ಬೆಂಗಳೂರು:ಶಾಸಕರ ರೆಸಾರ್ಟ್ ರಾಜಕಾರಣ, ರಾಜೀನಾಮೆ ಪ್ರಹಸನ ಕುರಿತು ಅಭಿಪ್ರಾಯ ತಿಳಿಸುವಂತೆ ಪತ್ರಿಕೆ ಮಾಡಿಕೊಂಡಿದ್ದ ಮನವಿಗೆ ಒಂದೇ ದಿನ 200ಕ್ಕೂ ಹೆಚ್ಚು ಜನ ಸ್ಪಂದಿಸಿದ್ದಾರೆ. ಈ ಪೈಕಿ, ಕೆಲವರ ಅಭಿಪ್ರಾಯ ಇಲ್ಲಿದ್ದು, ಉಳಿದವನ್ನು ಪ್ರಜಾವಾಣಿ ವೆಬ್‌ಸೈಟ್‌ನಲ್ಲಿ ನೋಡಬಹುದು.
ಕಾಯ್ದೆಗಳಿಗೆ ತಿದ್ದುಪಡಿ ತನ್ನಿ
ಕಾನೂನಿನಲ್ಲಿನ ಕೆಲವು ಅಂಶಗಳೇ ಇಂಥದ್ದಕ್ಕೆಲ್ಲ ಕಾರಣವಾಗಿದೆ. ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು. ಯಾವುದೇ ಜನಪ್ರತಿನಿಧಿ ರಾಜೀನಾಮೆ ನೀಡುವ ಮುನ್ನ ಹಲವು ಬಾರಿ ಯೋಚಿಸಬೇಕು. ಅಂಥ ಕಾನೂನು ರೂಪಿಸಬೇಕು.
-ಪ್ರಶಾಂತ ಹೊಸಮನಿ,ನಾಗಠಾಣ, ವಿಜಯಪುರ
**
ನೋಟಾಗೆ ಬಹುಮತ ಖಚಿತ!
ಸರ್ಕಾರದಲ್ಲಿ ಸಚಿವ ಸ್ಥಾನ ದೊರೆತಿಲ್ಲ ಎಂದು ರಾಜೀನಾಮೆ ನೀಡುವ ಶಾಸಕರು ನಮಗೆ ಬೇಡ. ಅಧಿಕಾರ ದಾಹವಿಲ್ಲದವರು ಜನಪ್ರತಿನಿಧಿಗಳಾಗಬೇಕು. ರಾಜಕೀಯ ಪಕ್ಷಗಳು ಇಂತಹ ಸ್ವಾರ್ಥಿಗಳಿಗೆ ಮತ್ತೆ ಮಣೆ ಹಾಕಿದರೆ ನೋಟಾಕ್ಕೆ ಬಹುಮತ ಸಿಗುವುದು ನಿಶ್ಚಿತ!
-ರಾಧಿಕಾ,ಕುಂದಾಪುರ
**
ಸಾಮೂಹಿಕ ನಿವೃತ್ತಿ ಘೋಷಿಸಿ
ಸದ್ಯ ಅಧಿಕಾರದಲ್ಲಿರುವ ರಾಜಕಾರಣಿಗಳೂ ಸಾಮೂಹಿಕವಾಗಿ ನಿವೃತ್ತಿ ಘೋಷಿಸುವಂತೆ ಮಾಡಬೇಕು. ನಿಷ್ಠಾವಂತರು, ವಿದ್ಯಾವಂತರನ್ನೊಳಗೊಂಡವರನ್ನು ಅಭ್ಯರ್ಥಿಗಳಾಗಿ ಆಯಾ ಕ್ಷೇತ್ರದ ಜನರೇ ಆಯ್ಕೆ ಮಾಡಿ, ಮುಂದಿನ ಚುನಾವಣೆಯಲ್ಲಿ ಅವರನ್ನೇ ಗೆಲ್ಲಿಸಬೇಕು.
-ಬಿ. ರೇವಣಸಿದ್ದಪ್ಪ,ಹರಪನಹಳ್ಳಿ, ಬಳ್ಳಾರಿ
**
ಮಾನ–ಮರ್ಯಾದಿ ಇಲ್ಲ!
