ADVERTISEMENT

ಕೂಲಿ ಕಾರ್ಮಿಕನ ಮಗಳಿಗೆ ಶೇ. 93 ಅಂಕ

ಹರ್ಲಾಪೂರ ಗ್ರಾಮದ ವಿದ್ಯಾರ್ಥಿನಿ ಸಂಗವ್ವ ಸಾಧನೆ

ಹುಚ್ಚೇಶ್ವರ ಅಣ್ಣಿಗೇರಿ
Published 18 ಏಪ್ರಿಲ್ 2019, 20:15 IST
Last Updated 18 ಏಪ್ರಿಲ್ 2019, 20:15 IST
ಸಂಗವ್ವ ಉಮಚಗಿ
ಸಂಗವ್ವ ಉಮಚಗಿ   

ಗದಗ: ‘ತಂದೆ, ತಾಯಿ ಮಂಗಳೂರಿಗೆ ಗುಳೆ ಹೋಗಿದ್ದಾರೆ.ಅಲ್ಲಿ ಕೂಲಿ ಮಾಡಿ ಕಷ್ಟಪಟ್ಟು ಓದಿಸಿದ್ದರಿಂದ, ಅವರ ಬೆವರ ಹನಿಗೆ ಪ್ರತಿಫಲವಾಗಿ ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಶೇ 93 ಅಂಕ ಗಳಿಸಲು ಸಾಧ್ಯವಾಯಿತು’ ಎಂದು ತಾಲ್ಲೂಕಿನ ಹರ್ಲಾಪೂರ ಗ್ರಾಮದ ನಿವಾಸಿ, ಕೆವಿಎಸ್‌ಆರ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಗವ್ವ ಉಮಚಗಿ ಭಾವುಕರಾದರು.

ಪ್ರಥಮ ಪಿಯುಸಿ ಮುಗಿದ ನಂತರ ಸಂಗವ್ವ ಕೂಡ ಒಂದು ವರ್ಷ ಕೂಲಿ ಮಾಡಿದ್ದರು. ತಂದೆ, ತಾಯಿ ಜತೆಗೆ ಮಂಗಳೂರಿಗೆ ಹೋದ ಅವರು, ಅಲ್ಲಿ ಗೋಡಂಬಿ ತೋಟವೊಂದರಲ್ಲಿ ಕೆಲಸ ಮಾಡಿ, ದ್ವಿತೀಯ ಪಿಯು ಪ್ರವೇಶ ಶುಲ್ಕ ಮತ್ತು ಪುಸ್ತಕ ಖರೀದಿಗೆ ಬೇಕಿರುವ ಮೊತ್ತವನ್ನು ಸಂಪಾದಿಸಿದ್ದಳು.ಬಳಿಕ ತಮ್ಮ ಕಷ್ಟಗಳನ್ನು ಪಕ್ಕಕ್ಕೆ ಇಟ್ಟು ಕಾಲೇಜು ಆರಂಭದಿಂದಲೇ ಛಲದಿಂದ ಶ್ರಮಪಟ್ಟು ಅಧ್ಯಯನ ಮಾಡಿದಳು. ಅದರ ಫಲ ಈಗ ಫಲಿತಾಂಶದಲ್ಲಿ ಗೋಚರಿಸಿದೆ.

‘ತಂದೆ, ತಾಯಿ ಈಗಲೂ ಮಂಗಳೂರಿನಲ್ಲಿ ಕೂಲಿ ಮಾಡುತ್ತಿದ್ದಾರೆ. ಅವರಿಗೆ ಫೋನ್‌ ಮಾಡಿ ಫಲಿತಾಂಶ ತಿಳಿಸಿದೆ. ನಮ್ಮ ಕುಟುಂಬದಲ್ಲಿ ಇದುವರೆಗೂ ಯಾರೂ ಇಷ್ಟು ಅಂಕ ಪಡೆದಿಲ್ಲ. ಎಷ್ಟೇ ಕಷ್ಟವಾದರೂ ಮುಂದೆ ಓದಿಸುತ್ತೇವೆ’ ಎಂದರು. ಎಂದು ಸಂಗವ್ವ ಹೇಳಿದರು.

