ADVERTISEMENT

ಹಿಂದುಳಿದ ವರ್ಗಗಳ ಹೋರಾಟವಾಗಿ ಸಿಗಂದೂರು ವಿವಾದ: ಎಚ್ಚರಿಕೆ

ಅ.29ಕ್ಕೆ ಇದ್ದ ‘ಸಿಗಂದೂರು ಚಲೊ’ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 20:20 IST
Last Updated 26 ಅಕ್ಟೋಬರ್ 2020, 20:20 IST

ಶಿವಮೊಗ್ಗ: ಸಿಗಂದೂರು ದೇವಸ್ಥಾನಕ್ಕೆ ನೂತನವಾಗಿ ನೇಮಿಸಿರುವ ಮೇಲ್ವಿಚಾರಣಾ ಸಮಿತಿ ರದ್ದುಪಡಿಸದಿದ್ದರೆ ಈ ವಿವಾದವನ್ನು ರಾಜ್ಯದ ಹಿಂದುಳಿದ ವರ್ಗಗಳ ಹೋರಾಟವಾಗಿ ರೂಪಿಸಲಾಗುವುದು ಎಂದು ಬಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಪರಿಷತ್‌ ಗೌರವಾಧ್ಯಕ್ಷ ಸತ್ಯಜಿತ್ ಸೂರತ್ಕಲ್ ಎಚ್ಚರಿಸಿದರು.

ಹಿಂದುತ್ವದ ಹೋರಾಟದಲ್ಲಿ ಸಾಕಷ್ಟು ಹಿಂದುಳಿದ ವರ್ಗದ ಜನರ ಬಲಿದಾನವೇ ನಡೆದಿದೆ. ಹಿಂದುಳಿದ ವರ್ಗಗಳ ಬೆಂಬಲದಿಂದಲೇ ಬಿಜೆಪಿ ಅಧಿಕಾರಕ್ಕೇರಿದೆ. ಇಂತಹ ಪಕ್ಷದ ಸರ್ಕಾರ ಹಿಂದುಳಿದ ವರ್ಗದ ಹಿಡಿತದಲ್ಲಿರುವ ದೇವಸ್ಥಾನದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪ, ಆರ್‌ಎಸ್ಎಸ್‌ ಮುಖಂಡ ಪಟ್ಟಾಭಿ ಮಧ್ಯ ಪ್ರವೇಶಿಸಬೇಕು. ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಲು ಬಿಡಬಾರದು. ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಅರ್ಚಕ ಶೇಷಗಿರಿ ಭಟ್ಟರಿಗೆ ಬದ್ಧಿಮಾತು ಹೇಳಬೇಕು ಎಂದು ಆಗ್ರಹಿಸಿದರು.

ADVERTISEMENT

ಇದೇ ತಿಂಗಳು 29ರಂದು ಹಮ್ಮಿಕೊಂಡಿದ್ದ ಸಿಗಂದೂರು ಚಲೊ ಮುಂದೂಡಲಾಗಿದೆ. ಶೇಷಪ್ಪ ನಾಯ್ಕ ಅವರಿಗೆ ದೊರೆತ ಚೌಡೇಶ್ವರಿ ತಾಯಿ ಎಲ್ಲರ ಕಷ್ಟ ಕಳೆದಿದ್ದಾಳೆ. ನೂರಾರು ಮಠಗಳು ಸರ್ಕಾರಿ ಜಮೀನಿನಲ್ಲಿವೆ. ಹಿಂದುಳಿದ ವರ್ಗದ ಆಡಳಿತ ಇರುವ ದೇವಸ್ಥಾನಕ್ಕೆ ಏಕೆ ಆಕ್ಷೇಪಣೆ ಎಂದು ಪ್ರಶ್ನಿಸಿದರು.

‘ನಾನೂ ಆರ್‌ಎಸ್‌ಎಸ್ ಪೂರ್ಣಾವಧಿ ಪದಾಧಿಕಾರಿ. ಉಡುಪಿ ಶ್ರೀಕೃಷ್ಣ ಮಠ ಅಷ್ಟಮಠಕ್ಕೆ ಸೇರಿದ ಕಾರಣ ಕೈಬಿಡಲಾಗಿತ್ತು. ಧರ್ಮಸ್ಥಳ ಒಂದೇ ಕುಟುಂಬಕ್ಕೆ ಸೇರಿದ ದೇವಸ್ಥಾನ. ಅದೇ ರೀತಿ ಶೇಷಪ್ಪ ನಾಯ್ಕರಿಗೆ ದೊರೆತ ಸಿಗಂದೂರು ಈಡಿಗರ ಕ್ಷೇತ್ರ. ಅದು ಈಗ ಹಿಂದುಳಿದ ವರ್ಗಗಳ ತಾಣವಾಗಿದೆ. ಹಾಗಾಗಿ, ಸರ್ಕಾರ ಮುಜರಾಯಿಗೆ ಸೇರಿಸಬಾರದು’ ಎಂದು ಒತ್ತಾಯಿಸಿದರು.

ದೇವಸ್ಥಾನದ ಪಾರದರ್ಶಕತೆಗೆ ಸಲಹಾ ಸಮಿತಿ ರಚನೆ ಆಗಿದೆ. ಇಂತಹ ಕ್ರಮವನ್ನು ಪರಿಷತ್ ಒಪ್ಪುವುದಿಲ್ಲ. ಶೇಷಗಿರಿ ಭಟ್ಟರು ತಮ್ಮ ತಪ್ಪು ತಿದ್ದಿಕೊಳ್ಳಬೇಕು. ದೇವಸ್ಥಾನದಲ್ಲಿ ಬಡಿದಾಟ ನಡೆಸುವುದು ಸಹ್ಯವಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಂಜುನಾಥ್ ನಾಯ್ಕ, ಸೂರಜ್ ನಾಯ್ಕ, ರಾಘವೇಂದ್ರ ನಾಯ್ಕ, ಸುಧಾಕರ್ ಶೆಟ್ಟಿಹಳ್ಳಿ, ಪ್ರವೀಣ್ ಹಿರೇಣಗೌಡ, ಸೈದಪ್ಪ ಗುತ್ತೇದಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.