ADVERTISEMENT

ಪಿಎಸ್‌ಐ ಅಕ್ರಮ: ಸದನದಲ್ಲಿ ಆಡಳಿತ– ವಿರೋಧ ಪಕ್ಷ ಜಟಾಪಟಿ

*‘ಪ್ರಜಾವಾಣಿ’ ಸಂಪಾದಕೀಯ ಪ್ರದರ್ಶಿಸಿದ ಸಿದ್ದರಾಮಯ್ಯ *ಸುಳ್ಳುಪತ್ತೆ ಪರೀಕ್ಷೆಗೆ ಸಹಕರಿಸದ ಪೌಲ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 16:30 IST
Last Updated 20 ಸೆಪ್ಟೆಂಬರ್ 2022, 16:30 IST
   

ಬೆಂಗಳೂರು: 545 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ವಿಧಾನಸಭೆಯಲ್ಲಿ ಆಡಳಿತ– ವಿರೋಧ ಪಕ್ಷದ ನಡುವೆ ತೀವ್ರ ಜಟಾಪಟಿಗೆ ಕಾರಣವಾಯಿತು. ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಪಟ್ಟು ಹಿಡಿದರೆ, ಕಾಂಗ್ರೆಸ್‌ ಆಡಳಿತದ ಅವಧಿಯ ಪರೀಕ್ಷಾ ಅಕ್ರಮಗಳನ್ನು ಕೆದಕಿ ಬಿಜೆಪಿ ಸದಸ್ಯರು ತಿರುಗೇಟು ನೀಡಿದರು.

ಪ್ರಕರಣದ ಕುರಿತು ನಿಯಮ 69ರಡಿ ಸುದೀರ್ಘ ಕಾಲ ಚರ್ಚೆ ನಡೆಯಿತು. ‘ಸರ್ಕಾರದಲ್ಲಿರುವವರು ಶಾಮೀಲಾಗಿದ್ದಾರೆ’ ಎಂದು ಪ್ರತಿಪಕ್ಷ ಕಾಂಗ್ರೆಸ್‌ನ ಸದಸ್ಯರು ಆರೋಪಿಸಿದರೆ, ‘ಕಾಂಗ್ರೆಸ್‌ ಕಾಲದಲ್ಲೂ ನೇಮಕಾತಿ ಅಕ್ರಮಗಳು ನಡೆದಿವೆ’ ಎಂದು ಆಡಳಿತ ಪಕ್ಷದ ಸದಸ್ಯರು ಪ್ರತ್ಯುತ್ತರದ ಗುರಾಣಿ ಹಿಡಿದರು. ಗದ್ದಲ, ಘೋಷಣೆ, ಧರಣಿಯಿಂದ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು.

‘ಪಿಎಸ್‌ಐ ನೇಮಕಾತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವ ಮೊದಲೇ ಅಕ್ರಮದ ಕುರಿತು ದೂರುಗಳು ಸಲ್ಲಿಕೆಯಾಗಿದ್ದವು. ಆದರೆ, ‘ಅಕ್ರಮವೇ ನಡೆದಿಲ್ಲ’ ಎಂದು ಗೃಹ ಸಚಿವರು ವಿಧಾನ ಪರಿಷತ್‌ನಲ್ಲಿ ಮೂರು ಬಾರಿ ಉತ್ತರ ನೀಡಿದ್ದರು. ‘ಹಿರಿಯ ಅಧಿಕಾರಿಗಳು ದೂರುಗಳನ್ನು ಪರಿಶೀಲಿಸಿದ್ದಾರೆ, ಅಕ್ರಮ ನಡೆದಿಲ್ಲ ಎಂಬ ವರದಿ ನೀಡಿದ್ದಾರೆ’ ಎಂದು ತಿಳಿಸಿದ್ದರು. ಅಂತಹ ವರದಿ ನೀಡಿದ ಅಧಿಕಾರಿಗಳು ಯಾರು? ಬಹಿರಂಗಪಡಿಸಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ADVERTISEMENT