ಈ ರಾಜಕಾರಣಿಗಳ ನಾಟಕ ನೋಡಿ ಸಾಕಾಗೈತಿ... ಇವ್ರಿಗೆ ನಾಚಿಕಿ, ಮಾನ, ಮರ್ಯಾದಿ ಇಲ್ಲ ಅನಸ್ತದ. ಕುರ್ಚಿ ಮ್ಯಾಗ ಅದೇನ್ ಮೋಹ.. ಹಾವು ಸಾಯಂಗಿಲ್ಲ, ಕೋಲೂ ಮುರಿಯಂಗಿಲ್ಲ ಅನ್ನೋಹಂಗ ಈ ಸರ್ಕಾರದ ಸ್ಥಿತಿ ಆಗೇತಿ.
-ಕಲ್ಪನಾ ಪಾಟೀಲ,ಕೆರೂರ, ಬಾದಾಮಿ
**
ಸೇವೆಗಿಂತ ಸ್ವಲಾಭವೇ ಮುಖ್ಯ
ರೆಸಾರ್ಟ್ ರಾಜಕಾರಣದ ಮೂಲಕ ಪಕ್ಷಗಳು ಜನರಿಗೆ ತಪ್ಪು ಸಂದೇಶ ನೀಡುತ್ತಿವೆ. ಪಕ್ಷದ ವರಿಷ್ಠರು ಪ್ರಾಮಾಣಿಕ ಕಾರ್ಯಕರ್ತರಿಗೆ ಆದ್ಯತೆ ನೀಡದೆ ಕುತಂತ್ರಿಗಳಿಗೆ ಮಣೆ ಹಾಕಿದಾಗ ಇಂತಹ ಸ್ಥಿತಿ ಸೃಷ್ಟಿಯಾಗುತ್ತದೆ. ಇವರಿಗೆ ಸೇವೆಗಿಂತ ಸ್ವಲಾಭವೇ ಮುಖ್ಯ.
-ಮೈಲಾರಿ ಮಾದಾಪುರ,ಇಂಜಿನವಾರಿ, ಬೆಳಗಾವಿ
**
ಎಂದಿಗೂ ಗೆಲ್ಲಿಸಬೇಡಿ!
ಅಧಿಕಾರ ಮತ್ತು ಹಣಕ್ಕಾಗಿ ರಾಜೀನಾಮೆ ನೀಡುವ ಶಾಸಕರು ಮುಂದೆ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಜನರು ಅವರನ್ನು ಪರಾಭವಗೊಳಿಸಬೇಕು. ರಾಜ್ಯದ ಘನತೆ–ಗೌರವಗಳನ್ನು ಕಾಪಾಡುವ, ಪ್ರಜಾಪ್ರಭುತ್ವವನ್ನು ರಕ್ಷಿಸುವವರಿಗೆ ಆದ್ಯತೆ ನೀಡಬೇಕು.
-ನಾನಾಸಾಹೇಬ ಎಸ್.ಹಚ್ಚಡದ, ಕಲಬುರಗಿ
**
ಶಾಸಕರ ಈ ರೆಜಾರ್ಟ್‌ರಾಜಕಾರಣದಿಂದ ರಾಜ್ಯದ ಅಭಿವೃದ್ದಿ ಕುಂಠಿತಗೊಳ್ಳುತ್ತಿರುವುದು ವಿಷಾದದ ಸಂಗತಿ. ಶಿಕ್ಷಣ ಕ್ಷೇತ್ರದಲ್ಲಿನ ಮತ್ತು ನೇಮಾಕಾತಿಗಳ ವಿಳಂಬದಿಂದ ಪರೀಕ್ಷಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಉತ್ತಮ ನಾಯಕರ ಆಯ್ಕೆಗೆ ಒತ್ತು ನೀಡುವುದು ಮುಖ್ಯ ಸಂಗತಿಯಾಗಿದೆ.