ADVERTISEMENT

ಗದುಗಿನ ಕೆಎಸ್‌ಎಸ್‌ ಪದವಿ ಕಾಲೇಜಿನಲ್ಲಿ ಬಿ.ಎ. ಪ್ರವೇಶ ಪಡೆಯಲು ಮುಂದಾಗಿರುವ ಅವರು, ಉಪನ್ಯಾಸಕಿ ಆಗಬೇಕು ಎಂಬ ಆಸೆ ಹೊಂದಿದ್ದಾರೆ. ಜತೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಹಂಬಲವನ್ನೂ ಹೊಂದಿದ್ದಾರೆ. ಸಂಗವ್ವ, ಕನ್ನಡ– 97, ಇಂಗ್ಲಿಷ್– 85, ಇತಿಹಾಸ– 90, ಭೂಗೋಳಶಾಸ್ತ್ರ– 100, ರಾಜ್ಯಶಾಸ್ತ್ರ– 94, ಶಿಕ್ಷಣಶಾಸ್ತ್ರ– 92 ಸೇರಿ ಒಟ್ಟು 558 ಅಂಕ ಗಳಿಸಿದ್ದಾರೆ.

‘ರಜಾ ಅವಧಿಯಲ್ಲಿ ಕೂಲಿ ಕೆಲಸ ಮಾಡಿ ಪಠ್ಯಪುಸ್ತಕ ಖರೀದಿಸಿದೆ. ದುಡಿಮೆಯ ಹಣದಲ್ಲಿ ಕಾಲೇಜು ಶುಲ್ಕ ಪಾವತಿಸಿದೆ. ಯಾವುದೇ ತರಬೇತಿಗೆ ಹೋಗಲಿಲ್ಲ. ಉಪನ್ಯಾಸಕರು ತರಗತಿಯಲ್ಲಿ ಹೇಳಿದ ಪಾಠವನ್ನೇ ಮನೆಯಲ್ಲಿ ಕುಳಿತು ಓದಿದೆ. ನಿರೀಕ್ಷೆಗಿಂತೆ ಹೆಚ್ಚು ಅಂಕಗಳು ಬಂದಿವೆ’ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

‘ಹರ್ಲಾಪೂರದಿಂದ ಗದುಗಿನ ಕೆವಿಎಸ್‌ಆರ್‌ ಪದವಿಪೂರ್ವ ಕಾಲೇಜಿಗೆ ನಿತ್ಯ ಬಸ್‌ನಲ್ಲಿ ಹೋಗಿ ಬರುತ್ತಿದ್ದಳು. ಮನೆಯಲ್ಲಿ ಇದ್ದಾಗ ಅವಳ ಕೈಯಲ್ಲಿ ಯಾವಾಗಲೂ ಪುಸಕ್ತ ಇರುತ್ತಿತ್ತು. ಉತ್ತಮ ಅಂಕ ಗಳಿಸಿದ್ದಾಳೆ. ನಮಗೆ ಬಹಳ ಖುಷಿಯಾಗಿದೆ’ ಎಂದು ತಂದೆ ದೇವಪ್ಪ ಹಾಗೂ ತಾಯಿ ಪಾರವ್ವ ಉಮಚಗಿ ಸಂತಸ ವ್ಯಕ್ತಪಡಿಸಿದರು.

‘ಸಂಗವ್ವ ಬಡ ಪ್ರತಿಭಾವಂತ ವಿದ್ಯಾರ್ಥಿನಿ. ಅವರಿಗೆ ಪುಸ್ತಕ ಹಾಗೂ ಪಠ್ಯದ ಸಾಮಗ್ರಿಗಳನ್ನು ಒದಗಿಸುವ ನಿಟ್ಟಿನಲ್ಲಿ ಸಹಾಯ ಮಾಡಲಾಗಿದೆ. ಮುಂದೆ ಕೆಎಸ್‌ಎಸ್‌ ಪದವಿ ಕಾಲೇಜಿನಲ್ಲಿ ಬಿ.ಎ. ಪ್ರವೇಶ ಶುಲ್ಕ ಕಡಿಮೆ ಮಾಡುವಂತೆ ಸಂಸ್ಥೆಗೆ ಮನವಿ ಮಾಡಲಾಗುವುದು’ ಎಂದು ಕೆವಿಎಸ್‌ಆರ್ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ರಮಾಕಾಂತ ದೊಡ್ಡಮನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.