‘ಪ್ರಕರಣದ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ನಮ್ಮ ಸದಸ್ಯ ಪ್ರಿಯಾಂಕ್‌ ಖರ್ಗೆ ಅವರಿಗೆ ಪೊಲೀಸರು ಮೂರು ಬಾರಿ ನೋಟಿಸ್‌ ನೀಡಿದ್ದರು. ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ನೀಡಿದ್ದರು. ಬಿಜೆಪಿ ಶಾಸಕ ಬಸವರಾಜ ದಢೇಸುಗೂರ್‌, ಪಿಎಸ್‌ಐ ನೇಮಕಾತಿ ಮಾಡಿಸಿಕೊಡುವುದಾಗಿ ₹ 15 ಲಕ್ಷ ಪಡೆದಿರುವ ಆರೋಪಕ್ಕೆ ಸಂಬಂಧಿಸಿದ ಆಡಿಯೊ ಬಹಿರಂಗವಾಗಿದೆ. ಈ ಬಗ್ಗೆ ಏಕೆ ತನಿಖೆ ನಡೆದಿಲ್ಲ’ ಎಂದು ‍ಪ್ರಶ್ನಿಸಿದರು.

ಪ್ರಿಯಾಂಕ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದ ವಿಚಾರ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡರು. ಕಾಂಗ್ರೆಸ್‌ನ ಹಲವರು ಪೊಲೀಸರ ಕ್ರಮವನ್ನು ಟೀಕಿಸಿದರು.

‘ಈ ಪ್ರಕರಣಕ್ಕ ಸಂಬಂಧಿಸಿದ ಸಾಕ್ಷ್ಯ ನನ್ನ ಬಳಿ ಇದೆ ಎಂದು ಪ್ರಿಯಾಂಕ್‌ ಹೇಳಿದ್ದರು. ಈಗ ಸುಳ್ಳು ಹೇಳುತ್ತಿದ್ದಾರೆ. ಸಾಕ್ಷ್ಯವಿದ್ದರೆ ತನಿಖಾಧಿಕಾರಿ ಎದುರು ಹಾಜರಾಗಿ ದಾಖಲೆ ಕೊಡಿ ಎಂದು ನೋಟಿಸ್‌ ನೀಡುವುದು ತಪ್ಪೆ’ ಎಂದು ಬೊಮ್ಮಾಯಿ ಮತ್ತು ಮಾಧುಸ್ವಾಮಿ ಪ್ರಶ್ನಿಸಿದರು.

ಪ್ರಕರಣದ ಕುರಿತು ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸುವಂತೆ ಆಗ್ರಹಿಸಿ ಕಾಂಗ್ರೆಸ್‌ ಸದಸ್ಯರು ಧರಣಿ ಆರಂಭಿಸಿದರು. ಬಿಜೆಪಿ ಸದಸ್ಯರು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೇಮಕಾತಿ ಅಕ್ರಮಗಳು ನಡೆದಿವೆ ಎಂಬ ಆರೋಪವುಳ್ಳ ಫಲಕ ಹಿಡಿದು ಘೋಷಣೆ ಕೂಗಲಾರಂಭಿಸಿದರು. ಗದ್ದಲದ ನಡುವೆಯೇ ಗೃಹ ಸಚಿವರು ಉತ್ತರ ನೀಡಿದರು.

---

‘ದಢೇಸಗೂರ್‌ ಆಡಿಯೊ ತನಿಖೆ ವ್ಯಾಪ್ತಿಗೆ’

‘ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ ದಢೇಸಗೂರ್‌ ವಿರುದ್ಧದ ಆರೋಪ ಹಾಗೂ ಆಡಿಯೊ ಕುರಿತೂ ತನಿಖೆ ನಡೆಯಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ದಢೇಸಗೂರ್‌ ವಿರುದ್ಧದ ಆರೋಪದ ಕುರಿತು ತನಿಖೆ ಅಗತ್ಯ ಎಂದು ‘ಪ್ರಜಾವಾಣಿ’ ಪ್ರಕಟಿಸಿದ್ದ ಸಂಪಾದಕೀಯವನ್ನು ಸದನದಲ್ಲಿ ಪ್ರದರ್ಶಿಸಿದ ಸಿದ್ದರಾಮಯ್ಯ, ‘ಬಿಜೆಪಿ ಶಾಸಕರ ವಿರುದ್ಧ ತನಿಖೆ ಏಕಿಲ್ಲ’ ಎಂದು ಪ್ರಶ್ನಿಸಿದರು. ಆಗ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ತನಿಖೆ ನಡೆಸುವುದಾಗಿ ಪ್ರಕಟಿಸಿದರು.
----
ನನ್ನ ವಿರುದ್ಧವೂ ತನಿಖೆ ನಡೆಸಿ: ಪ್ರಿಯಾಂಕ್‌ ಸವಾಲು

