ADVERTISEMENT

ಪಿಎಸ್‌ಐ ಅಕ್ರಮ: ಮೊದಲ ರ‍್ಯಾಂಕ್‌ಗೆ 30 ಲಕ್ಷ ನೀಡಿದ್ದ ರಚನಾ - ಸಿಐಡಿ ತನಿಖೆ

ತಲೆಮರೆಸಿಕೊಂಡಿರುವ ಮಹಿಳಾ ಅಭ್ಯರ್ಥಿಗಾಗಿ ಹುಡುಕಾಟ

ಸಂತೋಷ ಜಿಗಳಿಕೊಪ್ಪ
Published 6 ಆಗಸ್ಟ್ 2022, 21:15 IST
Last Updated 6 ಆಗಸ್ಟ್ 2022, 21:15 IST
ರಚನಾ ಹನುಮಂತ
ರಚನಾ ಹನುಮಂತ   

ಬೆಂಗಳೂರು: 545 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್ಐ) ನೇಮಕಾತಿಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ರಚನಾ ಹನುಮಂತ, ₹ 30 ಲಕ್ಷ ನೀಡಿದ್ದರೆಂಬ ಮಾಹಿತಿ ಸಿಐಡಿ ತನಿಖೆಯಿಂದ ಹೊರಬಿದ್ದಿದೆ.

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಐಡಿ, ರಚನಾ ಹಾಗೂ ಪೊಲೀಸ್ ನೇಮಕಾತಿ ವಿಭಾಗದ ಸಿಬ್ಬಂದಿ ನಡುವಿನ ಹಣದ ವ್ಯವಹಾರದ ದಾಖಲೆಯನ್ನು ಬಿಚ್ಚಿಟ್ಟಿದೆ.

‘ವಿಜಯಪುರದ ಬಸವನಬಾಗೇವಾಡಿಯ ರಚನಾ, ಎಂಜಿನಿಯರಿಂಗ್ ಪದವೀಧರೆ. ಪಿಎಸ್ಐ ಹುದ್ದೆಗೆ ನೇಮಕಗೊಳ್ಳಲು ಮಧ್ಯವರ್ತಿಗಳ ಮೂಲಕ ಪೊಲೀಸ್ ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹರ್ಷ ನನ್ನು ಸಂಪರ್ಕಿಸಿದ್ದರು. ₹ 35 ಲಕ್ಷ ನೀಡುವುದಾಗಿ ಒಪ್ಪಂದ ಮಾಡಿಕೊಂಡು, ₹ 30 ಲಕ್ಷ ಮುಂಗಡ ನೀಡಿದ್ದರು’ ಎಂಬ ಮಾಹಿತಿ ದೋಷಾರೋಪ ಪಟ್ಟಿಯಲ್ಲಿದೆ.

ADVERTISEMENT

‘ಹಣ ಪಡೆದಿದ್ದ ಹರ್ಷ, ಆರೋ ಪಿಯೂ ಆಗಿರುವ ಡಿವೈಎಸ್ಪಿ ಶಾಂತ ಕುಮಾರ್ ಅವರಿಗೆ ನೀಡಿದ್ದ. ಮೊದಲೇ ಯೋಜಿಸಿದ ರೀತಿಯಲ್ಲಿ ವಿಭಾಗದ ಭದ್ರತಾ ಕೊಠಡಿಯಲ್ಲೇ ರಚನಾ ಒಎಂಆರ್ ಪ್ರತಿ ತಿದ್ದಲಾಗಿತ್ತು. ರಚನಾ ಅವರಿಗೆ ಪತ್ರಿಕೆ–1ರಲ್ಲಿ (ಪ್ರಬಂಧ, ಭಾಷಾಂತರ, ಸಾರಾಂಶ ಬರಹ) 25 ಅಂಕ ಹಾಗೂ ಪತ್ರಿಕೆ–2ರಲ್ಲಿ (ಸಾಮಾನ್ಯ ಅಧ್ಯಯನ) 128.25 ಅಂಕ ಬಂದಿತ್ತು. ಒಟ್ಟು 153.25 ಅಂಕದೊಂದಿಗೆ ಮಹಿಳಾ ವಿಭಾಗದಲ್ಲಿ ರಚನಾ ಮೊದಲ ರ‍್ಯಾಂಕ್ ಪಡೆದಿದ್ದರು’ ಎಂಬ ಸಂಗತಿಯೂ ಪಟ್ಟಿಯಲ್ಲಿದೆ.

