ADVERTISEMENT

ಪಿಎಸ್‌ಐ ನೇಮಕಾತಿ ಹಗರಣದಲ್ಲೂ 'ವಿಜಯೇಂದ್ರ ಸೇವಾ ತೆರಿಗೆ': ಕಾಂಗ್ರೆಸ್‌ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2022, 15:48 IST
Last Updated 9 ಸೆಪ್ಟೆಂಬರ್ 2022, 15:48 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರೇ, ಪಿಎಸ್‌ಐ ಅಕ್ರಮದಲ್ಲಿ ನಿಮ್ಮ ಸಂಪುಟ ಸಚಿವರು, ಶಾಸಕರ ಕೈವಾಡ ಬಯಲಾದರೂ ಕಣ್ಮುಚ್ಚಿ ಕುಳಿತಿದ್ದೀರಿ. 54,000 ಯುವಕರಿಗೆ ಮೋಸ ಮಾಡಿದ್ದನ್ನು ಸಾಧನೆ ಎಂದು 'ಜನವೇದನ' ಸಮಾವೇಶದಲ್ಲಿ ಹೇಳಿಕೊಳ್ಳುವಿರಾ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ, ‘ರಾಜ್ಯದ 54 ಸಾವಿರ ಪಿಎಸ್‌ಐ ಅಭ್ಯರ್ಥಿಗಳಿಗೆ ವಂಚಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರದ್ದು ಯಾವ ಸಾಧನೆ? ತಮ್ಮ ಕಚೇರಿಯೇ ಅಕ್ರಮದ ಅಡ್ಡೆಯಾಗಿದ್ದರೂ ಸದನದಲ್ಲಿ ಸುಳ್ಳು ಹೇಳಿ ನಾಡಿನ ದಿಕ್ಕು ತಪ್ಪಿಸಲು ಯತ್ನಿಸಿದ ಗೃಹ ಸಚಿವರದ್ದು 'ಜನಸ್ಪಂದನೆ'ಯ ಸಾಧನೆಯೇ? ಈ ವಂಚನೆಯನ್ನು ಸಮಾವೇಶದಲ್ಲಿ ಹೇಳುವಿರಾ’ ಎಂದು ಕೇಳಿದೆ.

‘ಒಂದೆಡೆ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ನಮ್ಮದು ಪಾರದರ್ಶಕ ತನಿಖೆ ಎನ್ನುತ್ತಾರೆ ಸಿಎಂ. ಇನ್ನೊಂದೆಡೆ ಪಿಎಸ್‌ಐ ಅಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ ತಮ್ಮ ಸಹೋದರರೊಂದಿಗೆ ಸೇರಿ ಅಕ್ರಮ ನಡೆಸಿದ ಸಂಗತಿ ಬೆಳಕಿಗೆ ಬಂದರೂ ಸಚಿವರ ತನಿಖೆ ಇಲ್ಲ. ಪ್ರಕರಣ ಮುಚ್ಚಿಹಾಕಲು ಯತ್ನಿಸುವುದೇ ನಿಮ್ಮ ಸಾಧನೆಯೇ’ ಎಂದು ಬಿಜೆಪಿ ಸರ್ಕಾರಕ್ಕೆ ಪ್ರಶ್ನಿಸಿದೆ.

ADVERTISEMENT

‘ರಾಜ್ಯದ ಇತಿಹಾಸದಲ್ಲೇ ಎಡಿಜಿಪಿಯೊಬ್ಬರು ಅಕ್ರಮದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದು ಇದೇ ಮೊದಲು. ಉನ್ನತ ಮಟ್ಟದ ಅಧಿಕಾರಿಗಳು ಸರ್ಕಾರ ಹಾಗೂ ಮಂತ್ರಿಗಳು ಸಹಕಾರವಿಲ್ಲದೆ ಅಕ್ರಮವನ್ನು ನಡೆಸಲು ಸಾಧ್ಯವೇ ಇಲ್ಲ. ಮಂತ್ರಿಗಳ ವಿಚಾರಣೆ ನಡೆಸದೆ ಭ್ರಷ್ಟರನ್ನು ರಕ್ಷಿಸಿರುವುದೇ ಬಿಜೆಪಿ ಸರ್ಕಾರದ ಸಾಧನೆ’ ಎಂದು ವಾಗ್ದಾಳಿ ನಡೆಸಿದೆ.

‘ಪಿಎಸ್‌ಐ ಹಗರಣದಲ್ಲೂ ವಿಜಯೇಂದ್ರ ಸೇವಾ ತೆರಿಗೆ ಮುಂದುವರೆದಿದೆ. ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಪರೋಕ್ಷವಾಗಿ ಈ ಸಂಗತಿಯನ್ನು ಬಹಿರಂಗಪಡಿಸಿದರೂ ತನಿಖೆಯಾಗುವುದಿಲ್ಲ. ವಿಜಯೇಂದ್ರ ಅವರಿಗೆ ತಮ್ಮ ತಂದೆಯ ಆಡಳಿತದಲ್ಲಿ ಸಿಕ್ಕ ‘ಸೂಪರ್ ಸಿಎಂ’ ಹುದ್ದೆ ನಿಮ್ಮ ಅವಧಿಯಲ್ಲೂ ಮುಂದುವರಿದಿದೆಯೇಬೊಮ್ಮಾಯಿ ಅವರೇ’ ಎಂದು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.