ADVERTISEMENT

ಕಂದಾಯ ದಾಖಲೆ ದಾರಿ ಸಲೀಸು: ‘ನೋಂದಣಿ ಮಸೂದೆ–2025’ಕ್ಕೆ ಅಂಗೀಕಾರ ನೀಡಿದ ವಿಧಾನಸಭೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 23:30 IST
Last Updated 13 ಆಗಸ್ಟ್ 2025, 23:30 IST
ವಿಧಾನಸಭೆಯಲ್ಲಿ ಮಸೂದೆ ಕುರಿತು ವಿವರಿಸಿದ ಕೃಷ್ಣ ಬೈರೇಗೌಡ
ವಿಧಾನಸಭೆಯಲ್ಲಿ ಮಸೂದೆ ಕುರಿತು ವಿವರಿಸಿದ ಕೃಷ್ಣ ಬೈರೇಗೌಡ   

ಬೆಂಗಳೂರು: ನೋಂದಣಿ, ಮನೆಗಳ ಅಕ್ರಮ–ಸಕ್ರಮ, ಕೃಷಿ ಸಾಲದ ಋಣಮುಕ್ತ ಪ್ರಮಾಣಪತ್ರ ಸೇರಿದಂತೆ ಕಂದಾಯ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳ ಬಾಗಿಲಿಂದ ಬಾಗಿಲಿಗೆ ನಾಗರಿಕರು ಅಲೆದಾಡುವುದನ್ನು ತಪ್ಪಿಸುವತ್ತ ಸರ್ಕಾರ ಹೆಜ್ಜೆ ಇಟ್ಟಿದೆ. 

ಸ್ವತ್ತುಗಳ ನೋಂದಣಿ ಪ್ರಕ್ರಿಯೆಯನ್ನು ಸರಳ ಮತ್ತು ಸುಲಲಿತಗೊಳಿಸುವ ಉದ್ದೇಶದಿಂದ ‘ಕಂಪ್ಯೂಟರ್‌ ಡಿಜಿಟಲ್‌ ಸಹಿ ಕಡ್ಡಾಯ ವ್ಯವಸ್ಥೆ’ ರಾಜ್ಯದಲ್ಲಿ ಜಾರಿಗೆ ಬರಲಿದೆ. ಇದರಿಂದ ಮಧ್ಯವರ್ತಿಗಳ ಹಾವಳಿಗೂ ಕಡಿವಾಣ ಬೀಳಲಿದೆ ಎಂದು ಸರ್ಕಾರ ಹೇಳಿದೆ.

ಈ ಉದ್ದೇಶದಿಂದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ 2025’ಕ್ಕೆ ವಿಧಾನಸಭೆ ಬುಧವಾರ ಅನುಮೋದನೆ ನೀಡಿದೆ.

ADVERTISEMENT

‘ಈ ತಿದ್ದುಪಡಿಯ ಮೂಲಕ ಸೆಕ್ಷನ್‌ 9(ಎ) ಅಡಿ ಕಂಪ್ಯೂಟರ್‌ ಡಿಜಿಟಲ್‌ ಸಹಿ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ಅಧಿಕಾರಿಗಳ ಮಧ್ಯಪ್ರವೇಶ ಕಡಿಮೆಗೊಳಿಸಿ, ಸ್ವಯಂಚಾಲಿತವಾಗಿ (ಆಟೋಮ್ಯಾಟಿಕ್) ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ ಇದಾಗಿದೆ. ಇನ್ನು ಮುಂದೆ ನೋಂದಣಿ ಪತ್ರಕ್ಕೆ ಉಪನೋಂದಣಾಧಿಕಾರಿ ಕೈಬರಹದ ಸಹಿ ಇರುವುದಿಲ್ಲ’ ಎಂದು ಮಸೂದೆಯ ಕುರಿತು ವಿವರ ನೀಡಿದ  ಕೃಷ್ಣ ಬೈರೇಗೌಡ ಹೇಳಿದರು.

