ADVERTISEMENT

ಜಾಲತಾಣದಲ್ಲಿ ಸಿಗುತ್ತಿಲ್ಲ ಪರೀಕ್ಷಾ ಪ್ರವೇಶ ಪತ್ರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2019, 19:24 IST
Last Updated 16 ಫೆಬ್ರುವರಿ 2019, 19:24 IST

ಬೆಂಗಳೂರು: ದ್ವಿತೀಯ ಪಿ.ಯು.ವಾರ್ಷಿಕ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿರುವ ಲಕ್ಷಾಂತರ ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ಜಾಲತಾಣದಿಂದ ಡೌನ್‌ಲೋಡ್‌ ಆಗುತ್ತಿಲ್ಲ. ಇದರಿಂದ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿ ಸಮೂಹ ಆತಂಕಕ್ಕೆ ಒಳಗಾಗಿದೆ.

‘ಪ್ರವೇಶ ಪತ್ರಗಳನ್ನು ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಅವುಗಳನ್ನು ಡೌನ್‌ಲೋಡ್‌ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಿ’ ಎಂದು ಇಲಾಖೆ ಆಯುಕ್ತರು ಫೆ.14ರಂದು ತಿಳಿಸಿದ್ದರು. ಈ ಪ್ರಕ್ರಿಯೆ ಆರಂಭವಾಗಿ ಎರಡು ದಿನಗಳು ಕಳೆದರೂ ಪ್ರಾಂಶುಪಾಲರು ತಮ್ಮ ಐಡಿಯಿಂದ ಜಾಲತಾಣಕ್ಕೆ ಲಾಗಿನ್‌ ಆಗಿ ಪ್ರವೇಶ ಪತ್ರಗಳನ್ನು ಪಡೆಯಲಾಗುತ್ತಿಲ್ಲ. ‘ಕನೆಕ್ಷನ್‌ ಟೈಮ್‌ ಔಟ್‌’ ಎಂದು ಸೂಚನಾ ಸಂದೇಶ ಬಿತ್ತರಗೊಳ್ಳುತ್ತಿದೆ.

‘ಈ ಕುರಿತು ಪರೀಕ್ಷಾ ವಿಭಾಗದ ಅಧಿಕಾರಿಗಳನ್ನು ಕೇಳಿದರೆ, ಪ್ರವೇಶ ಪತ್ರಗಳನ್ನು ಪಡೆಯಲು ಸಾವಿರಾರು ಪ್ರಾಂಶುಪಾಲರು ಏಕಕಾಲಕ್ಕೆ ಲಾಗಿನ್‌ ಆಗುವುದರಿಂದ ಹೀಗೆ ಆಗುತ್ತದೆ. ಒಂದೆರಡು ದಿನಗಳಲ್ಲಿ ತಾಂತ್ರಿಕ ದೋಷ ಸರಿಯಾಗುತ್ತದೆ ಎಂದು ಉತ್ತರ ನೀಡುತ್ತಿದ್ದಾರೆ’ ಎಂದು ಕೊಪ್ಪಳ ಜಿಲ್ಲೆಯ ಕಾಲೇಜು ಒಂದರ ಪ್ರಾಂಶುಪಾಲರು ತಿಳಿಸಿದರು.

ADVERTISEMENT

ಪ್ರವೇಶ ಪತ್ರದಲ್ಲಿ ಮಾಹಿತಿಯ ದೋಷ ಕಂಡುಬಂದರೆ, ಅದನ್ನು ತಿದ್ದುಪಡಿ ಮಾಡಿ, ಅದರ ನಕಲು ಪ್ರತಿಗಳನ್ನು ಇಲಾಖೆಗೆ ಫೆ.20ರೊಳಗೆ ಸಲ್ಲಿಸಬೇಕಿದೆ. ಮಾರ್ಚ್‌ 1ರಿಂದ ಪರೀಕ್ಷೆ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.