ADVERTISEMENT

350 ನಿವೇಶನ ನೋಂದಣಿಯಲ್ಲಿ ಅಕ್ರಮ; 20 ಸಬ್ ರಿಜಿಸ್ಟ್ರಾರ್‌ ಭಾಗಿ

* ‘ತಂತ್ರಾಂಶ’ ತಿರುಚಿ ಕಂದಾಯ ನಿವೇಶನ ನೋಂದಣಿ * ಭಾರಿ ಲಂಚದ ವ್ಯವಹಾರ ಶಂಕೆ

ರಾಜೇಶ್ ರೈ ಚಟ್ಲ
Published 24 ಅಕ್ಟೋಬರ್ 2019, 18:30 IST
Last Updated 24 ಅಕ್ಟೋಬರ್ 2019, 18:30 IST
ಡಾ.ಕೆ.ವಿ.ತ್ರಿಲೋಕಚಂದ್ರ
ಡಾ.ಕೆ.ವಿ.ತ್ರಿಲೋಕಚಂದ್ರ   

ಬೆಂಗಳೂರು: ರಾಜ್ಯದ ವಿವಿಧೆಡೆ 350ಕ್ಕೂ ಹೆಚ್ಚು ಕಂದಾಯ ನಿವೇಶನಗಳನ್ನು ನಿಯಮ ಉಲ್ಲಂಘಿಸಿ ಸೇಲ್ ಅಗ್ರಿಮೆಂಟ್ ಮೇಲೆ ಖರೀದಿದಾರರಿಗೆ ನೋಂದಣಿ ಮಾಡಿರುವ ಪ್ರಕರಣಗಳನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪತ್ತೆ ಹಚ್ಚಿದೆ.

ತಂತ್ರಾಂಶದಲ್ಲಿ ದತ್ತಾಂಶ ತಿರುಚುವ ಮೂಲಕ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ನಡೆದ ಈ ಕಾನೂನುಬಾಹಿರ ಪ್ರಕ್ರಿಯೆಯಲ್ಲಿ ಕೋಟ್ಯಂತರ ಮೊತ್ತದ ಲಂಚ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 20ಕ್ಕೂ ಹೆಚ್ಚು ಉಪ ನೋಂದಣಾಧಿಕಾರಿಗಳ ವಿರುದ್ಧ ಇಲಾಖೆ ಆಂತರಿಕ ವಿಚಾರಣೆ ಆರಂಭಿಸಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆಯ ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ, ಪ್ರಕರಣ ನಡೆದ ಸಬ್‌ ರಿಜಿಸ್ಟ್ರಾರ್‌ ಕಚೇರಿ ಮತ್ತು ಕಂಪ್ಯೂಟರ್‌ಗಳ ಐಪಿ ಸಂಖ್ಯೆಯ ಮಾಹಿತಿ ಸಹಿತ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಐ.ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ADVERTISEMENT

ಈ ಬಗ್ಗೆ ವಿವರಿಸಿದ ತ್ರಿಲೋಕಚಂದ್ರ, ‘ಕಳೆದ ಡಿಸೆಂಬರ್‌ ತಿಂಗಳಲ್ಲಿ ಬಿಟಿಎಂ ಲೇಔಟ್‌ನಲ್ಲಿ ನಿವೇಶನವೊಂದರ ನೋಂದಣಿಗೆ ಸಂಬಂಧಿಸಿ ಬಂದ ದೂರೊಂದನ್ನು ಪರಿಶೀಲಿಸಿದಾಗ, ಅನಧಿಕೃತ ಬಡಾವಣೆಗಳಲ್ಲಿರುವ ನಿವೇಶನಗಳನ್ನು ಸೇಲ್ ಅಗ್ರಿಮೆಂಟ್ ಆಧಾರದಲ್ಲಿ ನೋಂದಣಿ ಮಾಡಿದ ಪ್ರಕರಣ ಗಮನಕ್ಕೆ ಬಂತು. ತಂತ್ರಾಂಶದಲ್ಲಿ ತಿದ್ದುಪಡಿ ಮಾಡಿ ನಡೆಸಿರುವ ಈ ಅಕ್ರಮ ಪತ್ತೆಗೆ ಅಧಿಕಾರಿಗಳ ಮೂರು ತಂಡಗಳನ್ನು ರಚಿಸಲಾಗಿತ್ತು. ಅಲ್ಲದೆ, ಇಲಾಖೆಗೆ ‘ಕಾವೇರಿ’ ತಂತ್ರಾಂಶವನ್ನು ಪೂರೈಸಿದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ (ಸಿಡಾಕ್) ನೆರವು ಪಡೆಯಲಾಯಿತು’ ಎಂದರು.‌‌

