ADVERTISEMENT

ಪಿಎಸ್‌ಐ ನೇಮಕಾತಿ ಪರೀಕ್ಷೆ: ಮೂವರಿಂದ ₹ 90 ಲಕ್ಷ ಪಡೆದ ಆರೋಪಿಗಳು!

ತನಿಖೆ ಸಂದರ್ಭದಲ್ಲಿ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅಭ್ಯರ್ಥಿಗಳು

ಮನೋಜ ಕುಮಾರ್ ಗುದ್ದಿ
Published 28 ಏಪ್ರಿಲ್ 2022, 19:31 IST
Last Updated 28 ಏಪ್ರಿಲ್ 2022, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ಪ್ರಮುಖ ಆರೋಪಿಗಳಾದ ಆರ್‌.ಡಿ. ಪಾಟೀಲ, ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ ಹಾಗೂ ಮಂಜುನಾಥ ಮೇಳಕುಂದಿಗೆ ತಾವು ಒಟ್ಟಾರೆ ₹ 90 ಲಕ್ಷ ಕೊಟ್ಟಿದ್ದಾಗಿ ಬಂಧಿತಮೂವರು ಅಭ್ಯರ್ಥಿಗಳು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ಸಿಐಡಿ ಕಸ್ಟಡಿಯಲ್ಲಿರುವ ಅಭ್ಯರ್ಥಿಗಳಾದ ವಿಶಾಲ್ ಶಿರೂರ ₹ 40 ಲಕ್ಷ ಹಾಗೂ ಎನ್‌.ವಿ. ಸುನೀಲಕುಮಾರ ₹ 40 ಲಕ್ಷ ಹಾಗೂಹಯ್ಯಾಳಿ ದೇಸಾಯಿ ₹ 10 ಲಕ್ಷ ಹಣವನ್ನು ಇವರಿಗೆ ನೀಡಿದ್ದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆರ್‌.ಡಿ. ಪಾಟೀಲ, ಮಹಾಂತೇಶ ಪಾಟೀಲ ಹಾಗೂ ಮಂಜುನಾಥ ಮೇಳಕುಂದಿ ತಮಗೆ ಶಾಲೆಯ ಮೇಲ್ವಿಚಾರಕಿಯರ ನೆರವು ಪಡೆದು ಬ್ಲೂಟೂತ್ ಮೂಲಕ ಉತ್ತರ ಬರೆಸಿದ್ದಲ್ಲದೇ, ಓಎಂಆರ್‌ ಶೀಟ್‌ನಲ್ಲಿ ಸರಿಯಾದ ಉತ್ತರಗಳನ್ನು ಬರೆಯಲು ಸಹಾಯ ಮಾಡಿದ್ದರು ಎಂಬ ಸಂಗತಿಯನ್ನು ಈ ಅಭ್ಯರ್ಥಿಗಳು ವಿಚಾರಣೆ ವೇಳೆ ತಿಳಿಸಿದ್ದಾಗಿ ಸಿಐಡಿ ಮೂಲಗಳು ಹೇಳಿವೆ.

ಹೀಗಾಗಿ, ಆರೋಪಿಗಳು ಇನ್ನಷ್ಟು ಅಭ್ಯರ್ಥಿಗಳಿಂದ ಹಣ ಪಡೆದಿರುವ ಶಂಕೆ ಇರುವುದರಿಂದ ಅಧಿಕಾರಿಗಳು ಶಂಕಿತ ಅಭ್ಯರ್ಥಿಗಳ ಪತ್ತೆಗೆ ಮುಂದಾಗಿದ್ದಾರೆ.

ADVERTISEMENT

ನಾಲ್ವರಿಗೆ ಹಣ: ‘ಅಭ್ಯರ್ಥಿಗಳು ನೀಡಿದ ಹಣವನ್ನು ಅಣ್ಣ ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ ಹಾಗೂ ತಾನು ಪಡೆದಿರುವುದಾಗಿ ಪ್ರಕರಣದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಕಳೆದ ವರ್ಷದ ಅಕ್ಟೋಬರ್ 3ರಂದು ನಡೆದ ಪಿಎಸ್‌ಐ ಪರೀಕ್ಷೆ ಸಂದರ್ಭದಲ್ಲಿ ಆರೋಪಿ ಸುನೀಲಕುಮಾರ ಬಳಸಿದ ಬ್ಲೂಟೂತ್ ಸಾಧನ, ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್‌ಗಳನ್ನು ಪತ್ತೆ ಹಚ್ಚುವ ಯತ್ನದಲ್ಲಿದ್ದೇವೆ‘ ಎನ್ನುವುದು ಈ ಮೂಲಗಳ ಮಾಹಿತಿ.

