ADVERTISEMENT

ಹೃದಯಾಘಾತಕ್ಕೆ ‘ಪುನೀತ್‌ ಹೃದಯ ಜ್ಯೋತಿ’: ರಾಜ್ಯ ಸರ್ಕಾರದಿಂದ ಹೊಸ ಯೋಜನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 15:52 IST
Last Updated 31 ಅಕ್ಟೋಬರ್ 2023, 15:52 IST
 ಪುನೀತ್ ರಾಜಕುಮಾರ್
ಪುನೀತ್ ರಾಜಕುಮಾರ್   

ಬೆಂಗಳೂರು: ಹೃದಯಾಘಾತಕ್ಕೆ ಒಳಗಾದವರಿಗೆ ತಕ್ಷಣವೇ ಚಿಕಿತ್ಸೆ ದೊರಕಿಸಲು ರಾಜ್ಯ ಸರ್ಕಾರ ‘ಪುನೀತ್ ರಾಜಕುಮಾರ್ ಹೃದಯ ಜ್ಯೋತಿ’ ಯೋಜನೆಯನ್ನು ಇದೇ ನವೆಂಬರ್‌ನಲ್ಲಿ ಜಾರಿಗೊಳಿಸುತ್ತಿದೆ. 

ಮೊದಲ ಹಂತದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ 85 ಆಸ್ಪತ್ರೆಗಳಲ್ಲಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅದಕ್ಕಾಗಿ ₹6.50 ಕೋಟಿ ವೆಚ್ಚ ನಿಗದಿ ಮಾಡಲಾಗಿದೆ. ₹2 ಕೋಟಿ ವೆಚ್ಚದಲ್ಲಿ 50 ಉಪಕರಣ ಖರೀದಿಸಲಾಗುತ್ತಿದೆ. ಜಯದೇವ ಹೃದ್ರೋಗ ಸಂಸ್ಥೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸೇರಿದಂತೆ 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 10 ಹಬ್‌ಗಳನ್ನು ರಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಹೃದಯಾಘಾತಕ್ಕೆ ಒಳಗಾದವರು ಸಮೀಪದ ಕೇಂದ್ರಗಳಿಗೆ ತೆರಳಿದ ತಕ್ಷಣ ಇಸಿಜಿ ಮಾಡಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಐದು ನಿಮಿಷದಲ್ಲೇ ಹೃದಯದ ಪರಿಸ್ಥಿತಿಯ ಮಾಹಿತಿ ಪಡೆಯಲಾಗುತ್ತದೆ. ಅಪಾಯದ ಪ್ರಮಾಣದ ಹೆಚ್ಚಿದ್ದರೆ ತಕ್ಷಣ ‘ಟೆನೆಕ್ಟೆಪ್ಲೇಸ್‌’ ಚುಚ್ಚುಮದ್ದು ನೀಡಲಾಗುವುದು. ₹45 ಸಾವಿರದವರೆಗೂ ಇರುವ ಈ ಚುಚ್ಚುಮದ್ದು ಸೇರಿದಂತೆ ಅಗತ್ಯ ಚಿಕಿತ್ಸೆಯನ್ನು ಎಪಿಎಲ್‌, ಬಿಪಿಎಲ್‌ ವರ್ಗದ ಎಲ್ಲ ನಾಗರಿಕರಿಗೂ ನೀಡಲಾಗುತ್ತದೆ ಎಂದರು.

ADVERTISEMENT

ಪ್ರಾಥಮಿಕ ಚಿಕಿತ್ಸೆಯ ನಂತರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಅದಕ್ಕಾಗಿ ಜಯದೇವ ಸೇರಿದಂತೆ 16 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ರೋಗಿಗಳನ್ನು ಕಳುಹಿಸಲು ಸರ್ಕಾರವೇ ಆಂಬುಲೆನ್ಸ್‌ ಸೇವೆ ಒದಗಿಸಲಿದೆ ಎಂದು ಹೇಳಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.