ADVERTISEMENT

ದತ್ತಾಂಶ ಆಧರಿಸಿ ಒಳಮೀಸಲಾತಿ ನೀಡಿ: ಮಹದೇವ ಧನ್ನಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 15:27 IST
Last Updated 23 ಮಾರ್ಚ್ 2025, 15:27 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ‘ಹಿಂದೆ ಕೈಗೊಳ್ಳಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಹೊಲಯ ಜಾತಿಯವರನ್ನೂ ಮಾದಿಗರು ಎಂದು ನಮೂದಿಸಿರುವ ಉದಾಹರಣೆಗಳು ಇವೆ. ಹೀಗಾಗಿ ಮತ್ತೆ ವೈಜ್ಞಾನಿಕವಾಗಿ ದತ್ತಾಂಶ ಸಂಗ್ರಹಿಸಿ, ಒಳಮೀಸಲಾತಿ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಬಲಗೈ ಹೊಲಯ ಸಂಬಂಧಿತ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಮಹದೇವ ಧನ್ನಿ ಒತ್ತಾಯಿಸಿದರು.

ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಲಯ ಜಾತಿಗಳ ವಿವಿಧ ಸಮುದಾಯಗಳ ಮುಖಂಡರು, ಒಳಮೀಸಲಾತಿ ಸಂಬಂಧಿತ ವಿಚಾರಣಾ ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

‘ರಾಜ್ಯದ ಎಲ್ಲಡೆ ಹೊಲಯ ಜಾತಿಯ ಉಪಸಮುದಾಯಗಳನ್ನು ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂದೆಲ್ಲಾ ಕರೆಯಲಾಗುತ್ತದೆ. ಇವುಗಳ ನಡುವೆ ಸ್ಪಷ್ಟ ವರ್ಗೀಕರಣ ಇಲ್ಲ. ಬೆಂಗಳೂರು–ಮೈಸೂರು ಭಾಗದಲ್ಲಿ ಇವರನ್ನು ಬಲಗೈ ಸಮುದಾಯಕ್ಕೆ ಸೇರಿಸಿದ್ದರೆ, ಆಂಧ್ರ–ತೆಲಂಗಾಣ ಗಡಿ ಪ್ರದೇಶದಲ್ಲಿ ಎಡಗೈ ಸಮುದಾಯಕ್ಕೆ ಸೇರಿಸಿದ್ದಾರೆ. ಒಳಮೀಸಲಾತಿ ಸೌಲಭ್ಯ ನೀಡುವಲ್ಲಿ ಇದು ತೊಡಕಾಗಲಿದೆ’ ಎಂದರು.

‘ಮತ್ತೆ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು. ಪರಿಶಿಷ್ಟರಲ್ಲಿ ಸ್ಪೃಶ್ಯ, ಅಸ್ಪೃಶ್ಯ ಜಾತಿಗಳು ಮತ್ತು ಕೆನೆಪದರ ಎಂದು ವರ್ಗೀಕರಿಸಬೇಕು. ಆ ಸಮುದಾಯಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಒಳಮೀಸಲಾತಿಗೆ ಶಿಫಾರಸು ಮಾಡಬೇಕು’ ಎಂದು ಮನವಿ ಮಾಡಿದರು.

ಹೊಲಯ ಜಾತಿ ಸಮುದಾಯದ ಪರಿಯಾ, ಮಾಲಾ, ತೆಲುಗು ಮಾಲಾ ಸಮುದಾಯದ ಮುಖಂಡರು ಮನವಿಯನ್ನು ಆಯೋಗದ ಅಧ್ಯಕ್ಷರಿಗೆ ಸಲ್ಲಿಸಿದರು.

ಒಳಮೀಸಲಾತಿ: ಇಂದು ಸಿ.ಎಂ ಸಭೆ

ಬೆಂಗಳೂರು: ಪರಿಶಿಷ್ಟಜಾತಿಗಳಿಗೆ ಒಳಮೀಸಲಾತಿ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಭೆ ಕರೆದಿದ್ದಾರೆ.

ಒಳಮೀಸಲಾತಿ ಕುರಿತು ಹೋರಾಟ ಮತ್ತು ಒತ್ತಡ ಪ್ರಬಲವಾಗುತ್ತಿರುವ ಬೆನ್ನಲ್ಲೇ ಈ ಸಭೆ ಕರೆದಿದ್ದಾರೆ. ಆದ್ದರಿಂದ ಪರಿಶಿಷ್ಟ ಜಾತಿಯ ಸಚಿವರು ತಮ್ಮ ಪ್ರವಾಸಗಳನ್ನು ಮೊಟಕುಗೊಳಿಸಿ, ಸಭೆಗೆ ಹಾಜರಾಗಲು ತೀರ್ಮಾನಿಸಿದ್ದಾರೆ. ಈ ಸಭೆಯಲ್ಲಿ ನ್ಯಾಯಮೂರ್ತಿ ನಾಗಮೋಹನದಾಸ್‌ ಅವರೂ
ಇರಲಿದ್ದಾರೆ.

‘ಒಟ್ಟಾಗಿದ್ದರೆ ಅನುಕೂಲ’

‘ಪರಿಶಿಷ್ಟ ಜಾತಿಗಳನ್ನು ಒಡೆಯುವ ಯತ್ನಗಳು ನಡೆಯುತ್ತಿವೆ. ಸಂಚಿಗೆ ಬಲಿಯಾಗದೆ, ಎಲ್ಲರೂ ಒಟ್ಟಾಗಬೇಕು. ಒಳ
ಮೀಸಲಾತಿಯನ್ನು ಪಡೆದುಕೊಳ್ಳಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಅವರು ಕಿವಿಮಾತು ಹೇಳಿದರು.

‘70 ವರ್ಷಗಳಿಂದ ಮೀಸಲಾತಿ ಅನುಕೂಲ ಪಡೆದ ಸಮುದಾಯಗಳು ಸ್ವಲ್ಪ ಕಡಿಮೆ ತೆಗೆದು
ಕೊಳ್ಳಬೇಕು. ವಂಚಿತ ಸಮುದಾಯಗಳಿಗೆ ತುಸು ಹೆಚ್ಚಿಗೆ ಕೊಡಬೇಕು. ಶೇ17ರಷ್ಟು ಮೀಸಲಾತಿಯಲ್ಲೇ ಈ ಹಂಚಿಕೆ ಮಾಡಬೇಕು. ಇದನ್ನು ಎಲ್ಲ ಸಮುದಾಯಗಳು ಮನಗಾಣಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.