ADVERTISEMENT

ಸಿಎಎ ಪರ, ವಿರುದ್ಧ ಪ್ರದರ್ಶನ

ಮೈಸೂರು: ಕರಪತ್ರ ಹಂಚಿದ ಮಹಿಳೆಯರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 19:54 IST
Last Updated 22 ಡಿಸೆಂಬರ್ 2019, 19:54 IST
ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ಮೈಸೂರಿನಲ್ಲಿ ಭಾನುವಾರ ನಡೆದ ಪ್ರದರ್ಶನದಲ್ಲಿ ಶಾಸಕ ಎಸ್.ಎ.ರಾಮದಾಸ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು
ಪೌರತ್ವ (ತಿದ್ದುಪಡಿ) ಕಾಯ್ದೆ ಪರವಾಗಿ ಮೈಸೂರಿನಲ್ಲಿ ಭಾನುವಾರ ನಡೆದ ಪ್ರದರ್ಶನದಲ್ಲಿ ಶಾಸಕ ಎಸ್.ಎ.ರಾಮದಾಸ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು   

ಮೈಸೂರು: ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಪರ ಹಾಗೂ ವಿರುದ್ಧವಾಗಿ ನಗರದಲ್ಲಿ ಭಾನುವಾರ ಪ್ರದರ್ಶನಗಳು ನಡೆದವು.

ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದ ಕಾಯ್ದೆ ವಿರೋಧಿಸಿ ಮಹಾತ್ಮ ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಯಿತು. ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆಗಿಳಿದ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಸ್ಥಳದಿಂದ ದೂರ ಕಳುಹಿಸಿದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಕಿಡಿಕಾರಿದರು.

ADVERTISEMENT

ಬಲ ಪ್ರದರ್ಶನ: ನಗರದ ಓವಲ್ ಮೈದಾನದಲ್ಲಿ ಕಾಯ್ದೆಯ ಪರವಾಗಿ ಬಿಜೆಪಿ ಹಾಗೂ ಇತರ ಸಂಘಟನೆಗಳು ಬಲ ಪ್ರದರ್ಶನ ನಡೆಸಿದವು. ಶಾಸಕ ಎಸ್‌.ಎ.ರಾಮದಾಸ್, ಬಿಜೆಪಿ ಮುಖಂಡ ಬಿ.ಪಿ.ಮಂಜುನಾಥ್ ಸೇರಿದಂತೆ ಹಲವರು ಭಾಗಿಯಾದರು. ಕೇಂದ್ರ ಸರ್ಕಾರ ಹಾಗೂ ಕಾಯ್ದೆಯ ಪರ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರು ಇವರ ಮನವೊಲಿಸಿ ವಾಪಸ್‌ ಕಳುಹಿಸಿದರು.

ಮಹಿಳಾ ಕಾರ್ಯಕರ್ತರು ವಶಕ್ಕೆ: ಸಿಎಎ ವಿರುದ್ಧ ನಾಚನಹಳ್ಳಿ ಪಾಳ್ಯದಲ್ಲಿ ಕರಪತ್ರ ಹಂಚುತ್ತಿದ್ದ ಸಂವಿಧಾನ ರಕ್ಷಣಾ ಸಮಿತಿಯ ಇಬ್ಬರು ಮಹಿಳಾ ಕಾರ್ಯಕರ್ತರನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ವಶಕ್ಕೆ ಪಡೆದರು.

ಡಿ.24ರಂದು ನಡೆಯಲಿರುವ ಪ್ರತಿಭಟನೆ ಕುರಿತು ಮಾಹಿತಿ ನೀಡಲು ಕರಪತ್ರ ಹಂಚುತ್ತಿದ್ದುದ್ದಾಗಿ ಮಹಿಳೆಯರು ಸಮಜಾಯಿಷಿ ನೀಡಿದರು. ‘ಪೂರ್ವಾನುಮತಿ ಪಡೆದುಕೊಂಡೇ ಕರಪತ್ರ ಹಂಚಬೇಕು’ ಎಂದು ಸೂಚನೆ ನೀಡಿ ಪೊಲೀಸರು ವಾಪಸ್ ಕಳುಹಿಸಿದ್ದಾರೆ.

‘ಕರಪತ್ರದಲ್ಲಿ ಪ್ರಚೋದನಾತ್ಮಕ ಅಂಶಗಳು ಇದ್ದ ಕಾರಣ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.