ADVERTISEMENT

ಪಿಎಸ್‌ಐ ಅಕ್ರಮ: ಮತ್ತಷ್ಟು ಮಂದಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 28 ಮೇ 2022, 20:28 IST
Last Updated 28 ಮೇ 2022, 20:28 IST
   

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪೌಲ್ ಅವರನ್ನು ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಅವರ ಹೇಳಿಕೆ ಆಧರಿಸಿ ಮತ್ತಷ್ಟು ಮಂದಿ ವಿಚಾರಣೆ ನಡೆಸಲುಮುಂದಾಗಿದ್ದಾರೆ.

ಪಿಎಸ್ಐ ನೇಮಕಾತಿ ಜವಾಬ್ದಾರಿ ವಹಿಸಿಕೊಂಡಿದ್ದ ವಿಭಾಗವೇ ಅಕ್ರಮದ ಕೇಂದ್ರವೆಂಬುದು ಸಿಐಡಿ ತನಿಖೆಯಿಂದ ಈಗಾಗಲೇ ಬಯಲಾಗಿತ್ತು. ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಹಾಗೂ ನೌಕರರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.

‘ನೇಮಕಾತಿ ವಿಭಾಗ ನೌಕರರ ಕೃತ್ಯದಲ್ಲಿ ಎಡಿಜಿಪಿ ಪಾತ್ರವಿರುವ ಮಾಹಿತಿ ಇದೆ. ಅವರನ್ನು ಇತ್ತೀಚೆಗೆ ಎರಡು ದಿನ ವಿಚಾರಣೆ ನಡೆಸಲಾಗಿದೆ. ಪುನಃ ವಿಚಾರಣೆಗೆ ಬರುವಂತೆ ಶೀಘ್ರವೇ ನೋಟಿಸ್ ನೀಡಲಾಗುವುದು. ಈಗಾಗಲೇ ನೀಡಿರುವ ಹೇಳಿಕೆಯಲ್ಲಿ ಉಲ್ಲೇಖವಿರುವ ವ್ಯಕ್ತಿಗಳನ್ನೂ ವಿಚಾರಣೆ ಮಾಡಲಾಗುತ್ತಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

ADVERTISEMENT

‘ಪ್ರಕರಣ ಭೇದಿಸಲು ಹಲವು ವಿಶೇಷ ತಂಡಗಳನ್ನು ರಚಿಸಲಾಗಿದೆ. ಬೆಂಗಳೂರು ಹಾಗೂ ಹೊರ ಜಿಲ್ಲೆಗಳಲ್ಲೂ ಹಲವರನ್ನು ವಿಚಾರಣೆ ನಡೆಸಿ, ಮಾಹಿತಿ ಕಲೆಹಾಕಲಾಗುತ್ತಿದೆ. ಸೂಕ್ತ ಪುರಾವೆಗಳನ್ನು ಆಧಾರವಾಗಿಟ್ಟುಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದೂತಿಳಿಸಿವೆ.

ಮಧ್ಯವರ್ತಿಗಳ ಮೇಲೆ ನಿಗಾ: ‘ಕೆಲ ಪೊಲೀಸರು, ಕೆಲ ರಾಜಕಾರಣಿಗಳು ಹಾಗೂ ಇತರರು, ಪ್ರಕರಣದಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡಿದ್ದಾರೆ. ಅಂಥವರ ಪಟ್ಟಿ ಸಿದ್ಧಪಡಿಸಲಾಗಿದ್ದು, ಅವರೆಲ್ಲರ ಮೇಲೆ ನಿಗಾ ವಹಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.