ಸುಗಮ ಕೆಲಸಕ್ಕೆ ಮಸೂದೆ ದಾರಿ:

  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕರ್ನಾಟಕ ಗೃಹ ನಿರ್ಮಾಣ ಮಂಡಳಿ (ಕೆಎಚ್‌ಬಿ), ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಥವಾ ಯಾವುದೇ ಪ್ರಾಧಿಕಾರ ಒಬ್ಬರಿಗೆ ನಿವೇಶನ ಮಂಜೂರು ಮಾಡಿದರೆ ಉಪನೋಂದಣಾಧಿಕಾರಿ ಕಚೇರಿಗೆ  ಹೋಗುವ ಅಗತ್ಯವಿಲ್ಲ. ಹಂಚಿಕೆದಾರನಿಗೆ ಸ್ವಯಂ ಚಾಲಿತವಾಗಿ ನಿವೇಶನದ ನೋಂದಣಿ ಮಾಡಿಕೊಡಲಾಗುತ್ತದೆ. ಇದು ಡಿಜಿಟಲ್‌ ಸಹಿ ಹೊಂದಿರುತ್ತದೆ.

  • ಗ್ರಾಮೀಣ ಮತ್ತು ನಗರ ಪ್ರದೇಶದ ಸರ್ಕಾರಿ ಜಾಗದಲ್ಲಿ ಕಟ್ಟಿಕೊಂಡ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವ 94 ಸಿ, 94 ಸಿ.ಸಿ ಅಡಿ ನೀಡಲಾಗುವ ಹಕ್ಕುಪತ್ರಗಳನ್ನು ನೋಂದಣಿ ಮಾಡಿಕೊಡುವ ಅಧಿಕಾರ ತಹಶೀಲ್ದಾರ್ ಅವರಿಗೆ ನೀಡಲಾಗಿದೆ.

  • ನಮೂನೆ 53 ಹಾಗೂ 57ರ ಅಡಿ ಸಾಗುವಳಿ ಹಕ್ಕು ಪಡೆದ ಮಂಜೂರುದಾರ ಬಗರ್‌ಹುಕುಂ ರೈತರಿಗೆ, ಭೂಮಿ ನೋಂದಣಿ ಮಾಡಿಕೊಡಲು ಇನ್ನು ಮುಂದೆ ಉಪನೋಂದಣಾಧಿಕಾರಿಯ ಅಗತ್ಯವಿಲ್ಲ. ಮಂಜೂರಾತಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ತಹಶೀಲ್ದಾರ್‌ ಅವರು ಡಿಜಿಟಲ್‌ ಆಗಿ ಅಪ್‌ಲೋಡ್‌ ಮಾಡಿದರೆ ಸ್ವಯಂಚಾಲಿತವಾಗಿ ನೋಂದಣಿ ಆಗುತ್ತದೆ 

  • ರೈತರು ತಾವು ಪಡೆದ ಸಾಲ ತೀರಿಸಿದ್ದನ್ನು ಪಹಣಿ ಕಾಲಂನಿಂದ ತೆಗೆಸಲು ಕಚೇರಿಗೆ ಅಲೆಯುವುದು ತಪ್ಪಲಿದ್ದು, ಸ್ವಯಂ ಚಾಲಿತವಾಗಿ ಋಣಮುಕ್ತ ಪ್ರಮಾಣಪತ್ರ ನೀಡಲಾತ್ತದೆ. ಮಧ್ಯವರ್ತಿ ಹಾವಳಿ ತಪ್ಪುತ್ತದೆ 

  • ಖಾತೆಯನ್ನು ಕಾಗದದ ಮೂಲಕ ತಂದು ಕೊಟ್ಟರೆ ಅದೂ ನಕಲಿ ಆಗಿರುವ ಸಾಧ್ಯತೆ ಇದೆ. ಈ ಎಲ್ಲ ದಾಖಲೆಗಳೂ ಡಿಜಿಟಲ್‌ ಆಗಿಯೇ ಬರಬೇಕು. ಸೆಕ್ಷನ್‌ 32ಕ್ಕೆ ಈ ತಿದ್ದುಪಡಿ ಮಾಡಲಾಗಿದೆ. ದಾಖಲೆಗಳ ಡಿಜಿಟಲ್‌ ಪರಿಶೀಲನೆ ವೇಳೆ ರೈತರು ಸರ್ಕಾರಿ ಕಚೇರಿಗಳಿಗೆ ಬರುವ ಅಗತ್ಯವಿಲ್ಲ

  • ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ಜಿಪಿಎ (ಜನರಲ್‌ ಪವರ್‌ ಆಫ್‌ ಅಟಾರ್ನಿ) ಆಧಾರದಲ್ಲಿ ನಡೆಯುವ ವ್ಯವಹಾರಗಳಿಗೆ ಮಾತ್ರ ಇಬ್ಬರೂ ಹಾಜರಿರಬೇಕು ಮತ್ತು ಜಿಪಿಎ ಕಡ್ಡಾಯವಾಗಿ ನೋಂದಣಿ ಆಗಬೇಕು

