ADVERTISEMENT

ಕುಸಿದ ಆವರಣಗೋಡೆ: ಕಾಶಿಯಲ್ಲಿ ಕರ್ನಾಟಕ ಛತ್ರ ಪುನರ್‌ನಿರ್ಮಾಣಕ್ಕೆ ಪ್ರಸ್ತಾವ

*ನವೀಕರಣ ಬದಲು ಪುನರ್‌ನಿರ್ಮಾಣಕ್ಕೆ ಮುಂದಾದ ಮುಜರಾಯಿ

ಬಾಲಕೃಷ್ಣ ಪಿ.ಎಚ್‌
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
ಕಾಶಿಯಲ್ಲಿರುವ ಕರ್ನಾಟಕ ರಾಜ್ಯ ಛತ್ರ
ಕಾಶಿಯಲ್ಲಿರುವ ಕರ್ನಾಟಕ ರಾಜ್ಯ ಛತ್ರ   

ಬೆಂಗಳೂರು: ಕಾಶಿಯಲ್ಲಿರುವ ಕರ್ನಾಟಕ ರಾಜ್ಯ ಛತ್ರದ ಆವರಣಗೋಡೆ ಕುಸಿದು ಬಿದ್ದಿದ್ದು, ಅದರ ನಿರ್ಮಾಣ ಮತ್ತು ಛತ್ರ ಪುನರ್‌ನಿರ್ಮಾಣಕ್ಕೆ ಮುಜರಾಯಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್‌ 97 ವರ್ಷಗಳ ಹಿಂದೆ ಕಾಶಿಯ ಗಂಗಾನದಿ ತೀರದಲ್ಲಿ ಕರ್ನಾಟಕ ಛತ್ರವನ್ನು ನಿರ್ಮಿಸಿದ್ದರು. ಇದರ ನವೀಕರಣಕ್ಕಾಗಿ ಕಳೆದ ಬಜೆಟ್‌ನಲ್ಲಿ ಕರ್ನಾಟಕ ಸರ್ಕಾರವು ₹5 ಕೋಟಿ ಘೋಷಣೆ ಮಾಡಿತ್ತು. ಈ ಅನುದಾನ ಬಿಡುಗಡೆ ಆಗುವ ಮೊದಲೇ ಆವರಣಗೋಡೆ ಕುಸಿದು ಬಿದ್ದಿದೆ. ಹಾಗಾಗಿ ಆವರಣಗೋಡೆ ನಿರ್ಮಾಣ ಮತ್ತು ಛತ್ರ ನವೀಕರಣದ ಬದಲು ಹೊಸ ಛತ್ರ ನಿರ್ಮಿಸಲು ಮುಜರಾಯಿ ಇಲಾಖೆ ಮುಂದಾಗಿದೆ.

ಮುಜರಾಯಿ ಇಲಾಖೆಯಿಂದ 2002ರಲ್ಲಿ ಇನ್ನೊಂದು ಛತ್ರವನ್ನು ನಿರ್ಮಿಸಲಾಗಿದ್ದು, ಆವರಣ ಗೋಡೆ ನಿರ್ಮಿಸದೇ ಹೋದರೆ ಎರಡೂ ಛತ್ರಗಳಿಗೆ ಅಪಾಯ ಎದುರಾಗಲಿದೆ.

ADVERTISEMENT

ಕಾಶಿ, ಕೈಲಾಸ ಮಾನಸ ಸರೋವರ, ಚಾರ್‌ಧಾಮ್‌ ಯಾತ್ರೆ ಮಾಡುವ ರಾಜ್ಯದ ಕಾಯಂ ನಿವಾಸಿಗಳಿಗೆ ಸರ್ಕಾರ ಸಹಾಯಧನ ನೀಡುತ್ತಿದೆ. ಈ ಯೋಜನೆಯಡಿ ಕಾಶಿ ಯಾತ್ರಿಗಳಿಗೆ ₹ 5,000 ಸಹಾಯಧನ ನೀಡುತ್ತಿದೆ. ಇದರಿಂದಾಗಿ ಕಾಶಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. 

ಛತ್ರದಲ್ಲಿ ಒಬ್ಬರು ಗರಿಷ್ಠ 2 ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸುವ, ಗರಿಷ್ಠ ಮೂರು ದಿನಗಳವರೆಗೆ ಉಳಿದುಕೊಳ್ಳುವ ಅವಕಾಶವಿತ್ತು. ಇದೀಗ ಹಾನಿ ಉಂಟಾಗಿರುವುದರಿಂದ ಛತ್ರದ ವಾಸ್ತವ್ಯ ವ್ಯವಸ್ಥೆ ಸ್ಥಗಿತಗೊಂಡಿದೆ.

‘ಕರ್ನಾಟಕ ಛತ್ರದ ಪಕ್ಕದಲ್ಲಿಯೇ ಹರೀಶ್ಚಂದ್ರ ಘಾಟ್ ಇದೆ. ಅಲ್ಲಿಯ ಕಾಮಗಾರಿಯಿಂದಾಗಿ ನಮ್ಮ ಛತ್ರದ ಆವರಣಗೊಡೆಗೆ ಹಾನಿಯಾಗಿ ಕುಸಿದಿದೆ. ಅಲ್ಲದೇ ಛತ್ರಕ್ಕೂ ಹಾನಿಯಾಗಿದೆ’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

‘ರಾಜ್ಯದಿಂದ ಕಾಶಿಗೆ ತೆರಳುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈಗಿರುವ ಎರಡು ಮಹಡಿಯ ಛತ್ರ ಎಲ್ಲಿಯೂ ಸಾಕಾಗುತ್ತಿಲ್ಲ. ಮೈಸೂರು ರಾಜರು ನಿರ್ಮಿಸಿ ಶತಮಾನ ಆಗಿರುವುದರಿಂದ ಕಟ್ಟಡವೂ ಹಾಳಾಗುತ್ತಾ ಬಂದಿದೆ. ಈ ಕಟ್ಟಡವನ್ನು ಕೆಡವಿ ಹೆಚ್ಚು ಮಹಡಿಯ ಕಟ್ಟಡ ನಿರ್ಮಿಸಬೇಕಿದೆ’ ಎಂದು ಅವರು ತಿಳಿಸಿದರು.

‘ಕರ್ನಾಟಕ ರಾಜ್ಯ ಛತ್ರಕ್ಕೆ ಮುಂಗಡ ಕಾಯ್ದಿರಿಸುವುದನ್ನು ನಿಲ್ಲಿಸಿದ್ದೇವೆ. ಹೊಸದಾಗಿ ₹18 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಸಿದ್ಧಪಡಿಸಿ ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮುಜರಾಯಿ ಇಲಾಖೆಯ ವಿಶೇಷ ಆಯುಕ್ತರಾದ ಕೆ. ಪದ್ಮಾ ಮಾಹಿತಿ ನೀಡಿದರು.

ಕಾಶಿಯಲ್ಲಿ ಹೊಸದಾಗಿ ಛತ್ರ ನಿರ್ಮಾಣ ಮಾಡಲೇಬೇಕಿದೆ. ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣ ಮಾಡಿದ್ದ ಶೈಲಿಯನ್ನು ಉಳಿಸಲು ಸಾಧ್ಯವೇ ಎಂಬುದನ್ನು ನೋಡಬೇಕು.
-ರಾಮಲಿಂಗಾರೆಡ್ಡಿ, ಮುಜರಾಯಿ ಸಚಿವ
ರಾಮಲಿಂಗಾರೆಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.