ಆರ್‌ಪಿಐಗಳೇ ಮಧ್ಯ ವರ್ತಿ ಗಳು: ‘ಕರ್ನಾಟಕ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಇನ್‌ಸ್ಪೆಕ್ಟರ್‌ಗಳಾದ ಎಸ್‌.ವಿ. ಮಧು ಹಾಗೂ ಗುರುವ ಬಸವರಾಜ ಅವರೇ ಮಧ್ಯವರ್ತಿಗಳಾಗಿ ರಚನಾ ಅವರಿಂದ ಹಣ ಪಡೆದು ಹರ್ಷನಿಗೆ ಕೊಡಿಸಿದ್ದರು. ಇದರಲ್ಲಿ ತಮ್ಮ ಪಾಲು ಪಡೆದುಕೊಂಡಿದ್ದರು’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ಎಫ್‌ಡಿಎ ಹರ್ಷ, ಅಭ್ಯರ್ಥಿಗಳನ್ನು ಹುಡುಕಲು ಸಂಬಂಧಿಯೂ ಆದ ಮಧುಗೆ ಹೇಳಿದ್ದ. ಅದೇ ಮಧು, ಗುರವ ಬಸವರಾಜನಿಗೂ ವಿಷಯ ತಿಳಿಸಿದ್ದ. ರಚನಾ ಅವರಿಗೆ ಬಸವರಾಜ ಮೂಲಕವೇ ಹರ್ಷನ ಸಂಪರ್ಕ ಸಿಕ್ಕಿತ್ತು’ ಎಂಬ ಅಂಶ ಪಟ್ಟಿಯಲ್ಲಿದೆ.

ಪ್ರತಿಭಟನೆಯಲ್ಲಿದ್ದ ರಚನಾ: ‘ಅಕ್ರಮ ಬಯಲಾಗುತ್ತಿದ್ದಂತೆ ಮರು ಪರೀಕ್ಷೆ ನಡೆಸುವುದಾಗಿ ಸರ್ಕಾರ ಆದೇಶಿಸಿತ್ತು. ಇದರ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ರಚನಾ ಪಾಲ್ಗೊಂಡಿದ್ದರು. ನಂತರ, ವಿಚಾರಣೆ ಗಾಗಿ ನೋಟಿಸ್ ನೀಡುತ್ತಿದ್ದಂತೆ ರಚನಾ ತಲೆಮರೆಸಿಕೊಂಡಿದ್ದಾರೆ’ ಎಂದು ಸಿಐಡಿ ಮೂಲಗಳು ಹೇಳಿವೆ. ‘ರಚನಾ ಕೃತ್ಯದ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಪ್ರಾಥಮಿಕ ಮಾಹಿತಿ ಮಾತ್ರ ಉಲ್ಲೇಖಿಸಲಾಗಿದೆ. ಅವರನ್ನು ಬಂಧಿಸಿದ ಬಳಿಕ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದೂ ತಿಳಿಸಿವೆ.

‘₹ 45 ಲಕ್ಷಕ್ಕೆ 6ನೇ ರ‍್ಯಾಂಕ್’

‘ರಚನಾ ಜೊತೆಯಲ್ಲೇ ಇನ್ನೊಬ್ಬ ಅಭ್ಯರ್ಥಿ ಎಚ್‌.ಆರ್.ಪ್ರವೀಣ್‌ಕುಮಾರ್ ಸಹ ₹ 30 ಲಕ್ಷ ನೀಡಿದ್ದ. ಈತ ಸಹ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದಿದ್ದ’ ಎಂಬ ಮಾಹಿತಿ ಪಟ್ಟಿಯಲ್ಲಿದೆ.

‘ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಹೊದಿಕೆ ಹೊಸಹಳ್ಳಿ ಗ್ರಾಮದ ಪ್ರವೀಣ್‌ಕುಮಾರ್, ₹ 45 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದ. ಮುಂಗಡವಾಗಿ ₹ 30 ಲಕ್ಷ ನೀಡಿದ್ದ. ಆಯ್ಕೆ ಪಟ್ಟಿ ಪ್ರಕಟಗೊಂಡ ಬಳಿಕ ಉಳಿದ ಹಣ ನೀಡುವುದಾಗಿ ಹೇಳಿದ್ದ’ ಎಂಬುದನ್ನು ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.