  • 11 ಇ ಸ್ಕೆಚ್‌ ಅನ್ನು (ಆಸ್ತಿಯ ಗಡಿಗಳು ಮತ್ತು ಇತರ ವಿವರಗಳನ್ನು ಒಳಗೊಂಡಿರುವ ನಕ್ಷೆ)  2011ರಲ್ಲೇ ಕಡ್ಡಾಯ ಮಾಡಿ ಕಾನೂನು ಪರಿಧಿಯೊಳಗೆ ತರಲಾಗಿದೆ

ದಾಖಲೆಗಳನ್ನು ಅಪ್‌ಲೋಡ್‌ ಮಾಡುವಾಗ ಸಣ್ಣ ತಪ್ಪುಗಳಾದರೂ ಅಪ್‌ಲೋಡ್‌ ಮಾಡುವ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ತೆಗೆದುಕೊಳ್ಳಬೇಕು
ಯು.ಟಿ.ಖಾದರ್‌ ಸಭಾಧ್ಯಕ್ಷ
ರಾಜ್ಯದಲ್ಲಿ ಎಲ್ಲ ಕಡೆ ಸರ್ವರ್‌ ಡೌನ್‌ ಆಗ್ತಾ ಇದೆ. ಇ–ಖಾತಾ ನೋಂದಣಿ ಒತ್ತಡ ಜಾಸ್ತಿ ಆಗುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಸರ್ವರ್ ಸಾಮರ್ಥ್ಯ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಿ
ತನ್ವೀರ್ ಸೇಠ್ ಕಾಂಗ್ರೆಸ್‌ ಸದಸ್ಯ
ಆಶ್ರಯ ನಿವೇಶನಗಳು ನೋಂದಣಿ ಆಗುತ್ತಾ ಇಲ್ಲ. ಕಂದಾಯ ನಿವೇಶನಗಳಲ್ಲೂ ಇದೇ ಸಮಸ್ಯೆ ಇದೆ. ನೋಂದಣಿ ಮಾಡಿಸಲು ಕ್ರಮ ತೆಗೆದುಕೊಳ್ಳಬೇಕು
ಎಸ್‌.ಆರ್‌.ವಿಶ್ವನಾಥ್ ಬಿಜೆಪಿ ಸದಸ್ಯ

ಕೃಷಿ ಭೂಮಿ ಖರೀದಿ: ಅನುಮತಿ ಅಧಿಕಾರ ಡಿ.ಸಿಗೆ

ಶಿಕ್ಷಣ ಸಂಸ್ಥೆಗಳು ಸಣ್ಣ ಸಂಸ್ಥೆಗಳು ಹಾಗೂ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸೆಕ್ಷನ್‌ 109ರ ಅಡಿ ಕೃಷಿ ಜಮೀನು ಖರೀದಿಸಲು ಅನುಮತಿ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಇನ್ನು ಮುಂದೆ ಜಿಲ್ಲಾಧಿಕಾರಿಗಳೇ 4 ಹೆಕ್ಟೇರ್‌ವರೆಗಿನ ಭೂಮಿ ಖರೀದಿಗೆ ಅನುಮತಿ ನೀಡಬಹುದು. ಪ್ರಸ್ತಾವನೆಯನ್ನು ಮುಖ್ಯ ಕಾರ್ಯದರ್ಶಿವರೆಗೆ ತರುವ ಅಗತ್ಯವಿಲ್ಲ. ಈ ರೀತಿ ನೀಡುವ ಅನುಮತಿ ಸ್ವಯಂಚಾಲಿತವಾಗಿ ಭೂ–ಪರಿವರ್ತನೆಯಾಗಿರುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿವರಣೆ ನೀಡಿದರು.

ಇದಕ್ಕಾಗಿ ತರಲಾದ ‘ಕರ್ನಾಟಕ ಭೂಸುಧಾರಣೆಗಳು ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ಮಸೂದೆ’ ಮಂಡಿಸಿದ ಸಚಿವರು ಈ ಕುರಿತು ವಿವರ ನೀಡಿದರು.

