ADVERTISEMENT

ಕಾಯ್ದೆ ತಿದ್ದುಪಡಿ ಕೈಬಿಡಿ: ರಾಜ್ಯದಾದ್ಯಂತ ರೈತರ–ಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 19:54 IST
Last Updated 25 ಸೆಪ್ಟೆಂಬರ್ 2020, 19:54 IST
ಭೂ ಸುಧಾರಣೆ, ಎಪಿಎಂಸಿ ಸೇರಿದಂತೆ ಹಲವು ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಗಳನ್ನ ವಾಪಸ್‌ ಪಡೆಯಬೇಕೆಂದು ಒತ್ತಾಯಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ/ ರಂಜು ಪಿ
ಭೂ ಸುಧಾರಣೆ, ಎಪಿಎಂಸಿ ಸೇರಿದಂತೆ ಹಲವು ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಗಳನ್ನ ವಾಪಸ್‌ ಪಡೆಯಬೇಕೆಂದು ಒತ್ತಾಯಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳು ರೈತ ಮತ್ತು ಕಾರ್ಮಿಕ ವಿರೋಧಿಯಾಗಿವೆ ಎಂದು ಖಂಡಿಸಿದ ರೈತ, ಕಾರ್ಮಿಕ ಸಂಘಟನೆಗಳು ರಾಜ್ಯದಾದ್ಯಂತ ಶುಕ್ರವಾರ ರಸ್ತೆ ತಡೆ ನಡೆಸಿದವು.

ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ವಾಹನ ಸಂಚಾರ ತಡೆದು ಧರಣಿ ನಡೆಸಿದ ರೈತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಕಾಯ್ದೆ ತಿದ್ದುಪಡಿ ಬಿಡಿ, ಪ್ರವಾಹದ ಪರಿಹಾರ ಕೊಡಿ’, ‘ರೈತ–ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯಿರಿ’ ಎಂಬ ಘೋಷಣೆಗಳನ್ನು ಕೂಗಿದರು.

ADVERTISEMENT

ಮೈಸೂರು, ಮಂಗಳೂರು, ಹುಬ್ಬಳ್ಳಿ,ಕಲಬುರ್ಗಿ, ಚಾಮರಾಜನಗರ, ವಿಜಯಪುರ, ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಗರಗಳಲ್ಲಿ ರಸ್ತೆ ತಡೆ ನಡೆಯಿತು. ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟದ ನೇತೃತ್ವದಲ್ಲಿ 35 ಸಂಘಟನೆಗಳಲ್ಲದೆ, ಕಾಂಗ್ರೆಸ್‌, ಜೆಡಿಎಸ್, ಸಿಪಿಎಂ, ಸಿಪಿಐ ಹಾಗೂ ಆಮ್‌ ಆದ್ಮಿ ಪಾರ್ಟಿ ಪ್ರತಿಭಟನೆಗೆ ಕೈ ಜೋಡಿಸಿದವು.

ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಸೇರಿದಂತೆ ರಾಜ್ಯದೆಲ್ಲೆಡೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದು ಸಂಜೆಯ ವೇಳೆಗೆ ಬಿಡುಗಡೆ ಮಾಡಿದರು.

ರೈತರು ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆಗೆ ಬಂಡಾಯ ಸಾಹಿತ್ಯ ಸಂಘಟನೆ ಬೆಂಬಲ ಸೂಚಿಸಿದೆ.

ಖಂಡನೆ: ಪ್ರತಿಭಟನಾನಿರತರನ್ನು ಬಂಧಿಸಿದ ಕ್ರಮವನ್ನು ಭಾರತ ಜನವಾದಿ ಮಹಿಳಾ ಸಂಘಟನೆ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಖಂಡಿಸಿವೆ.

ಹೋರಾಟ ತೀವ್ರ: ರೈತರ ನಿಯೋಗವನ್ನು ಮಾತುಕತೆಗೆ ಆಹ್ವಾನಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾಯ್ದೆಗಳಲ್ಲಿ ಕೆಲ ಬದಲಾವಣೆ ತರುವ ಚಿಂತನೆ ಇದೆ. ಪ್ರತಿಭಟನೆ ಕೈಬಿಡಿ ಎಂದರು.

ಇದಕ್ಕೆ ಒಪ್ಪದ ನಿಯೋಗವು, ಹೊಸದಾಗಿ ತಂದಿರುವ ತಿದ್ದುಪಡಿಗಳನ್ನು ಸಂಪೂರ್ಣ ಕೈಬಿಡಬೇಕು ಎಂದು ಒತ್ತಾಯಿಸಿತು ಮತ್ತು ಸೆ.28ಕ್ಕೆ ನಡೆಸಲು ಉದ್ದೇಶಿಸಿರುವ ರಾಜ್ಯ ಬಂದ್‌ ಅನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.