ADVERTISEMENT

ಪಿಎಸ್‌ಐ ನೇಮಕಾತಿ ರದ್ದು ಮಾಡುವ ಮೂಲಕ ಹಗರಣವನ್ನು ಒಪ್ಪಿಕೊಂಡ ಸರ್ಕಾರ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಏಪ್ರಿಲ್ 2022, 13:08 IST
Last Updated 29 ಏಪ್ರಿಲ್ 2022, 13:08 IST
ಪಿಎಸ್‌ಐ ನೇಮಕಾತಿ ಅಕ್ರಮ ಆರೋಪದಲ್ಲಿ ಬಂಧಿತರಾದ ದಿವ್ಯಾ ಹಾಗರಗಿ
ಪಿಎಸ್‌ಐ ನೇಮಕಾತಿ ಅಕ್ರಮ ಆರೋಪದಲ್ಲಿ ಬಂಧಿತರಾದ ದಿವ್ಯಾ ಹಾಗರಗಿ   

ಬೆಂಗಳೂರು: ಪಿಎಸ್‌ಐ ನೇಮಕಾತಿಯನ್ನು ರದ್ದುಗೊಳಿಸಿ ಹಗರಣ ನಡೆದಿದ್ದು ನಿಜ ಎಂಬುದಾಗಿ ಸರ್ಕಾರ ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಕೆಪಿಸಿಸಿ, ‘ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮವೇ ನಡೆದಿಲ್ಲ ಎಂದು ಗೃಹಸಚಿವರು ಸದನದಲ್ಲಿ ಪ್ರತಿಪಾದಿಸಿದ್ದರು. ಈಗ ನೇಮಕಾತಿಯನ್ನು ರದ್ದುಗೊಳಿಸಿ ಹಗರಣ ನಡೆದಿದ್ದು ನಿಜ ಎಂದು ಸರ್ಕಾರ ಒಪ್ಪಿಕೊಂಡಿದೆ. ಸಮರ್ಥನೆ ಮಾಡಿಕೊಂಡಿದ್ದ ಗೃಹಸಚಿವರೇ, ನೀವು ಇನ್ನೂ ಹುದ್ದೆಯಲ್ಲಿ ಮುಂದುವರಿಯಲು ಅರ್ಹರೇ? ಸಾರ್ವಜನಿಕ ಲಜ್ಜೆ ಎನ್ನುವುದು ನಿಮಗಿದ್ದರೆ ಕೂಡಲೇ ರಾಜೀನಾಮೆ ಕೊಟ್ಟುಬಿಡಿ’ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

‘ಪಿಎಸ್‌ಐ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಮರು ಪರೀಕ್ಷೆ ಮಾಡುವ ಚಿಂತನೆಯಲ್ಲಿ ಸರ್ಕಾರ ತೊಡಗಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ಯಾವ ಕ್ರಮ ವಹಿಸಲಿದೆಯೇ?’ ಎಂದು ಕೆಪಿಸಿಸಿ ಪ್ರಶ್ನಿಸಿದೆ.

ADVERTISEMENT

‘ಆಯ್ಕೆಯಾದ ಅಭ್ಯರ್ಥಿಗಳನ್ನು ಸೂಕ್ತ ತನಿಖೆಗೆ ಒಳಪಡಿಸಿಪ್ರಾಮಾಣಿಕ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸರ್ಕಾರದ್ದು’ ಎಂದೂ ಕಾಂಗ್ರೆಸ್‌ ಟ್ವೀಟಿಸಿದೆ.

‘ನ್ಯಾಯಾಲಯ ಆಸ್ತಿ ಜಪ್ತಿಗೆ ಆದೇಶ ಕೊಟ್ಟಿದ್ದಕ್ಕಾಗಿ ದಿವ್ಯಾ ಹಾಗರಗಿಯನ್ನು ಬಂಧಿಸಿ ಆಗಿದೆ. ಇಲ್ಲದಿದ್ದರೆ ಶತಾಯಗತಾಯ ಸರ್ಕಾರ ಬಂಧಿಸುತ್ತಿರಲಿಲ್ಲ. ಬಂಧಿಸುವುದಿದ್ದರೆ ಇಷ್ಟು ದಿನ ಬೇಕಿರಲಿಲ್ಲ’ ಎಂದು ವಾಗ್ದಾಳಿ ನಡೆಸಿದೆ.

‘ಈಗ ಸಾಕ್ಷ್ಯ ನಾಶಕ್ಕೆ ಅನುವು ಮಾಡಿಕೊಡದೆ ಶೇ 40 ಭ್ರಷ್ಟ ಈಶ್ವರಪ್ಪ ಅವರನ್ನು ಯಾವಾಗ ಬಂಧಿಸುತ್ತೀರಿ ಬೊಮ್ಮಾಯಿ ಅವರೇ?’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.