–ನಿರುಪಾದಿ ಪೂಜಾರ, ವಿದ್ಯಾರ್ಥಿ, ಕರ್ನಾಟಕ ಕಾಲೇಜು ಧಾರವಾಡ
**
ರಾಜಕೀಯ ಕ್ಷೇತ್ರವೆಂದರೆ ಅಸಹ್ಯ ಪಡುವಂತೆ ನಡೆಯುತ್ತಿರುವ ಪ್ರಸಕ್ತ ಘಟನೆಗಳು ನಿಜಕ್ಕೂ ಶೋಚನಿಯ. ಇಡಿ ದೇಶವೆ ಕರ್ನಾಟಕದ ರಾಜಕೀಯ ದೊಂಬರಾಟವನ್ನ ವಿಕ್ಷೀಸುತ್ತಿದೆ. ತಂತ್ರಕ್ಕೆ ಪ್ರತಿತಂತ್ರ,ಕೆಸರೆರಚಾಟ, ಕಾನೂನಿನ ದುರ್ಬಳಕೆ, ನೈತಿಕ ಮೌಲ್ಯವನ್ನೇ ಮರೆತ ಪುಡಾರಿಗಳು, ಆಪಾದನೆ– ಪರಸ್ಪರ ದೂಷಣೆಗಳು, ಜನರ ಅಭ್ಯುದಯ ಮರೆತು ಕುರ್ಚಿ ಆಸೆಗೆ ಬಹಿರಂಗವಾಗಿ ಬೆತ್ತಲಾಗುತ್ತಿರುವ ಸಂಪನ್ನರೆಂಬ ಮುಖವಾಡ ಹೊತ್ತ ರಾಜಕೀಯ ಪಕ್ಷಗಳ ನಡೆ, ಜನರ ಸಹನೆಯ ಪರೀಕ್ಷೆ ಆಗುತ್ತಿದೆ. ಇನ್ನಾದರೂ ಸಾಕು ಮಾಡಿ .ಇಂತಹವರನ್ನ ನೋಡಿ ಇಂದಿನ ರಾಜಕೀಯ ಮಂದಿಗೂ ಕೂಡ ವಿವಿಧ ಕ್ಷೇತ್ರಗಳಲ್ಲಿರುವಂತ ನಿಯಮಗಳನ್ನ ಜಾರಿಗೆ ತರಬೇಕಿದೆ.
ಅರ್ಹತೆ, ನೈತಿಕ ನಡಾವಳಿ, ನಿವೃತ್ತಿಯ ಕಟ್ಟಳೆ, ವಂಶವಾಹಿ ರಾಜಕೀಯದ ನಿರಾಕರಣೆ, ಕನಿಷ್ಠತಮ ಶಿಕ್ಷಣ, ಜಾತಿ, ಪಂಗಡಗಳು ಗೌಣವಾಗಿ ಕಾರ್ಯ ಕ್ಷಮತೆ, ಪ್ರಾಮಾಣಿಕತೆಯೇ ಅಳತೆಗೊಲಾಗುವಂತ ನಿಯಮಗಳು ತ್ವರಿತವಾಗಿ ಬರಬೇಕಿದೆ.
ಶಾಲೆಯಲ್ಲಿ ಗ್ರೇಡ್ ನೀಡುವಂತೆ. ಅವರ ಕೆಲಸದ ಆಧಾರದ ಮೇಲೆ ಅಧಿಕಾರ ಕೊಡುವಂತ, ಕಾಲಮಿತಿ ನಿಗದಿಗೊಳಿಸೊ ಕೆಲಸವಾಗಬೇಕು ಇವೆಲ್ಲಾ ಕಷ್ಟ ನಿಜ ಆದರೆ ಅಸಾಧ್ಯವೆನಲ್ಲ.
ಕಟ್ಟಳೆಗಳು ಅನಿವಾರ್ಯ ಅನ್ನೊವಂತಹ ಪರಿಸ್ಥಿತಿ ನಿರ್ಮಾಣವಾಗಿರುವದರಿಂದ ಜನರ, ರಾಜ್ಯದ, ದೇಶದ ಅಭಿವೃದ್ದಿಗೆ ಕೈ ಜೋಡಿಸೊ ಜನಪ್ರತಿನಿಧಿಗಳ ಅವಶ್ಯಕತೆ ಇದೆ ಮತದಾರರು ಬುಧ್ದಿ ಕಲಿಸಬೇಕಿದೆ.
-ಸುನೀತಾ ಗಂಗಾಧರ್ (ಲೇಖಕಿ), ಸಿಎನ್‌ಆರ್ ಲೇಔಟ್, ರಾಮನಗರ
**
ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರು ಇಳಿಯುತ್ತಾರೆ.
