ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯವರು ಪ್ರತಿಭಟನೆ ಮಾಡಿದರು.
ಪ್ರಜಾವಾಣಿ ಚಿತ್ರ
ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಗಳು, ವಿಧಾನಮಂಡಲ ಚಳಿಗಾಲದ ಅಧಿವೇಶನ ಕೊನೇ ದಿನವಾದ ಗುರುವಾರವೂ ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾದವು.
ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ಶಿಕ್ಷಣ ಪಡೆಯುವಂಥ ನಿಯಮವನ್ನು ಸರ್ಕಾರ ರೂಪಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯವರು ಪ್ರತಿಭಟನೆ ಮಾಡಿದರು.
ರಾಜ್ಯದಲ್ಲಿ ಯುವಜನಾಂಗಕ್ಕೆ ಹೆಚ್ಚಿನ ಉದ್ಯೋಗ ಸೃಷ್ಟಿಸಬೇಕು. ರೈತರಿಗೆ ಮಾರಕವಾದ ಆದೇಶಗಳನ್ನು ಹಿಂಪಡೆಯಬೇಕು. ರಾಜ್ಯದ ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಬಿ.ಟಿ.ಚಂದ್ರಶೇಖರ, ಬಸವರಾಜ ಪಾಟೀಲ, ಸಂಗೀತಾ ಕಾಂಬಳೆ, ಲಕ್ಷ್ಮಿ ಗೋಟೂರ, ಮಹಾದೇವಿ ಕೋಳಿ, ದೇವೇಗೌಡ ಪಾಟೀಲ, ಗೋವಿಂದರಾಜ ಇದ್ದರು.
‘ಅಕ್ಷರ ದಾಸೋಹ ನೌಕರರ ಮಾಸಿಕ ಗೌರವಧನ ₹26 ಸಾವಿರಕ್ಕೆ ಹೆಚ್ಚಿಸಿ’
ಅಕ್ಷರ ದಾಸೋಹ ನೌಕರರ ಮಾಸಿಕ ಗೌರವಧನವನ್ನು ₹26 ಸಾವಿರಕ್ಕೆ ಹೆಚ್ಚಿಸಬೇಕು. ಅಲ್ಲಿಯವರೆಗೆ ಕೇರಳ, ಪುಡಿಚೇರಿ, ತಮಿಳುನಾಡು ಮತ್ತು ಹರಿಯಾಣ ಮಾದರಿಯಲ್ಲಿ ₹7 ಸಾವಿರದಿಂದ ₹12 ಸಾವಿರ ಗೌರವಧನ ಕೊಡಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದವರು ಪ್ರತಿಭಟಿಸಿದರು.
ಸೇವಾ ನಿವೃತ್ತಿ ಹೊಂದಿದವರಿಗೆ ಇಡಿಗಂಟು ನೀಡಬೇಕು. ಪ್ರತಿ ಜಿಲ್ಲೆಯಲ್ಲಿ ಕಡ್ಡಾಯವಾಗಿ ಕ್ಲಸ್ಟರ್ ಮಟ್ಟದ ಸಭೆಗಳನ್ನು ಮಾಡಬೇಕು. ಶಿಕ್ಷಣ ಇಲಾಖೆ ಅಡಿಯೇ ಅಕ್ಷರ ದಾಸೋಹ ಯೋಜನೆ ಮುನ್ನಡೆಸಬೇಕು. ಕರ್ತವ್ಯದ ಅವಧಿಯಲ್ಲಿ ಮೃತಪಟ್ಟವರ ಅವಲಂಬಿತರಿಗೆ ₹25 ಲಕ್ಷ ಪರಿಹಾರ ಕೊಡಬೇಕು. ಯಾವುದೇ ಖಾಸಗಿ ಸಂಸ್ಥೆಗೆ ಬಿಸಿಯೂಟ ಯೋಜನೆ ನಿರ್ವಹಿಸುವ ಜವಾಬ್ದಾರಿ ಕೊಡಬಾರದು. ಬೇಸಿಗೆ ಮತ್ತು ದಸರಾ ರಜೆಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಮಾಲಿನಿ ಮೇಸ್ತಾ, ತುಳಜಾ ಮಾಳದಕರ, ರುಕ್ಮವ್ವ ಬಿಜ್ಜನವರ, ಪಾರ್ವತಿ ಕೌಜಲಗಿ, ಭಾರತಿ ಜೋಗಣ್ಣವರ, ಮಾಲಾ ಪತ್ತಾರ, ಗೈಬು ಜೈನೇಖಾನ್ ಇದ್ದರು.