‘ನಿವೇಶನ ನೋಂದಣಿಗೆ ಸಂಬಂಧಿಸಿದ ಈ ಸೇವೆಗಳನ್ನು ಜನರಿಗೆ ಸುಲಭವಾಗಿ ತಲುಪಿಸಲು ಇಲಾಖೆ ‘ಕಾವೇರಿ’ ಆನ್‌ಲೈನ್‌ ಸೇವೆಗಳನ್ನು ಅಭಿವೃದ್ಧಿಪಡಿಸಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ‘ಇ-ಸ್ವತ್ತು’ ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ‌‌ವಿತರಿಸುತ್ತದೆ. ‘ಕಾವೇರಿ’ ಮತ್ತು ‘ಇ– ಸ್ವತ್ತು’ ತಂತ್ರಾಂಶಗಳನ್ನು ಸಂಯೋಜಿಸಲಾಗಿದೆ. ಆದರೆ, ಉಪ ನೋಂದಣಾಧಿಕಾರಿಗಳು ಈ ಸಂಯೋಜನಾ ಪದ್ಧತಿಯನ್ನು ಉಲ್ಲಂಘಿಸಿ, ಖರೀದಿದಾರರ ಹೆಸರಿಗೆ ನಿವೇಶನ ನೋಂದಣಿ ಮಾಡಿಕೊಟ್ಟಿದ್ದಾರೆ’ ಎಂದು ಅವರು ವಿವರಿಸಿದರು.

‘ಇ– ಸ್ವತ್ತು’ನಲ್ಲಿ ಇಲ್ಲದ ನಿವೇಶನವನ್ನು ಸೇಲ್‌ ಅಗ್ರಿಮೆಂಟ್‌ ಮೇಲೆ ನೋಂದಣಿ ಮಾಡಿದ ಬಳಿಕ ‘ಕಾವೇರಿ’ ತಂತ್ರಾಂಶದಲ್ಲಿ ಅದನ್ನು ಸೇಲ್‌ ಡೀಡ್‌ ಆಗಿ ಬದಲಿಸಿರುವುದು ಗೊತ್ತಾಗಿದೆ. ಆದರೆ, ಸೂಕ್ತ ಕಾರಣ ಮತ್ತು ಜಿಲ್ಲಾ ನೋಂದಣಿ ಅಧಿಕಾರಿಗಳ ಅನುಮತಿ ಇಲ್ಲದೆ ತಂತ್ರಾಂಶದಲ್ಲಿ ಯಾವುದೇ ಬದಲಾವಣೆಗಳಿಗೆ ಅವಕಾಶ ಇಲ್ಲ’ ಎಂದರು.

‘ಕೆಂಗೇರಿ, ದಾಸನಪುರ ಸೇರಿದಂತೆ ಬೆಂಗಳೂರು ಹೊರವಲಯದಲ್ಲಿ ಇಂಥ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದಿರುವುದು ಪತ್ತೆಯಾಗಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ 4–5 ಪ್ರಕರಣಗಳು ಗೊತ್ತಾಗಿವೆ. ಈ ಹಿಂದೆಯೂ ಇಂಥದ್ದೇ ಪ್ರಕರಣಗಳು ನಡೆದಿವೆಯೇ ಎಂದು ಸಿಡಾಕ್‌ ಅಧ್ಯಯನ ನಡೆಸುತ್ತಿದೆ’ ಎಂದು ತಿಳಿಸಿದರು.

‘ಇಂತಹ ಪ್ರಕರಣಗಳು ಪತ್ತೆಯಾದ ಬಳಿಕ ಕಾವೇರಿ ತಂತ್ರಾಂಶದಲ್ಲಿರುವ ಲೋಪಗಳನ್ನು ಸರಿಪಡಿಸಲಾಗಿದೆ. ರಾಜ್ಯ ಯಾವುದೇ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ತಿರುಚುವ ಯತ್ನ ನಡೆದರೆ ಎಚ್ಚರಿಕೆ ಸಂದೇಶ ಬರುವಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದೂ ಅವರು ವಿವರಿಸಿದರು.

***

ಅಕ್ರಮ ನಡೆದಿರುವ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು

- ಡಾ. ಕೆ.ವಿ. ತ್ರಿಕೋಕಚಂದ್ರ, ಆಯುಕ್ತ, ನೋಂದಣಿ ಮತ್ತು ಮುದ್ರಾಂಕ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.