ರಾಜ್ಯದ ಬೆಳವಣಿಗೆ ಎತ್ತ ಸಾಗುತ್ತಿದೆ. ಯಾರೊಬ್ಬರಿಗೂ ತಾವು ಓಟು ಹಾಕಿಸಿಕೊಂಡ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲವಾಗಿದೆ. ಒಂದೆಡೆ ಬರದಲ್ಲಿ ತತ್ತರಿಸುತ್ತಿರುವ ಜನ. ಮತ್ತೊಂದೆಡೆ ಅಧಿಕಾರ ಮೋಹ, ಮೋಜು, ಗುಂಡಾಗಿರಿ ರಾಜಕಾರಣ. ಜನರ ಸೇವೆಯೇ ಇವರ ಗುರಿಯಾಗಿದ್ದರೆ ಈ ಕೆಳಮಟ್ಟಕ್ಕೆ ಇಳಿದು ಮಾಡುವ ರಾಜಕಾರಣ ಅವಶ್ಯಕತೆಯೇ?
ಮುಂದಾದರು ಜನತೆ ಎಚ್ಚೆತ್ತುಕೊಂಡು ಹಣ ಹೆಂಡಕ್ಕೆ ಮಾರು ಹೋಗದೆ ನಿಷ್ಠಾವಂತರಿಗೆ ಅವಕಾಶ ಕಲ್ಪಿಸಬೇಕು.
-ಚೈತ್ರಶ್ರಿ ಎಸ್, ಅತಿಥಿ ಉಪನ್ಯಾಸಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು
**
ಪತ್ರಕರ್ತರು. ಸುದ್ದಿಮಾಧ್ಯಮಗಳೆ ಇಂದು ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಬೇಕಾಗಿದೆ. ದೇಶದ ಎಲ್ಲಾ ರಾಜಕೀಯ ವ್ಯವಸ್ಥೆ, ಸ್ಪೀಕರ್ ಸೇರಿದಂತೆ ಸಂವಿಧಾನಿಕ ಸಂಸ್ಥೆಗಳು ರಾಜಕೀಯ ಪ್ರಭಾವಗಳಿಗೆ ಈಡಾಗಿರುವುದು ಅಥವಾ ಅವುಗಳನ್ನು ಈಡುಮಾಡುತ್ತಿರುವಾಗ ಜನರಲ್ಲೂ ಇದೇ ಸರಿ ಎಂಬ ಭಾವನೆ ದಟ್ಟವಾಗುತ್ತಿದೆ.
ರಾಜಕೀಯವೆಂದರೆ ಇಂತಹ ಎಲ್ಲಾ ಅಟಾಟೋಪಗಳೆ ಮೌಲ್ಯಗಳು ಎಂಬ ನಂಬುಗೆಗಳು ಹೊಸತಲೆಮಾರುಗಳಲ್ಲಿ ಬೇರೂರುವ ಅಪಾಯ ನಮ್ಮೆದುರಿಗಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮಗಳು ನೈಜ ರಾಜಕೀಯ ನಡವಳಿಗಳನ್ನು ಮತ್ತು ರಾಜಕೀಯ ಕ್ಷೋಭೆ ಉಂಟಾದಾಗ ಜನರ ಸಂಕಟ- ಪಾಡುಗಳನ್ನು ಮುಂದುಮಾಡಿ ಜನಪ್ರತಿನಿಧಿಗಳ ಜವಾಬ್ದಾರಿಯನ್ನು ನೆನಪಿಸಬೇಕಾಗಿದೆ.
ನಾಡಿನ ಜನರ ಸಂಕಷ್ಟಗಳ ಪರಿಹಾರವೇ ರಾಜಕೀಯ ಮೌಲ್ಯ ಮತ್ತು ಏಕಮೇವ ಗುರಿ ಎಂಬುದನ್ನು ಶಾಸಕರಿಗೆ ನೆನಪು ಮಾಡಿಕೊಡಬೇಕು. ಶಾಸಕರುಗಳು ತಮ್ಮ ಆಯ್ಕೆಯ ನೈಜ ಜನಮತವನ್ನೆ ಮರೆತು ಅಧಿಕಾರ, ದುಡ್ಡಿನ ದಾಹದಲ್ಲಿ ಮುಳುಗಿಹೋಗುವುದು ಜನರಿಗೆ ಬಗೆದ ಮಹಾದ್ರೋಹ. ಜನರ, ಕ್ಷೇತ್ರದ ಹಿತಕ್ಕಾಗಿ ಎಂಬುದನ್ನು ನಂಬಿಸುವ ದೇಶಾವರಿತನದಿಂದಲೆ ತಮ್ಮ ರಾಜಕೀಯ ದುರಾಸೆಗಳನ್ನು ಈಡೇರಿಸಿಕೊಳ್ಳಲು ಹಾತೊರೆಯುತ್ತಲೆ ಇರುತ್ತಾರೆ.
