ADVERTISEMENT

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಡಿವೈಎಸ್ಪಿ ಆಪ್ತ ‘ಆರ್‌ಪಿಐ’ ಸೇರಿ ಇಬ್ಬರ ಬಂಧನ

ಚುರುಕುಗೊಂಡ ತನಿಖೆ l ಬಂಧಿತರಿಬ್ಬರು 10 ದಿನ ಸಿಐಡಿ ಕಸ್ಟಡಿಗೆ

​ಪ್ರಜಾವಾಣಿ ವಾರ್ತೆ
Published 16 ಮೇ 2022, 20:11 IST
Last Updated 16 ಮೇ 2022, 20:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಅವರ ಆಪ್ತ ರಿಸರ್ವ್ ಪೊಲೀಸ್ ಇನ್‌ಸ್ಪೆಕ್ಟರ್ (ಆರ್‌ಪಿಐ) ಜಿ. ಬಸವರಾಜ್ ಸೇರಿದಂತೆ ಇಬ್ಬರನ್ನು ಸೋಮವಾರ ಬಂಧಿಸಿದ್ದಾರೆ.

‘ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕೋಳಿಗುಡ್ಡದ ಬಸವರಾಜ್, ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ವೃತ್ತಿ ಆರಂಭಿಸಿದ್ದರು. ಇನ್ನೊಬ್ಬ ಬಂಧಿತ ಸಿ.ಎಂ. ನಾರಾಯಣ, ಪಿಎಸ್‌ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿ. ಇಬ್ಬರನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಬಸವರಾಜ್ ಅವರನ್ನು ನಿಯೋಜನೆ ಮೇರೆಗೆ ಪೊಲೀಸ್ ನೇಮಕಾತಿ ವಿಭಾಗಕ್ಕೆ ಕಳುಹಿಸಲಾಗಿತ್ತು. ಪ್ರಕರಣದಲ್ಲಿ ಈಗಾಗಲೇ ಬಂಧಿಸಲಾಗಿರುವ ಡಿವೈಎಸ್ಪಿ ಶಾಂತಕುಮಾರ್ ಅಧೀನದಲ್ಲಿ ಬಸವರಾಜ್ ಕೆಲಸ ಮಾಡುತ್ತಿದ್ದ. ಒಎಂಆರ್ ಪ್ರತಿಗಳನ್ನು ಇರಿಸಿದ್ದ ಕೊಠಡಿ ಭದ್ರತೆ ಜವಾಬ್ದಾರಿ ವಹಿಸಿಕೊಂಡಿದ್ದ.’

ADVERTISEMENT

‘ಒಎಂಆರ್ ಪ್ರತಿಗಳ ಟ್ರಂಕ್‌ ಬೀಗ ಹಾಗೂ ಕೀಗಳು ಶಾಂತಕುಮಾರ್ ಮನೆಯಲ್ಲಿ ಸಿಕ್ಕಿದ್ದವು. ಟ್ರಂಕ್‌ಗಳ ಬೀಗಗಳನ್ನು ಶಾಂತಕುಮಾರ್ ಅವರಿಗೆ ನೀಡಿರುವ ವ್ಯಕ್ತಿಗಳಲ್ಲಿ ಬಸವರಾಜ್ ಸಹ ಒಬ್ಬರು. ಜೊತೆಗೆ, ಕೆಲ ಅಭ್ಯರ್ಥಿಗಳನ್ನು ಮಧ್ಯವರ್ತಿಗಳ ಮೂಲಕ ಸಂಪರ್ಕಿಸಿ ಅಕ್ರಮ ಎಸಗಲು ನೆರವಾಗಿದ್ದರು’ ಎಂದೂ ಸಿಐಡಿ ಮೂಲಗಳು ತಿಳಿಸಿವೆ.

32ನೇ ಆರೋಪಿ: ‘ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದ 22 ಅಭ್ಯರ್ಥಿಗಳ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡು, ಮತ್ತಷ್ಟು ಆರೋಪಿಗಳ ಹೆಸರು ಸೇರಿಸಲಾಗಿದೆ. ಸದ್ಯ ಬಂಧಿಸಿರುವ ಬಸವರಾಜ್, 32ನೇ ಆರೋಪಿ’ ಎಂದು ಸಿಐಡಿ ಮೂಲಗಳು ಹೇಳಿವೆ.

