ADVERTISEMENT

ಪಿಎಸ್ಐ ಮರು ಪರೀಕ್ಷೆ ಅನಿವಾರ್ಯ: ಗೃಹ ಸಚಿವ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 19 ಮೇ 2022, 9:37 IST
Last Updated 19 ಮೇ 2022, 9:37 IST
ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ   

ರಾಮನಗರ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬಹುವಿಧದ ಅಕ್ರಮಗಳು ನಡೆದಿರುವ ಕಾರಣ ಮರು‌ ಪರೀಕ್ಷೆ ಅನಿವಾರ್ಯವಾಗಿದೆ. ಕಷ್ಟ ಪಟ್ಟು ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವ ವಿಚಾರದಲ್ಲಿ ನಾವು ಅಸಹಾಯಕರಾಗಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಇಲ್ಲಿನ ಎಸ್.ಪಿ. ಕಚೇರಿಯಲ್ಲಿ ಗುರುವಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಕರ್ತರ ಜೊತೆ ಅವರು‌ ಮಾತನಾಡಿದರು.

ಪರೀಕ್ಷಾರ್ಥಿಗಳು ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿ, ಕೇವಲ‌ ಒಂದು ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದ್ದರೆ ಆ ಕೇಂದ್ರಕ್ಕೆ ಸಂಬಂಧಿಸಿ ಮಾತ್ರ‌ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಇಲಾಖೆಯ ಕೇಂದ್ರ ಕಚೇರಿಯಲ್ಲಿದ್ದ ಒಎಂಆರ್ ಪ್ರತಿಗಳನ್ನೇ ತಿದ್ದಲಾಗಿದೆ. ಬ್ಲೂಟೂತ್ ಬಳಸಿ ಅಕ್ರಮ ಎಸಗಲಾಗಿದೆ. ಹೀಗಾಗಿ ಮರು ಪರೀಕ್ಷೆ ಅನಿವಾರ್ಯ ಆಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

ಈ ಹಿಂದೆ ಹಲವು ಪರೀಕ್ಷಾ ಅಕ್ರಮಗಳು ನಡೆದಿದ್ದರೂ ಸರ್ಕಾರಗಳು ಕ್ರಮ ಕೈಗೊಂಡಿರಲಿಲ್ಲ. ಆದರೆ ಈ ಬಾರಿ ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿದ್ದೇವೆ. ಡಿವೈಎಸ್ಪಿ ದರ್ಜೆಯ ಅಧಿಕಾರಿಗಳ ಸಹಿತ ಅಕ್ರಮಕ್ಕೆ ಸಹಕರಿಸಿದ ಎಲ್ಲರನ್ನೂ ಈಗಾಗಲೇ ಬಂಧಿಸಿದ್ದೇವೆ. ಮುಕ್ತ ತನಿಖೆ ನಡೆಸಲು ಸಿಐಡಿಗೆ ಅವಕಾಶ ನೀಡಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.