ADVERTISEMENT

6–7ನೇ ತರಗತಿಗೆ ಬೋಧನೆ: ಪಿಎಸ್‌ಟಿ ಶಿಕ್ಷಕರಿಗೆ ಸರ್ಕಾರ ಅಸ್ತು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 17:33 IST
Last Updated 18 ಅಕ್ಟೋಬರ್ 2025, 17:33 IST
   

ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರಿಗೆ (ಪಿಎಸ್‌ಟಿ) ಆರು ಮತ್ತು ಏಳನೇ ತರಗತಿಗೆ ಪಾಠ ಮಾಡಲು ಅವಕಾಶ ಕಲ್ಪಿಸಿ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು 15 ದಿನಗಳ ಅವಕಾಶ ನೀಡಿದೆ.

ವೃಂದ ಮತ್ತು ನೇಮಕಾತಿ ನಿಯಮ–2017ಕ್ಕೆ ಸರ್ಕಾರ ತಿದ್ದುಪಡಿ ತಂದಿದೆ. ಇದರಿಂದ ಪದವಿ, ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪ್ರಮಾಣ ಪತ್ರ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ವೃಂದ ಮತ್ತು ನೇಮಕಾತಿ ನಿಯಮಕ್ಕೆ 2017ರಲ್ಲಿ ತಿದ್ದುಪಡಿ ತರುವುದಕ್ಕೆ ಮೊದಲು ಜಾರಿಯಲ್ಲಿದ್ದಂತೆ ಏಳನೇ ತರಗತಿಯವರೆಗೂ ಬೋಧಿಸಲು ಅವಕಾಶ ಸಿಗಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಅನುಗುಣವಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮ ಬದಲಾಯಿಸಿ, ಹೊಸ ವೃಂದ ಮತ್ತು ನೇಮಕಾತಿ ನಿಯಮವನ್ನು ರೂಪಿಸಲಾಗಿತ್ತು. ಇದರಿಂದ 1ರಿಂದ 5ನೇ ತರಗತಿಯವರೆಗೆ ಬೋಧಿಸುವ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 6 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪ್ರತ್ಯೇಕಗೊಳಿಸಲಾಗಿತ್ತು. ಇದರ ಪರಿಣಾಮ 2016ಕ್ಕಿಂತ ಮೊದಲು 1ರಿಂದ 7 ಹಾಗೂ 1ರಿಂದ 8ರ ವೃಂದಕ್ಕೆ ನೇಮಕವಾಗಿದ್ದ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು 1ರಿಂದ 5ನೇ ತರಗತಿಗೆ ಸೀಮಿತಗೊಂಡಿದ್ದರು.  

ADVERTISEMENT

ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಹುದ್ದೆ ಹಾಗೂ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗಳ ಬಡ್ತಿಯಲ್ಲೂ ಪದವೀಧರ ಶಿಕ್ಷಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಹಲವಾರು ವರ್ಷಗಳಿಂದ ಕರ್ತವ್ಯ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರು, ಇತ್ತೀಚಿಗೆ ಬಂದ ಪದವೀಧರ ಶಿಕ್ಷಕರ ಕೈಕೆಳಗೆ ಕೆಲಸ ಸಲ್ಲಿಸುವಂತಾಗಿತ್ತು. ಹುದ್ದೆಗಳ ಮರುವಿಂಗಡಣೆಯಲ್ಲೂ ಪದವೀಧರ ಶಿಕ್ಷಕರಿಗೆ ಆದ್ಯತೆ ನೀಡಿದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹುದ್ದೆಗಳ ಕೊರತೆ ಎದುರಾಗಿತ್ತು. 

ಅನ್ಯಾಯ ಖಂಡಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ 2017ರಿಂದಲೂ ಹೋರಾಟ ನಡೆಸುತ್ತಾ ಬಂದಿತ್ತು. ಒಂದು ಬಾರಿ ವೇತನ ಬಡ್ತಿ ಹಾಗೂ  ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿಗೆ ಅವಕಾಶ ಕಲ್ಪಿಸಲು ವೃಂದ ಮತ್ತು ನೇಮಕಾತಿ ನಿಯಮ–2017ಕ್ಕೆ ತಿದ್ದುಪಡಿ ತರಲು ಈಚೆಗೆ ನಡೆದ ಸಂಪುಟ ಸಭೆ ಸಮ್ಮತಿಸಿತ್ತು.

ಟಿಇಟಿ ಅರ್ಹತೆಗೆ ಶಿಕ್ಷಕರ ಸಂಘ ಆಕ್ಷೇಪ

ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕರಿಗೂ 2017ಕ್ಕೂ ಹಿಂದೆ ಇದ್ದಂತೆ ಅವಕಾಶ ನೀಡಬೇಕು. ಟಿಇಟಿ ಅರ್ಹತೆಯನ್ನು ಕಡ್ಡಾಯ ಮಾಡಬಾರದು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಒತ್ತಾಯಿಸಿದ್ದಾರೆ. ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುತ್ತಿಲ್ಲ. ಹಿಂದೆ ಇದ್ದ ಅವಕಾಶವನ್ನು ಕಿತ್ತುಕೊಂಡಿದ್ದನ್ನು ಮರಳಿಸುತ್ತಿದೆ. ಸುಪ್ರೀಂಕೋರ್ಟ್‌ ತೀರ್ಪು ಮುಂದಿಟ್ಟುಕೊಂಡು ಟಿಇಟಿ ಅರ್ಹತೆಯನ್ನು ಪೂರ್ವಾನ್ವಯ ಮಾಡಬಾರದು. ವೃಂದ ಮತ್ತು ನೇಮಕಾತಿಗೆ ಏಳು ವರ್ಷಗಳ ಹಿಂದೆ ತಿದ್ದುಪಡಿ ತರುವ ಮೊದಲು ಇದ್ದಂತೆ ಪುನರ್‌ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.  ಈ ಕುರಿತು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲಾಗುವುದು. ಸುಪ್ರೀಂಕೋರ್ಟ್‌ಗೆ ಈಗಾಗಲೇ ರಾಷ್ಟ್ರೀಯ ಶಿಕ್ಷಕರ ಫೆಡರೇಷನ್‌ ವತಿಯಿಂದ ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಟಿಇಟಿ: 23ರಿಂದ ಅರ್ಜಿ ಸಲ್ಲಿಕೆ

ಬೆಂಗಳೂರು: ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)’ ಡಿಸೆಂಬರ್‌ 7ರಂದು ನಡೆಯಲಿದ್ದು, ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅ.23 ರಿಂದ ನ.9ರವರೆಗೆ ಅರ್ಜಿ ಸಲ್ಲಿಸಬಹುದು.

ಮಾಹಿತಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವೆಬ್‌ಸೈಟ್‌ www.schooleducation.kar.nic.in ನಲ್ಲಿ  ಪ್ರಕಟಿಸಿರುವ ಸೂಚನೆಗಳನ್ನು ಗಮನಿಸಬೇಕು ಎಂದು ಕೇಂದ್ರೀಕೃತ ದಾಖಲಾತಿ ಘಟಕ ಸೂಚಿಸಿದೆ.

‘ಡಿ.31ರ ಒಳಗೆ ಫಲಿತಾಂಶ ಪ್ರಕಟಿಸಲಾಗುವುದು. ನಂತರ ಕಲ್ಯಾಣ ಕರ್ನಾಟಕ ಸೇರಿದಂತೆ 18 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗೆ ಸಿಇಟಿ ನಡೆಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ವೇಳೆಗೆ ನೇಮಕಾತಿ ಆದೇಶ ನೀಡಲಾಗುವುದು’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.