ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಸಮಗ್ರ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ಜನಾಗ್ರಹ ಆಂದೋಲನವು ಸೋಮವಾರ ರಾಜ್ಯವ್ಯಾಪಿ ಮುಷ್ಕರ ನಡೆಸಿತು.
‘ಎಲ್ಲಾ ಬಡವರಿಗೆ ಸಮಗ್ರ ಪರಿಹಾರ ಕೊಡಲೇಬೇಕು’,‘ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಬೇಕು’, ‘ರೈತರಿಗೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಿಸಬೇಕು’ ‘ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಗಳಿಗೆ ತಲಾ₹5 ಲಕ್ಷ ಪರಿಹಾರ ನೀಡಬೇಕು’ ಎಂಬ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಶಾಸಕರು ಹಾಗೂ ಉಸ್ತುವಾರಿ ಸಚಿವರ ಕಚೇರಿಗಳ ಎದುರು ಖಾಲಿ ಚೀಲಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಯಿತು. ಶೀಘ್ರವೇ ಮುಖ್ಯಮಂತ್ರಿಗಳ ಜೊತೆ ಸಭೆ ನಿಗದಿ ಮಾಡಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬೆಂಗಳೂರಿನ ವಿಜಯನಗರದಲ್ಲಿರುವವಸತಿ ಸಚಿವ ವಿ.ಸೋಮಣ್ಣ ಅವರ ಕಚೇರಿಯತ್ತ ಮೆರವಣಿಗೆಯಲ್ಲಿ ಸಾಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.
‘ಜನಾಗ್ರಹ ಹಾಗೂ ಜನಪರ ಸಂಘಟನೆಗಳು ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ಮುಖ್ಯಮಂತ್ರಿಯವರು ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಇವು ಯಾವುದಕ್ಕೂ ಸಾಲುವುದಿಲ್ಲ. ಹಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿದಿದೆ. ಅಲ್ಲಿನ ಜನ ಕೆಲಸವಿಲ್ಲದೆ ಕಂಗೆಟ್ಟಿದ್ದಾರೆ. ಅವರಿಗೆ ಸೂಕ್ತ ನೆರವು ಒದಗಿಸಬೇಕು. ಜೊತೆಗೆ ಕೋವಿಡ್ ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ವೈದ್ಯಕೀಯ ಸೌಲಭ್ಯಗಳನ್ನು ಬಲಪಡಿಸಬೇಕು’ ಎಂದು ಹೋರಾಟಗಾರ ನೂರ್ ಶ್ರೀಧರ್ ತಿಳಿಸಿದರು.
‘ಗ್ರಾಮೀಣ ಭಾಗದಲ್ಲಿ ಕೋವಿಡ್ ಕೇಂದ್ರಗಳನ್ನು ಹೆಚ್ಚಿಸಬೇಕು ಹಾಗೂ ಕೋವಿಡ್ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತಗೊಳಿಸಬೇಕು. ಎಲ್ಲಾ ಬಡ ಕುಟುಂಬಗಳಿಗೆ ಸಮಗ್ರ ಪಡಿತರ ಒದಗಿಸಬೇಕು. ಲಾಕ್‌ಡೌನ್ ಅವಧಿಯಲ್ಲಿ ಮಾಸಿಕ₹5 ಸಾವಿರ ನೆರವು ನೀಡಬೇಕು’ ಎಂದರು.
ಹಿರಿಯ ಸಾಹಿತಿ ಬಿ.ಟಿ.ಲಲಿತಾ ನಾಯ್ಕ್ ‘ಸರ್ಕಾರವು ಅರೆಬರೆ ಪ್ಯಾಕೇಜ್ ಪ್ರಕಟಿಸುವ ಮೂಲಕ ಜನರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಇಂತಹ ನಿಲುವುಗಳಿಂದ ಯಾರಿಗೂ ಪ್ರಯೋಜನವಿಲ್ಲ. ಹೀಗಾಗಿ ಕೂಡಲೇ ಪರಿಪೂರ್ಣವಾದ ಪ್ಯಾಕೇಜ್ ಘೋಷಿಸಿ ಜನರ ಸಂಕಷ್ಟ ದೂರ ಮಾಡಬೇಕು. ನಮ್ಮ ಐದು ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು’ ಎಂದು ಆಗ್ರಹಿಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿಯ ಸಿರಿಮನೆ ನಾಗರಾಜ್ ‘ಲಾಕ್‌ಡೌನ್‌ನಿಂದಾಗಿ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರ ₹2 ಸಾವಿರ ನೆರವು ನೀಡಿದ್ದು, ಅದು ಯಾವುದಕ್ಕೂ ಸಾಲುವುದಿಲ್ಲ. ಕೋವಿಡ್ ಸಂಪೂರ್ಣವಾಗಿ ಕಡಿಮೆಯಾಗುವವರೆಗೂ ಪ್ರತಿ ಬಡ ಕುಟುಂಬಕ್ಕೆ ಸಮಗ್ರ ಪಡಿತರ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
ಜನಾಗ್ರಹ ಆಂದೋಲನದ ಯೂಸುಫ್ ಖನ್ನಿ, ಕರ್ನಾಟಕ ಜನಾಂದೋಲನದ ಮರಿಯಪ್ಪ, ಮಹಿಳಾ ಮುನ್ನಡೆಯ ಗೌರಿ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮುಂಖಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.