ಇಂತಹ ವಂಚನೆಗಳ ವಿರುದ್ಧ ಜನರನ್ನು ಎಚ್ಚರಿಸಬೇಕಾಗಿದೆ. ಜನರನ್ನು ಈ ದಿಕ್ಕಿನಲ್ಲಿ ತಮ್ಮ ಚುನಾಯಿತ ಪ್ರತಿನಿದಿಗಳನ್ನು ಪ್ರಶ್ನಿಸುವಂತೆ ಪ್ರೇರಿಸುವುದು ಇವತ್ತಿನ ತುರ್ತು ಆಗಿದೆ.
-ಎನ್.ರವಿಕುಮಾರ್ ಟೆಲೆಕ್ಸ್, ತಿಲಕ್ ನಗರ, 2ನೇ ಅಡ್ಡರಸ್ತೆ, ಶಿವಮೊಗ್ಗ
**
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಅಪವಿತ್ರ ಮೈತ್ರಿಯ ಫಲವೇ ಇಂದಿನ ರಾಜಕೀಯ ಅವ್ಯವಸ್ಥೆಗೆ ಮೂಲಕಾರಣ. ಕೇವಲ ಅಧಿಕಾರದ ಲಾಲಸೆಯ ಉದ್ದೇಶದೊಂದಿಗೆ ಶುರುವಾದ ಈ ಸಮ್ಮಿಶ್ರ ಸರ್ಕಾರದಲ್ಲಿ ಕನಿಷ್ಠ ಸಾಮಾನ್ಯ ಯೋಜನೆಗಳ ಬಗ್ಗೆ ಸ್ಪಷ್ಟವಾದ ರೂಪುರೇಷೆಗಳು ಹಾಗೂ ಕಲ್ಪನೆಯೇ ಇರಲಿಲ್ಲ.
ಮಿತಿಮೀರಿದ ಸ್ವಜನ ಪಕ್ಷಪಾತ ಮತ್ತು ವಂಶಾಡಳಿತದ ದುಷ್ಪರಿಣಾಮ, ವಿಧಾನಸಭಾ ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ಪಕ್ಷಪಾತ ಧೋರಣೆ, ಪ್ರಾದೇಶಿಕ ಅಸಮಾನತೆಯ ಕೂಗು ಮುಗಿಲು ಮುಟ್ಟಿದ್ದು ಬಹುಶಃ ಈ ಸರ್ಕಾರದ ಅವಧಿಯಲ್ಲಿ.
ಶಾಸಕರ ಆಶೋತ್ತರಗಳಿಗೆ ಸ್ಪಂದಿಸುವ ಕನಿಷ್ಠ ಸೌಜನ್ಯವನ್ನು ತೋರಿಸದೇ ಇರುವುದು ಸಮ್ಮಿಶ್ರ ಸರ್ಕಾರದ ಅಂತ್ಯಕ್ಕೆ ನಾಂದಿ ಹಾಡಲಿದೆ.
–ಪ್ರೊ ಅಮರೇಶ ಬಿ ಚರಂತಿಮಠ, ಸಹಾಯಕ ಪ್ರಾಧ್ಯಾಪಕರು
ಬೀಮ್ಸ್ ಎಂಬಿಎ ಕಾಲೇಜು, ಬಾಗಲಕೋಟೆ
**
ಕರ್ನಾಟಕದ ರಾಜಕೀಯ ಅತ್ಯಂತ ಅಸಹ್ಯಕರವಾಗಿದೆ, ಜನನಾಯಕರು ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆ ಅಸ್ತವ್ಯಸ್ತವಾಗಿದೆ, ರಾಜಕಾರಣಿಗಳ ದೊಂಬರಾಟಕ್ಕೆ ರಾಜ್ಯದ ಜನತೆ ತಲೆತಗ್ಗಿಸುಂವತಾಗಿದೆ, ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಇರುವಾಗ ಜನನಾಯಕರು ತಮ್ಮ ಕರ್ತವ್ಯವನ್ನು ಮರೆತು ಸ್ವಾರ್ಥಿಗಳಾಗಿದ್ದಾರೆ, ಇಂತಹ ನಾಯಕರನ್ನು ಆಯ್ಕೆ ಮಾಡಿರುವ ಕಾರಣಕ್ಕೆ ಮತದಾರರು ನಾಚಿಕೆ ಪಡುವಂತಾಗಿದೆ.
