ಪ್ರೊ.ಬಿ.ಕೆ.ಚಂದ್ರಶೇಖರ್
ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಬಿಜೆಪಿಯ ಎನ್.ರವಿಕುಮಾರ್ ಅವರು ಕಲಬುರ್ಗಿ ಜಿಲ್ಲಾಧಿಕಾರಿ ಕುರಿತು ಆಡಿರುವ ಮಾತು ಆಕ್ಷೇಪಾರ್ಹ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅವರು ಕ್ಷಮೆ ಕೇಳಬೇಕು’ ಎಂದು ಕಾಂಗ್ರೆಸ್‌ನ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು, ‘ಕಲಬುರ್ಗಿ ಜಿಲ್ಲಾಧಿಕಾರಿ ಅವರು ಪಾಕಿಸ್ತಾನದಿಂದ ಬಂದವರಂತೆ ಕಾಣಿಸುತ್ತಾ ಇದೆ’ ಎಂದಿದ್ದನ್ನು ಖಂಡಿಸಿ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
‘ಬಿಜೆಪಿ ನಾಯಕರ ಮಾತುಗಳ ಬಗ್ಗೆ ನಾನು ಸಾಮಾನ್ಯವಾಗಿ ಪ್ರತಿಕ್ರಿಯಿಸುವುದಿಲ್ಲ. ಆದರೆ ಈ ಮಾತು ಅತ್ಯಂತ ಕೀಳು ಅಭಿರುಚಿಯದ್ದು. ಇವರೆಲ್ಲಾ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ತಮ್ಮ ಪಕ್ಷದ ಅಧಿಕೃತ ನಾಯಕರಾಗಿದ್ದಾರೆ. ಈ ಪಕ್ಷದ ಕೆಲ ನಾಯಕರು ಈ ಹಿಂದೆ ನ್ಯಾಯಾಲಯಗಳು ಮತ್ತು ಅವುಗಳ ತೀರ್ಪಿನ ವಿರುದ್ಧವೂ ಮಾತನಾಡಿದ್ದಾರೆ’ ಎಂದಿದ್ದಾರೆ.
‘ಇಂತಹ ಮಾತುಗಳನ್ನು ಆಡುವ ಇವರು ನಂತರ, ‘ನಮ್ಮಿಂದ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇವೆ’ ಎನ್ನುವ ಸುಲಭದ ದಾರಿ ಕಂಡುಕೊಂಡಿದ್ದಾರೆ. ಎನ್.ರವಿಕುಮಾರ್ ಅವರು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಐಎಎಸ್ ಅಧಿಕಾರಿಗಳ ಸಂಘದ ಬೇಡಿಕೆಯನ್ನು ನಾನು ಬೆಂಬಲಿಸುತ್ತೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.