ತಲೆಮರೆಸಿಕೊಂಡಿದ್ದ ಅಭ್ಯರ್ಥಿ: ‘ಅಕ್ರಮ ಎಸಗಿದ್ದ ಅಭ್ಯರ್ಥಿ ಸಿ.ಎಂ. ನಾರಾಯಣ್, ಪ್ರಕರಣದ 12ನೇ ಆರೋಪಿ. ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಆತನನ್ನು ವಿಶೇಷ ತಂಡ ಬಂಧಿಸಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

‘ಕಗ್ಗಲಿಪುರದ ಚಿನ್ನಕುರ್ಚಿ ಗ್ರಾಮದ ನಾರಾಯಣ್ ಹಾಗೂ ಆತನ ಸಹೋದರ ನಾಗರಾಜ್, ಅಕ್ರಮವಾಗಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗಲು ಮಧ್ಯವರ್ತಿಯಾಗಿದ್ದ ಎಂಜಿನಿಯರ್ ಮಂಜುನಾಥ್ ಮೇಳಕುಂದಿಗೆ ₹ 1 ಕೋಟಿ ನೀಡಿದ್ದರೆಂಬ ಮಾಹಿತಿ ಇದೆ. ಅವರಿಬ್ಬರ ಒಎಂಆರ್ ಪ್ರತಿ ತಿದ್ದಿ ಅಕ್ರಮ ಎಸಗಲಾಗಿತ್ತು. ಒಎಂಆರ್ ಕಾರ್ಬನ್ ಪ್ರತಿ ಪರಿಶೀಲನೆ ವೇಳೆ ಈತನ ಅಕ್ರಮ ಪತ್ತೆಯಾಗಿತ್ತು. ನಾಗರಾಜ್‌ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು’ ಎಂದೂ ಹೇಳಿವೆ.

‘ಪಿಎಸ್‌ಐ ಹುದ್ದೆಗೆ ಅಕ್ರಮವಾಗಿ ಆಯ್ಕೆಯಾಗಲು ಸಹೋದರರು, ಮಧ್ಯವರ್ತಿಯಾಗಿದ್ದ ಎಂಜಿನಿಯರ್ ಮಂಜುನಾಥ್ ಮೇಳಕುಂದಿಗೆ ₹ 1 ಕೋಟಿ ನೀಡಿದ್ದರೆಂದು ಗೊತ್ತಾಗಿದೆ. ಸಹೋದರರು ಅಕ್ರಮವಾಗಿ ಆಯ್ಕೆಯಾಗಿದ್ದು, ಒಎಂಆರ್ ಪರಿಶೀಲನೆ ವೇಳೆ ಪತ್ತೆಯಾಗಿತ್ತು’ ಎಂದೂ ಮೂಲಗಳು ತಿಳಿಸಿವೆ.

ನಾಲ್ವರು ನ್ಯಾಯಾಂಗ ಬಂಧನಕ್ಕೆ

ಸಿಐಡಿ ಅಧಿಕಾರಿಗಳು ಬಂಧಿಸಿ ಕಸ್ಟಡಿಗೆ ಪಡೆದಿದ್ದ ಅಭ್ಯರ್ಥಿಗಳಾದ ಜಿ.ಸಿ. ರಾಘವೇಂದ್ರ, ಸೋಮನಾಥ್ ಹಿರೇಮಠ ಹಾಗೂ ಮಧ್ಯವರ್ತಿಗಳಾದ ಕೇಶವಮೂರ್ತಿ, ಶಶಿಧರ್ ಅವರನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಭಾವಿ ರಾಜಕಾರಣಿ, ಹಿರಿಯ ಅಧಿಕಾರಿಗಳ ವಿಚಾರಣೆ?

‘ಡಿವೈಎಸ್ಪಿ ಶಾಂತಕುಮಾರ್ ಹಾಗೂ ಇತರರ ವಿಚಾರಣೆ ಮುಂದುವರಿದಿದ್ದು, ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಅನುಮಾನ ಬಂದಿದೆ. ಪ್ರಭಾವಿ ರಾಜಕಾರಣಿ ಹಾಗೂ ಕೆಲ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕಿದೆ. ಹೀಗಾಗಿ, ಅವರನ್ನು ವಿಚಾರಣೆ ಮಾಡಲು ಚಿಂತನೆ ನಡೆದಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.