ಆಸ್ಪತ್ರೆಗೆ ದಾಖಲಾದ ಆರೋಪಿ: ಪ್ರಕರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಗುರುವಾರ ವಾಂತಿ ಮಾಡಿಕೊಂಡು ನಿತ್ರಾಣ ಸ್ಥಿತಿಗೆ ತಲುಪಿದ್ದರಿಂದ ಅವರನ್ನು ಸಿಐಡಿ ಪೊಲೀಸರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಭೇಟಿ ಮಾಡಲು ಆಸ್ಪತ್ರೆಗೆ ತೆರಳಿದ ಅವರ ತಾಯಿ ಹಾಗೂ ಪತ್ನಿಗೆ ಒಳಹೋಗಲು ಪೊಲೀಸರು ಅವಕಾಶ ನೀಡಲಿಲ್ಲ.

ನಗರಸಭೆ ಮಹಿಳಾ ಸಿಬ್ಬಂದಿ ವಶಕ್ಕೆ

ಪಿಎಸ್ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಶಹಾಬಾದ್ ‌ನಗರಸಭೆಯ ದ್ವಿತೀಯ ದರ್ಜೆ ಸಹಾಯಕಿ ಜ್ಯೋತಿ ಪಾಟೀಲ ಎಂಬುವವರನ್ನು ಸಿಐಡಿ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ.

ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್ ‌ಮಾಧ್ಯಮ ಶಾಲೆಯಲ್ಲಿನ ಕೇಂದ್ರದಲ್ಲಿ ಪರೀಕ್ಷೆ ಬರೆದ ಸೇಡಂನ ಶಾಂತಿಬಾಯಿ ಬಸ್ಯನಾಯ್ಕ ಎಂಬುವವರಿಗೆ ಬ್ಲೂಟೂತ್ ಮೂಲಕ ಉತ್ತರ ಹೇಳುವಲ್ಲಿ ಸಹಕರಿಸಿದ ಆರೋಪ‌ ಇವರ ಮೇಲಿದೆ.

ಬೆಂಗಳೂರಿನ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಕೆಲ ಕಾಲ ಕೆಲಸ ಮಾಡಿ ಇತ್ತೀಚೆಗೆ ‌ಶಹಾಬಾದ್ ನಗರಸಭೆಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದರು ಎಂದು ಮೂಲಗಳು ತಿಳಿಸಿವೆ.

ಬೇರೆ ಜಿಲ್ಲೆಗೂ ವ್ಯಾಪಿಸಿದ ಅಕ್ರಮ?

ಇಲ್ಲಿಯವರೆಗಿನ ತನಿಖೆಯು ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರಿಗೆ ಸೇರಿದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಕೇಂದ್ರವಾಗಿಸಿಕೊಂಡು ನಡೆಯುತ್ತಿದೆ. ಇದರ ಜೊತೆಗೆ, ಬೆಂಗಳೂರು ಹಾಗೂ ವಿಜಯಪುರದ ಪರೀಕ್ಷಾ ಕೇಂದ್ರಗಳಲ್ಲಿಯೂ ತಮ್ಮ ಪರಿಚಯದ ಅಭ್ಯರ್ಥಿಗಳು ಇಂಥದೇ ಅಕ್ರಮ ನಡೆಸಿರುವ ಬಗ್ಗೆ ಬಂಧಿತ ಅಭ್ಯರ್ಥಿಗಳು ಬಾಯಿಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಿಯಾಂಕ್‌ಗೆ ಮತ್ತೊಂದು ನೋಟಿಸ್

ಪಿಎಸ್ಐ ಅಕ್ರಮ ನೇಮಕಾತಿ ಹಗರಣ ಸಂಬಂಧ ಇತ್ತೀಚೆಗೆ ಆಡಿಯೊ ಬಿಡುಗಡೆ ‌ಮಾಡಿದ್ದಕ್ಕೆ ನೀಡಿದ ನೋಟಿಸ್‌ಗೆ ಶಾಸಕ ಪ್ರಿಯಾಂಕ್‌ ಖರ್ಗೆ ಉತ್ತರ ನೀಡಿದ್ದು, ಸಿಐಡಿ ಅಧಿಕಾರಿಗಳು ಅವರಿಗೆ ಮತ್ತೊಂದು ನೋಟಿಸ್ ನೀಡಿದ್ದಾರೆ.

ಗುರುವಾರ ಬೆಳಿಗ್ಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವಾಗಲೇ ಅಲ್ಲಿಗೆ ತೆರಳಿದ ಸಿಐಡಿ ಅಧಿಕಾರಿಗಳು ಪ್ರಿಯಾಂಕ್ ಅವರ ಸಿಬ್ಬಂದಿಗೆ ಎರಡನೇ ನೋಟಿಸ್ ತಲುಪಿಸಿದರು.

‘ಸಿಐಡಿ ಅಧಿಕಾರಿಗಳು ಕಲಂ 91 ಹಾಗೂ 160ರ ಅಡಿಯಲ್ಲಿ ನೀಡಿರುವ ನೋಟಿಸ್‌, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಉತ್ತರ ನೀಡಿದ್ದೇನೆ‘ ಎಂದು ಪ್ರಿಯಾಂಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.