ADVERTISEMENT

ಪಿಎಸ್‌ಐ ಹಗರಣ ₹500 ಕೋಟಿ ಮೀರಿದ್ದು: ಇ.ಡಿ ಏಕೆ ಬರುತ್ತಿಲ್ಲ ಎಂದು ಎಎಪಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 15:32 IST
Last Updated 18 ಸೆಪ್ಟೆಂಬರ್ 2022, 15:32 IST
   

ಬೆಂಗಳೂರು: ಪಿಎಸ್ಐ ಹಗರಣ ಬರೀ ₹4 ಕೋಟಿಯದ್ದಲ್ಲ, ₹500 ಕೋಟಿಗೂ ಮೀರಿದ್ದು. ಜಾರಿ ನಿರ್ದೇಶನಾಲಯ ಈಗ ಏಕೆ ಬರುತ್ತಿಲ್ಲ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಪ್ರಶ್ನೆ ಮಾಡಿದೆ.

ಈ ಬಗ್ಗೆ ಎಎಪಿಯ ಬೆಂಗಳೂರು ಘಟಕದ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಭಾನುವಾರ ಟ್ವೀಟ್‌ ಮಾಡಲಾಗಿದೆ.

‘ಪಿಎಸ್‌ಐ ನೇಮಕಾತಿ ಹಗರಣ ಎಂಬುದು ಸಣ್ಣದೇನು ಅಲ್ಲ. ಇದರಲ್ಲಿ ₹500 ಕೋಟಿಗಳ ಅವ್ಯವಹಾರ ನಡೆದಿದೆ. ಇ.ಡಿ ಈಗ ಏಕೆ ಬರುತ್ತಿಲ್ಲ? ಇ.ಡಿ ಎಂಬುದು ವಿರೋಧ ಪಕ್ಷಗಳ ಮೇಲೆ ಮಾತ್ರ ದಾಳಿ ಮಾಡುವ ಬಿಜೆಪಿಯ ಕೈಗೊಂಬೆಯೇ?’ ಎಂದು ಎಎಪಿ ಪ್ರಶ್ನೆ ಮಾಡಿದೆ.

ADVERTISEMENT

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿ ನಿರ್ದಿಷ್ಟ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಪೊಲೀಸ್‌ ನೇಮಕಾತಿ ವಿಭಾಗದ ಮುಖ್ಯಸ್ಥರೂ ಆಗಿದ್ದ ಎಡಿಜಿಪಿ ಅಮ್ರಿತ್‌ ಪೌಲ್‌ ಅವರನ್ನು ಸಿಐಡಿ ಬಂಧಿಸಿದೆ. ಪರೀಕ್ಷೆಯಲ್ಲಿ ಅಗತ್ಯ ಅಂಕಗಳೊಂದಿಗೆ ತೇರ್ಗಡೆ ಹೊಂದಲು ಹಲವು ಅಭ್ಯರ್ಥಿಗಳು ತಲಾ ₹ 80 ಲಕ್ಷದವರೆಗೆ ಲಂಚ ನೀಡಿದ್ದಾರೆ ಎಂದು ಹೇಳಲಾಗಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ₹100 ಕೋಟಿಗೂ ಅಧಿಕ ಮೊತ್ತ ಕೈಯಿಂದ ಕೈಗೆ ಬದಲಾಗಿದೆ ಎಂದು ಹೇಳಲಾಗುತ್ತಿದೆ.

545 ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿ ರಾಜ್ಯಕ್ಕೆ ಮೊದಲ ರ‍್ಯಾಂಕ್ (ಮಹಿಳಾ ವಿಭಾಗ) ಪಡೆದಿದ್ದ ರಚನಾ ಹನುಮಂತ, ತಾನು ಕೆಲಸ ಮಾಡುತ್ತಿದ್ದ ಕಂಪನಿ ಸಹೋದ್ಯೋಗಿ ಸಹಾಯದಿಂದ ಪೊಲೀಸ್ ನೇಮಕಾತಿ ವಿಭಾಗದ ಸಿಬ್ಬಂದಿಯನ್ನು ಸಂಪರ್ಕಿಸಿ ಒಪ್ಪಂದ ಮಾಡಿಕೊಂಡಿದ್ದ ಮಾಹಿತಿ ಸಿಐಡಿ ತನಿಖೆಯಿಂದ ಗೊತ್ತಾಗಿದೆ. ಕೆಲಸ ಗಿಟ್ಟಿಸಿಕೊಳ್ಳಲು ರಚನಾ ₹30 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದರು ಎಂಬುದು ಬಯಲಾಗಿದೆ.

ಪಿಎಸ್ಐ‌ ನೇಮಕಾತಿ ಮಾಡಿಸಿಕೊಡುವುದಾಗಿ‌ ಹೇಳಿ ವ್ಯಕ್ತಿಯೊಬ್ಬರಿಂದ ₹15 ಲಕ್ಷ ಪಡೆದ ಬಗ್ಗೆ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಢೇಸಗೂರ ಅವರ ಮೇಲೆ ಆರೋಪ ಕೇಳಿಬಂದಿದೆ. ಈ ಕುರಿತು ಆಡಿಯೊ ವೈರಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.