ADVERTISEMENT

ಆಸ್ತಿ ನೋಂದಣಿ ಪೋರ್ಟಲ್‌: 17 ಗಂಟೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 16:22 IST
Last Updated 29 ಸೆಪ್ಟೆಂಬರ್ 2023, 16:22 IST

ಬೆಂಗಳೂರು: ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಗಳು ಅ.1ರಿಂದ ಜಾರಿಯಾಗುತ್ತಿದ್ದು, ಹಳೆಯ ದರಗಳಲ್ಲಿ ನಡೆಯುತ್ತಿದ್ದ ನೋಂದಣಿ ಪ್ರಕ್ರಿಯೆ ಸೆ.30ರ ಮಧ್ಯಾಹ್ನ 12ಕ್ಕೆ ಕೊನೆಗೊಳ್ಳಲಿದೆ.  

ಹೊಸದಾಗಿ ಸಿದ್ಧಪಡಿಸಿರುವ ಮಾನದಂಡಗಳ ಆಧಾರದಲ್ಲಿ ಶೇ 5ರಿಂದ ಶೇ 70ರವರೆಗೂ ಸ್ಥಿರಾಸ್ತಿಗಳ ಮೌಲ್ಯದಲ್ಲಿ ಹೆಚ್ಚಳವಾಗುತ್ತಿದ್ದು, ಹೊಸ ದರಕ್ಕೆ ವ್ಯವಸ್ಥೆ ಬದಲಾವಣೆಗೊಳ್ಳಬೇಕಿರುವ ಕಾರಣ ಸೆ.30ರಂದು ಮಧ್ಯಾಹ್ನ 12ಕ್ಕೆ ಪೋರ್ಟಲ್‌ ಸ್ಥಗಿತಗೊಳ್ಳಲಿದೆ. ಮತ್ತೆ ಅ.1ರಂದು ಬೆಳಿಗ್ಗೆ 5ರಿಂದ ಆರಂಭವಾಗಲಿದೆ. 17 ಗಂಟೆಗಳ ಈ ಅವಧಿಯಲ್ಲಿ ನೋಂದಣಿಯ ಯಾವುದೇ ಹೊಸ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿಲ್ಲ.

ಈಗಾಗಲೇ ಉಪ ನೋಂದಣಾಧಿಕಾರಿ ಪರಿಶೀಲನೆ ಮಾಡಿದ ಎಲ್ಲ ಅರ್ಜಿಗಳ ಪಾವತಿಯನ್ನೂ ಗ್ರಾಹಕರು  ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಅರ್ಜಿಯನ್ನು ಮರು ಮೌಲ್ಯಮಾಪನಕ್ಕಾಗಿ ಉಪ ನೋಂದಣಾಧಿಕಾರಿಗೆ ಹಿಂದಿರುಗಿಸಲಾಗುತ್ತದೆ. ಹಳೇ ದರ ಪಾವತಿಸಿದವರು, ಹೊಸ ದರದ ವ್ಯತ್ಯಾಸದ ಮೊತ್ತವನ್ನು ಮತ್ತೊಮ್ಮೆ ತುಂಬಬೇಕು. ಸೆ.30ರ ನಂತರ ನೋಂದಾಯಿಸುವ ಯಾವುದೇ ದಾಸ್ತಾವೇಜುಗಳಿಗೆ ಹೊಸ ಮಾರ್ಗಸೂಚಿ ದರ ಅನ್ವಯವಾಗುತ್ತದೆ ಎಂದು ನೋಂದಣಿ ಮಹಾಪರಿವೀಕ್ಷಕಿ ಮತ್ತು ಮುದ್ರಾಂಕಗಳ ಆಯುಕ್ತೆ ಬಿ.ಆರ್.ಮಮತಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.