–ವರುಣ್ ಡಿ.ಎಂ. ಕುರ್ಕೆ, ಅರಸೀಕೆರೆ (ತಾ) ಹಾಸನ (ಜಿಲ್ಲೆ)
**
ಅರ್ಥವಾಗದ ಸರ್ಕಾರ
ಇತ್ತ ಕುರ್ಚಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಮಂತ್ರಿಗಳು. ಅತ್ತ ಕುರ್ಚಿ ಪಡೆಯಲು ಕಾತುರತೆಯಲ್ಲಿರುವ ಮಾಜಿ ಮಂತ್ರಿಗಳು. ಹಣ್ಣಿಗಾಗಿ ಗಿಡದಿಂದ ಗಿಡಕ್ಕೆ ಹಾರುವ ಮಂಗನ ಹಾಗೆ ಸಚಿವ ಸ್ಥಾನಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹೋಗುವ ಸಚಿವರು ಮನೆಗೆ ಮಗನಾಗಲಿಲ್ಲ ಹೆಂಡತಿಗೆ ಗಂಡನಾಗಲಿಲ್ಲ ಹಾಗೆಯೇ ರಾಜ್ಯದ ಜನತೆಗೆ ಆಗದ ಸರ್ಕಾರ ಇಂತಹ ಅರ್ಥವಿಲ್ಲದ ರಾಜಕೀಯಕೊಂದು ದಿಕ್ಕಾರ.
-ಅಕ್ಷಯಕುಮಾರ್ ಮನಗೂಳಿ
ದರ್ಬಾರ್ ಕಾಲೇಜು ವಿಜಯಪುರ (ಪತ್ರಿಕೋದ್ಯಮ ವಿದ್ಯಾರ್ಥಿ)
**
5 ವರ್ಷಗಳ ಕಾಲ ರಾಜೀನಾಮೆಗೆ ಅವಕಾಶವಿರಬಾರದು ಬದ್ಧತೆ ಇಲ್ಲದ ಇಂದಿನ ರಾಜಕಾರಣಿಗಳಿಗೆ, ಒಂದು ದೇಶ ಒಂದು ಚುನಾವಣೆ ಎನ್ನುವ ಬದಲು, ಒಮ್ಮೆ ಪ್ರತಿನಿಧಿ 5 ವರ್ಷವೂ ಪ್ರತಿನಿಧಿ ಎಂಬ ಕಾನೂನು ಜಾರಿಗೊಳಿಸಬೇಕು. ಒಂದು ಪಕ್ಷದಿಂದ ಆಯ್ಕೆಯಾದ ಶಾಸಕರಾಗಲಿ ಅಥವಾ ಸಂಸದರಾಗಲಿ 5 ವರ್ಷಗಳ ಕಾಲ ರಾಜೀನಾಮೆ ನೀಡಲು ಅವಕಾಶ ಮಾಡಿಕೊಡದ ಕಾನೂನು ಬಂದರೆ ಈ ರೀತಿಯ ಅಯಾರಾಂ ಗಯಾರಾಂ ಸಂಸ್ಕೃತಿಯನ್ನು ತಡೆಗಟ್ಟಬಹುದು. ಯಾವುದೇ ಸರ್ಕಾರ ಬಂದರೂ ಶಾಸಕರ ರಾಜೀನಾಮೆಯ ಭಯವಿಲ್ಲದೇ ಕಾರ್ಯ ನಿರ್ವಹಿಸುವಂತಾಗುತ್ತದೆ.
-ವೆಂಕಟೇಶ್ ಜಿ.
ಸುಂಕದಕಟ್ಟೆ, ಬೆಂಗಳೂರು-90
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.