ADVERTISEMENT

‘ರೋಲ್ ಕಾಲ್ ಹೋರಾಟಗಾರರು’ ಹೇಳಿಕೆ ಖಂಡಿಸಿ ಪ್ರತಿಭಟನೆ: ಪೊಲೀಸರ ವಶಕ್ಕೆ ವಾಟಾಳ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 9:18 IST
Last Updated 1 ಡಿಸೆಂಬರ್ 2020, 9:18 IST
   

ವಿಜಯಪುರ: ಕನ್ನಡ ಪರ ಹೋರಾಟಗಾರರನ್ನು ರೋಲ್ ಕಾಲ್ ಹೋರಾಟಗಾರರು ಎಂಬ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲು ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿದ್ದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಸೇರಿದಂತೆ 50ಕ್ಕೂ ಹೆಚ್ಚು ಹೋರಾಟಗಾರರನ್ನು ಪೊಲೀಸರು ಆಲಮಟ್ಟಿಯಲ್ಲಿ ವಶಕ್ಕೆ ಪಡೆದರು.

ಡಿ.5 ರಂದು ಕರ್ನಾಟಕ ಬಂದ್ ಸಿದ್ಧತೆಗಾಗಿ ವಿಜಯಪುರಕ್ಕೆ ಹೊರಟಿದ್ದೆವು. ಆದರೆ, ಪೊಲೀಸರು ಇಲ್ಲಿಯೇ ಬಂಧಿಸಿದ್ದಾರೆ. ಇದು ಹೋರಾಟವನ್ನು ಹತ್ತಿಕ್ಕುವ ತಂತ್ರವಾಗಿದೆ ಎಂದು ವಾಟಾಳ್ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ 15 ದಿನದೊಳಗೆ ವಿಜಯಪುರಕ್ಕೆ ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು. ಅಂದು ವಿಜಯಪುರಕ್ಕೆ ನನ್ನನ್ನು ಪ್ರವೇಶಿಸದಂತೆ ತಡೆದು ನೋಡಿರಿ, ಇದು ವಿಜಯಪುರ ಪೊಲೀಸರಿಗೆ ನನ್ನ ಸವಾಲ್ ಎಂದರು. ಡಿ 5 ರ ನಂತರ ರಾಜ್ಯದಾದ್ಯಂತ ಜೈಲು ಭರೋ ಚಳುವಳಿ ನಡೆಸಲಾಗುವುದು ಎಂದು ಘೋಷಿಸಿದರು.

ADVERTISEMENT

10 ಕ್ಕೂ ಹೆಚ್ಚು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ, ಯಾರೂ ಕನ್ನಡ ಪರ ಹೋರಾಟವನ್ನು ಹತ್ತಿಕ್ಕಿಲ್ಲ. ಯಡಿಯೂರಪ್ಪ ಮಾತ್ರ ಕನ್ನಡ ಪರ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ.ಈಗ ಮರಾಠಿ ಪ್ರಾಧಿಕಾರದಂತೆ ಮುಂದೆ ತೆಲಗು, ತಮಿಳು, ಮಾರವಾಡಿ, ಮಲಯಾಳಂ ಪ್ರಾಧಿಕಾರ ಮಾಡಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಬೇಕಾಗುತ್ತದೆ. ಇದರಿಂದ ‌ಕನ್ನಡ ಮಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಟಾಳ್ ಸೇರಿದಂತೆ ಹೋರಾಟಗಾರರನ್ನು ಆಲಮಟ್ಟಿ ಪ್ರವಾಸಿಮಂದಿರಕ್ಕೆ ಪೊಲೀಸರು ಕರೆದೊಯ್ದರು. ಅವರು ಪೊಲೀಸ್ ವಾಹನದಿಂದ ಇಳಿಯಲು ನಿರಾಕರಿಸಿದರು. ಕೆಲ ಕಾಲ ನಂತರ ವಾಟಾಳ್ ಅವರು ಮರಳಿ ತಮ್ಮ ವಾಹನದ ಮೂಲಕ ಹೊಸಪೇಟೆ ಯತ್ತ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.