‘ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿದ್ದ ಆಡಿಯೊ ಆಧರಿಸಿ ನಾನು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದೆ. ಅದನ್ನೇ ಮುಂದಿಟ್ಟುಕೊಂಡು ನನ್ನನ್ನು ಹಣಿಯುವ ಷಡ್ಯಂತ್ರ ನಡೆಯಿತು. ಈಗ ಸರ್ಕಾರಕ್ಕೆ ತಾಕತ್ತಿದ್ದರೆ ನ್ಯಾಯಾಂಗ ತನಿಖೆಗೆ ಆದೇಶಿಸಲಿ. ನನ್ನ ವಿರುದ್ಧವೂ ತನಿಖೆ ನಡೆಸಲಿ’ ಎಂದು ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದರು.

----
ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ: ಆರಗ ಜ್ಞಾನೇಂದ್ರ

‘ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ದೂರು ಬರುತ್ತಿದ್ದಂತೆ ನಾನೇ ತನಿಖೆಗೆ ಆದೇಶಿಸಿದ್ದೇನೆ. ಸರ್ಕಾರದಿಂದ ಯಾವ ಲೋಪವೂ ಆಗಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಯುತ್ತಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ‘ಪ್ರಕರಣದಲ್ಲಿ ಈವರೆಗೆ ಪೊಲೀಸ್‌ ಅಧಿಕಾರಿಗಳೂ ಸೇರಿದಂತೆ 97 ಮಂದಿಯನ್ನು ಬಂಧಿಸಲಾಗಿದೆ. ಕಾಂಗ್ರೆಸ್‌ ಕಾರ್ಯಕರ್ತ ಆರ್‌.ಡಿ. ಪಾಟೀಲ ಸೇರಿದಂತೆ ಹಲವರ ಬಳಿ ಇದ್ದ ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ’ ಎಂದರು.

‘ನೇಮಕಾತಿ ವಿಭಾಗದ ಎಡಿಜಿಪಿ ಹುದ್ದೆಯಲ್ಲಿದ್ದ ಅಮ್ರಿತ್‌ ಪೌಲ್‌ ಅವರನ್ನೂ ಬಂಧಿಸಲಾಗಿದೆ. ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಅವರು ಸಹಕರಿಸಿಲ್ಲ. ಮುಕ್ತ ಮತ್ತು ಪಾರದರ್ಶಕ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಬಿಡುವುದಿಲ್ಲ’ ಎಂದು ಹೇಳಿದರು.

ಸಚಿವರಾದ ಆರ್‌. ಅಶೋಕ, ಡಾ.ಕೆ. ಸುಧಾಕರ್‌ ಮತ್ತು ಗೋವಿಂದ ಕಾರಜೋಳ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.

-----
‘ಅರ್ಹರಿಗೆ ನ್ಯಾಯ ಒದಗಿಸಿ’

‘ಲಂಚ ಕೊಟ್ಟು ಕೆಲಸ ಪಡೆಯಲು ಯುವಜನರು ರಾಜಕಾರಣಿಗಳನ್ನು ಸಂಪರ್ಕಿಸುತ್ತಾರೆ ಎಂಬುದು ಗುಟ್ಟೇನೂ ಅಲ್ಲ. ಈ ವ್ಯವಸ್ಥೆಯೇ ಅಂತಹ ಸ್ಥಿತಿ ನಿರ್ಮಿಸಿದೆ. ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದ 545 ಮಂದಿಯೂ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂಬುದನ್ನು ತನಿಖೆ ಹೇಳುತ್ತಿದೆ. ಅರ್ಹರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.