  • ಈ ಹಿಂದೆ ಸಣ್ಣ ಉದ್ದಿಮೆದಾರರು ಅಥವಾ ಶಿಕ್ಷಣ ಸಂಸ್ಥೆಗಳು ಭೂಮಿಯನ್ನು ಯಾವುದೋ ಉದ್ದೇಶಕ್ಕೆ ಪಡೆದು ಬೇರೆ ಯಾವುದೋ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಮತಿ ಕೇಳುತ್ತಿದ್ದರು. ಅದಕ್ಕೆ ಅವಕಾಶವಿರಲಿಲ್ಲ. ಈಗ ಅದಕ್ಕೆ ಅವಕಾಶ ನೀಡಲಾಗಿದೆ.

  • ರಾಜ್ಯ ಯಾವುದೇ ಭಾಗದಲ್ಲಿ 2 ಎಕರೆಯವರೆಗಿನ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಪರಿವರ್ತನೆ ಮಾಡುವುದಕ್ಕೆ ವಿನಾಯಿತಿ ನೀಡಲಾಗುವುದು.

  • ಸೌರ ಶಕ್ತಿ ಪವನ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಲು ಕೃಷಿ ಭೂಮಿಯ ಸ್ವಯಂಚಾಲಿತ ಪರಿವರ್ತನೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಾಯವೂ ಇತ್ತು. ಬಹಳ ದಿನಗಳ ಚರ್ಚೆಯ ಬಳಿಕ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಅಕ್ರಮ ನೋಂದಣಿ ತಡೆ; ಶೀಘ್ರ ನಿಯಮ

ನಿಯಮಬಾಹಿರ ಅಕ್ರಮ ನೋಂದಣಿ ಪ್ರಕರಣಗಳನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಾಧಿಕಾರಿಗೆ ನೀಡಿರುವ ಕರ್ನಾಟಕ ನೋಂದಣಿ ತಿದ್ದುಪಡಿ ಕಾಯ್ದೆ–2023ಕ್ಕೆ ಸೆಪ್ಟೆಂಬರ್‌ ಒಳಗೆ ಕರಡು ನಿಯಮಗಳನ್ನು ಪ್ರಕಟಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನಪರಿಷತ್‌ನಲ್ಲಿ ಬಿಜೆಪಿಯ ಎಂ.ಟಿ.ಬಿ. ನಾಗರಾಜು ಹೇಮಲತಾ ನಾಯಕ್‌ ಕಾಂಗ್ರೆಸ್‌ನ ರಾಮೋಜಿಗೌಡ ಅವರ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸಿದ ಅವರು ವಿಧಾನಮಂಡಲ ಅಂಗೀಕರಿಸಿದ್ದ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿದ್ದರು.

14 ತಿಂಗಳ ಬಳಿಕ  ರಾಷ್ಟ್ರಪತಿಯವರ ಅಂಕಿತ ಬಿದ್ದಿದೆ. ಒಂದು ತಿಂಗಳ ಒಳಗೆ ಕರ್ನಾಟಕ ನೋಂದಣಿ ನಿಯಮ–1965ಕ್ಕೆ ತಿದ್ದುಪಡಿ ತಂದು ಹೊಸ ಕರಡು ನಿಯಮಗಳನ್ನು ಸಿದ್ಧಪಡಿಸಲಾಗುವುದು. ನಂತರ ಕಾಯ್ದೆ ಜಾರಿಗೊಳ್ಳುವ ದಿನಾಂಕ ಘೋಷಿಸಲಾಗುವುದು ಎಂದರು. ಅಧಿಕಾರಿಗಳೇ ಶಾಮೀಲಾಗಿ ಅಕ್ರಮ ನೋಂದಣಿ ಮಾಡಿಕೊಟ್ಟ ಉದಾಹರಣೆಗಳಿವೆ. ಕಾಯ್ದೆ ಜಾರಿಯ ನಂತರ ಅಂತಹ ಲೋಪ ಕಂಡುಬಂದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಆಸ್ತಿಗಳನ್ನು ನಿಯಮಬಾಹಿರವಾಗಿ ಮಾಡಿದ್ದ ನೋಂದಣಿ ರದ್ದು ಮಾಡಲು ಇದುವರೆಗೂ ಕೋರ್ಟ್‌ ಮೊರೆ ಹೋಗಬೇಕಿತ್ತು. ಜನರಿಗೆ ಇನ್ನು ಅಂತಹ ಅಲೆದಾಟ ತಪ್ಪಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.