‘ಕರ್ನಾಟಕ ಆದಿ ಬಣಜಿಗ ಸಮುದಾಯವನ್ನು ಜಾತಿ ಪಟ್ಟಿಯಲ್ಲಿ ಸೇರಿಸಿ’
ಅಖಿಲ ಕರ್ನಾಟಕ ಆದಿ ಬಣಜಿಗ ಸಮಾಜ ಹೋರಾಟ ಸಮಿತಿಯವರು ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು
ಕರ್ನಾಟಕ ಆದಿ ಬಣಜಿಗ ಸಮುದಾಯವನ್ನು ಜಾತಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ, ಅಖಿಲ ಕರ್ನಾಟಕ ಆದಿ ಬಣಜಿಗ ಸಮಾಜ ಹೋರಾಟ ಸಮಿತಿಯವರು ಧರಣಿ ನಡೆಸಿದರು.
ನಮ್ಮನ್ನು ಜಾತಿ ಪಟ್ಟಿಗೆ ಸೇರಿಸುವಂತೆ 26 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಅನೇಕ ಸರ್ಕಾರಗಳು ಮತ್ತು ಹಿಂದುಳಿದ ವರ್ಗಗಳ ಆಯೋಗಕ್ಕೆ ಹಲವು ಬಾರಿ ಮನವಿ ಕೊಟ್ಟಿದ್ದೇವೆ. ಆದರೆ, ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ತಮ್ಮ ಬೇಡಿಕೆ ಈಡೇರಿಸುವಂತೆ ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಕೊಟ್ಟರು. ಮುಖಂಡರಾದ ಎಸ್.ಜಿ.ಗಚ್ಚಿನಕಟ್ಟಿ, ಸುರೇಶ ಗಚ್ಚಿನಕಟ್ಟಿ, ಗಂಗಾಧರ ಸಂಬಣ್ಣಿ, ಹನುಮಂತ ಚಿಂಚಲಿ, ಶಂಕರ ಕುಂಬಾರ ಇತರರಿದ್ದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ: ಮರುನೇಮಕಾತಿಗೆ ಆಗ್ರಹ
2023ರ ಮೇ ತಿಂಗಳಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅಕ್ರಮವಾಗಿ ಮಾಡಿರುವ ಬೋಧಕರು ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ರದ್ದುಪಡಿಸಿ, ಮರುನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಜಾನಪದ ಸ್ನಾತಕೋತ್ತರ ಮತ್ತು ಸಂಶೋಧಕರ ಒಕ್ಕೂಟದವರು ಪ್ರತಿಭಟಿಸಿದರು. ಶಿವಸೋಮಪ್ಪ ನಿಟ್ಟೂರು ನೇತೃತ್ವ ವಹಿಸಿದ್ದರು.
‘ಈಡಿಗ ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಮೀಸಲಿಡಿ’
ಸುವರ್ಣ ವಿಧಾನಸೌಧ ಬಳಿಯ ವೇದಿಕೆಯಲ್ಲಿ ರಾಷ್ಟ್ರೀಯ ಈಡಿಗ ಮಹಾ ಮಂಡಳಿಯವರು ಪ್ರತಿಭಟನೆ ನಡೆಸಿದರು
ರಾಜ್ಯದಲ್ಲಿ ರಚಿಸಿರುವ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು. ಜತೆಗೆ, ಅಧ್ಯಕ್ಷ ಮತ್ತು ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿ, ರಾಷ್ಟ್ರೀಯ ಈಡಿಗ ಮಹಾ ಮಂಡಳಿಯವರು ಪ್ರತಿಭಟಿಸಿದರು.
ನಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಕುಲಶಾಸ್ತ್ರೀಯ ಅಧ್ಯಯನಕ್ಕೆ ಚಾಲನೆ ಕೊಡಬೇಕು. ಬೆಂಗಳೂರಿನ ವಿಧಾನಸೌಧ ಮುಂಭಾಗದಲ್ಲಿ ನಾರಾಯಣ ಗುರುಗಳ ಪುತ್ಥಳಿ ಸ್ಥಾಪಿಸಬೇಕು. ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ನಮ್ಮ ಸಮುದಾಯದ ಮತ್ತೊಬ್ಬರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದರು. ಮಹಾಮಂಡಳಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಣವಾನಂದ ರಾಮಸ್ವಾಮೀಜಿ ನೇತೃತ್ವ ವಹಿಸಿದ್ದರು. ರಾಜ್ಯ ಘಟಕದ ಅಧ್ಯಕ್ಷ ಬಿ.ಎಚ್.ಮಂಚೇಗೌಡ ಇತರರಿದ್ದರು.
ಸಚಿವ ಶರಣಪ್ರಕಾಶ ಪಾಟೀಲ ಮನವಿ ಸ್ವೀಕರಿಸಿ, ‘ನಿಮ್ಮ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವೆ’ ಎಂದು ಭರವಸೆ ಕೊಟ್ಟರು.
‘ಕ್ಷತ್ರಿಯ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪಿಸಿ ’
ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಅಭಿವೃದ್ಧಿ ನಿಗಮ-ಮಂಡಳಿ ಸ್ಥಾಪಿಸಿ, ₹200 ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಸೋಮವಂಶೀಯ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಮತ್ತು ಕರ್ನಾಟಕ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಅಭಿವೃದ್ಧಿ ಹೋರಾಟ ಸಮಿತಿಯವರು ಪ್ರತಿಭಟನೆ ಮಾಡಿದರು.
ಕರ್ನಾಟಕದಲ್ಲಿ ನಮ್ಮ ಜನಸಂಖ್ಯೆ 10 ಲಕ್ಷಕ್ಕೂ ಅಧಿಕವಿದೆ. ಈ ಪೈಕಿ ಕೆಲವರಷ್ಟೇ ಆರ್ಥಿಕವಾಗಿ ಸದೃಢವಿದ್ದಾರೆ. ಉಳಿದವರು ಕಡು ಬಡವರಿದ್ದು, ಸಣ್ಣ-ಪುಟ್ಟ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸಮುದಾಯ ಹಿಂದುಳಿದೆ. ಹಾಗಾಗಿ ನಮ್ಮನ್ನು ನಮ್ಮ ಸಮಾಜಕ್ಕೆ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆಗೊಳಿಸಿ, ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸೋಮವಂಶ ಸಹಸ್ರಾರ್ಜುನ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸುವುದಾಗಿ ಘೋಷಿಸಬೇಕು. ಬೇಡಿಕೆ ಈಡೇರದಿದ್ದರೆ ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಬಿ.ಪಿ.ಹರೀಶ, ಅಭಯ ಪಾಟೀಲ, ಮಹೇಶ ತೆಂಗಿನಕಾಯಿ ಮನವಿ ಸ್ವೀಕರಿಸಿ, ‘ನಿಮ್ಮ ಬೇಡಿಕೆಯನ್ನು ಕಾಂಗ್ರೆಸ್ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.
ರಾಜ್ಯ ಘಟಕದ ಸಂಚಾಲಕ ಹನುಮಂತಸಾ ಚಂದ್ರಕಾಂತಸಾ ನಿರಂಜನ, ಶಶಿಕುಮಾರ ಮೆಹರವಾಡೆ, ಅಶೋಕ ಕಾಟವೆ, ವಿಠ್ಠಲ ಲದವಾ, ನಾಗೇಶ ಕಲಬುರ್ಗಿ, ಕೊಟ್ರೇಶ್ ಮೆಹರವಾಡೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.