ ಭಾಗ್ವತ್ ಕನಕನಹಳ್ಳಿ ಮತ್ತು ಸಂಗಡಿಗರು ‘ಗಾನಲಹರಿ’ ಕಾರ್ಯಕ್ರಮ ನಡೆಸಿಕೊಟ್ಟರು. 

‘ಪ್ರಜಾವಾಣಿ’ ಏರ್ಪಡಿಸುವ ಕಥಾ ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲಬೇಕು ಎನ್ನುವುದು ಎಲ್ಲ ಬರಹಗಾರರ ಕನಸಾಗಿರುತ್ತದೆ. ನನಗೆ ಈ ಅವಕಾಶ ಸಿಕ್ಕಿದ್ದು ಖುಷಿ ಕೊಟ್ಟಿದೆ. ಬರಹಗಾರರಿಗೆ ಇಂತಹ ಸ್ಪರ್ಧೆಗಳು ಅನುಕೂಲಕರ. ಈ ಪ್ರಶಸ್ತಿಯು ನನ್ನಲ್ಲಿ ಹುಮ್ಮಸ್ಸು ಮತ್ತು ಜವಾಬ್ದಾರಿ ಹೆಚ್ಚಿಸಿದೆ
–ಸಂಪತ್ ಸಿರಿಮನೆ ಕಥಾಸ್ಪರ್ಧೆಯ ಪ್ರಥಮ ಬಹುಮಾನ ವಿಜೇತರು
 ‘ಪ್ರಜಾವಾಣಿ’ ಏರ್ಪಡಿಸುವ ಕವನ ಸ್ಪರ್ಧೆಯಲ್ಲಿ ಪ್ರಶಸ್ತಿ ಸಿಕ್ಕರೆ ಅದು ನೊಬೆಲ್ ಪ್ರಶಸ್ತಿ ಸಿಕ್ಕಷ್ಟೇ ಖುಷಿ. ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ‘ಪ್ರಜಾವಾಣಿ’ ಮಾಡುತ್ತಿದೆ. ನಾನು ಕಲಿತ ಊರಿನಲ್ಲೇ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ.
–ಲಕ್ಷ್ಮಣ ವಿ.ಎ. ಕವನ ಸ್ಪರ್ಧೆಯ ಪ್ರಥಮ ಬಹುಮಾನ ವಿಜೇತರು
ಚಾಟ್‌ ಜಿಪಿಟಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ
ಸಾಹಿತ್ಯ ಕ್ಷೇತ್ರವು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ವೇಗವಾಗಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಂತರ್‌ಜಾಲದಲ್ಲಿ ‘ಚಾಟ್‌ ಜಿಪಿಟಿ’ ತಂತ್ರಜ್ಞಾನ ಹೆಚ್ಚು ಸದ್ದು ಮಾಡುತ್ತಿದೆ. ಇದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವಾಗಿದೆ. ಯಾವುದೇ ಬರಹವನ್ನು ಹಿಗ್ಗಿಸುವುದು ಸರಳ ಮಾಡುವಲ್ಲಿ ಹೆಚ್ಚು ಉಪಯುಕ್ತವಾಗಿದೆ. ಹೀಗಾಗಿ ಸಾಹಿತ್ಯ ಕ್ಷೇತ್ರವು ವಿಜ್ಞಾನ ತಂತ್ರಜ್ಞಾನದ ಜೊತೆ ಹೆಚ್ಚು ಬೆರೆತುಕೊಂಡಿದೆ’ ಎಂದು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯ ನಿವೃತ್ತ ನಿರ್ದೇಶಕ ಪ್ರೊ.ಎಸ್‌.ಎಂ.ಶಿವಪ್ರಸಾದ ಹೇಳಿದರು.  ‘ಸಾಹಿತ್ಯ ಸಂಗೀತ ಹಾಗೂ ವಿಜ್ಞಾನ ಕ್ಷೇತ್ರ ಪರಸ್ಪರ ಪೂರಕ. ಸಾಹಿತ್ಯ ಮನ ಮುಟ್ಟುತ್ತದೆ. ವಿಜ್ಞಾನ ತಲೆಯೊಳಗೆ ಸೇರುತ್ತದೆ. ತಲೆ ಹಾಗೂ ಮನವನ್ನು ಮುಟ್ಟುವಂತಹ ಸಾಹಿತ್ಯ ಕೃತಿಗಳು ಇನ್ನೂ ಹೆಚ್ಚು ರಚನೆಯಾಗಬೇಕು’ ಎಂದು ಸಲಹೆ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.