ADVERTISEMENT

ಮತ ಕಳವು ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ: ರಾಜ್ಯದಿಂದ 4,500 ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 23:56 IST
Last Updated 13 ಡಿಸೆಂಬರ್ 2025, 23:56 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

– ಪ್ರಜಾವಾಣಿ ಚಿತ್ರ

ನವದೆಹಲಿ: ಮತ ಕಳವು ವಿರುದ್ಧ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆಯಲಿರುವ ಬೃಹತ್‌ ಪ್ರತಿಭಟನೆಯಲ್ಲಿ ರಾಜ್ಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು ಹಾಗೂ 4,500ಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. 

ADVERTISEMENT

ಶನಿವಾರ ರಾತ್ರಿ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಉಳಿವಿಗೆ ಮತ ಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುವುದಕ್ಕೆ ಬಿಡುವುದಿಲ್ಲ’ ಎಂದರು.

‘ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರ ಹೆಸರನ್ನು ವ್ಯವಸ್ಥಿತವಾಗಿ ಅಳಿಸುವ ಕೆಲಸ ನಡೆಯುತ್ತಿದೆ. ಮಹದೇವಪುರ, ಆಳಂದ, ಗಾಂಧಿನಗರ ಸೇರಿದಂತೆ ದೇಶದ ಹಲವಾರು ಕ್ಷೇತ್ರದಲ್ಲಿ ಈ ರೀತಿ ನಡೆದಿದೆ. ರಾಹುಲ್ ಗಾಂಧಿ ಅವರು ಪ್ರಶ್ನೆ ಮಾಡಿದರೆ ನಮಗೆ ಮಾಹಿತಿ ನೀಡಿ ಎಂದು ಚುನಾವಣಾ ಆಯೋಗದವರು ಕೇಳುತ್ತಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಹಾಕಿದರೂ ಮಾಹಿತಿ ನೀಡಲಿಲ್ಲ. ನಾನೇ ಹೋಗಿ ಮಾಹಿತಿ ನೀಡಿ ಬಂದಿದ್ದೆ. ಸಿಐಡಿ ಅಧಿಕಾರಿಗಳು 18 ಕಾಗದ ಬರೆದಿದ್ದಾರೆ. ದೂರವಾಣಿ ಸಂಖ್ಯೆಗಳು, ಇತರೇ ಮಾಹಿತಿಗಳನ್ನು ಕೇಳಿದರೂ ನೀಡಿಲ್ಲ. ಆದರೂ ತ‌ನಿಖಾ ವರದಿ ತಯಾರಿದೆ’ ಎಂದರು.

‘ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆಗೆ ಜವಾಬ್ದಾರಿ ನೀಡಿ, ಬಿಜೆಪಿ ಕಾರ್ಯಕರ್ತರಿಗೆ ಐಡಿ ಕಾರ್ಡ್‌ಗಳನ್ನು ನೀಡಲಾಗಿತ್ತು. ಆಗ ನಾನು ದೊಡ್ಡ ಹೋರಾಟ ರೂಪಿಸಿದ್ದೆ. ಇದನ್ನು ಇಡೀ ದೇಶದ ಜನರಿಗೆ ತಿಳಿಸಬೇಕಾಗಿದೆ. ಇದು ಕೇವಲ ಕರ್ನಾಟಕಕ್ಕೆ ಆಗಿರುವ ತೊಂದರೆಯಲ್ಲ. ಬಿಹಾರ, ಮಹಾರಾಷ್ಟ್ರ ಹೀಗೆ ಅನೇಕ ಕಡೆ ನಡೆದಿದೆ‘ ಎಂದರು.

ವಿಶೇಷ ರೈಲು ರದ್ದು: ಮತ ಕಳವು ಹೋರಾಟದಲ್ಲಿ ಭಾಗಿಯಾಗಲು ರಾಜ್ಯದಿಂದ ವಿಶೇಷ ರೈಲಿನ ವ್ಯವಸ್ಥೆ ಮಾಡಲು ರೈಲ್ವೆ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದೆವು. ಇದಕ್ಕೆ ಇಲಾಖೆ ಒಪ್ಪಿತ್ತು. ಕೆಪಿಸಿಸಿಯಿಂದ ₹1 ಕೋಟಿಯಷ್ಟು ಕಟ್ಟಲು ತಯಾರಿದ್ದೆವು. ಆದರೆ, ಕೊನೆಯ ಕ್ಷಣದಲ್ಲಿ ರದ್ದು ಮಾಡಿದ್ದಾರೆ ಎಂದು ಹೇಳಿದರು. 

‘ಪಕ್ಷದ ಕಚೇರಿಯಲ್ಲಿ ನಾಯಕರು ಸಿಗುತ್ತಾರೆ’

ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಪಕ್ಷದ ಕಚೇರಿ ನಮ್ಮ ಪಾಲಿಗೆ ದೇವಾಲಯ.‌ ಇಂದಿರಾ ಭವನದಲ್ಲಿ ಭಾನುವಾರ ಮಧ್ಯಾಹ್ನ ಊಟಕ್ಕೆ ಆಹ್ವಾನ ನೀಡಲಾಗಿದೆ. ಅಲ್ಲಿಗೆ ಹೋದಾಗ ಎಲ್ಲರೂ ಸಿಕ್ಕೇ ಸಿಗುತ್ತಾರೆ. ನಾನು ದೆಹಲಿಗೆ ಬಂದಿದ್ದೇನೆ ಎಂದು ಗೊತ್ತಾದ ತಕ್ಷಣ ಗೆಳೆಯರು, ನಾಯಕರು ಭೇಟಿಗೆ ಬಂದಿದ್ದಾರೆ. ದೇಶದ ನಾನಾ ಮೂಲೆಯಿಂದ ಬಂದವರು ಇಲ್ಲಿದ್ದಾರೆ’ ಎಂದು ಹೇಳಿದರು. 

ನೋಟಿಸ್‌ಗೆ ನಾಳೆ ಉತ್ತರ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಹೋದರ ಡಿ.ಕೆ. ಸುರೇಶ್ ಅವರು ದೆಹಲಿ ಪೊಲೀಸರ ಮುಂದೆ ಸೋಮವಾರ ವಿಚಾರಣೆಗೆ ಹಾಜರಾಗಲಿದ್ದಾರೆ. ಆರ್ಥಿಕ ಮತ್ತು ವಹಿವಾಟು ವಿವರಗಳನ್ನು ಕೋರಿ ಡಿ.ಕೆ.ಸಹೋದರರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.

‘ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ 19ರ ಒಳಗೆ ಉತ್ತರಿಸಬೇಕು ಎಂದು ಪೊಲೀಸರು ನೋಟಿಸ್‌ ನೀಡಿದ್ದಾರೆ. ನಮ್ಮ‌ ವಕೀಲರಿಗೆ ಬರಲು ಹೇಳಿರುವೆ. ಕಾನೂನು ತಜ್ಞರ ಸಲಹೆ ಪಡೆದು ಬಹುಶಃ ಸೋಮವಾರ ಹೋಗಬಹುದು. ಹೋಗುವಾಗ ನಿಮಗೆ (‌ಮಾಧ್ಯಮಗಳಿಗೆ) ತಿಳಿಸುವೆ’ ಎಂದು ಶಿವಕುಮಾರ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.