ADVERTISEMENT

ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಿ: ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಡಿಸಿ, ಎಸ್‌ಪಿ, ಕಮಿಷನರ್‌ಗಳ ಜೊತೆ ಸಿ.ಎಂ ವಿಡಿಯೊ ಸಂವಾದ

​ಪ್ರಜಾವಾಣಿ ವಾರ್ತೆ
Published 10 ಮೇ 2025, 16:31 IST
Last Updated 10 ಮೇ 2025, 16:31 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ರಾಜ್ಯದಲ್ಲಿ ಸುಳ್ಳು ಸುದ್ದಿಗಳಿಗೆ ಕಡ್ಡಾಯವಾಗಿ ಕಡಿವಾಣ ಹಾಕಬೇಕು. ಅನಿವಾರ್ಯವಾದರೆ, ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು, ಕಮಿಷನರ್‌ಗಳು ಮತ್ತು ಜಿಲ್ಲಾ ಎಸ್‌ಪಿಗಳ ಜೊತೆ ಶನಿವಾರ ಅವರು ವಿಡಿಯೊ ಸಂವಾದ ನಡೆಸಿದರು.

ADVERTISEMENT

‘ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುವುದನ್ನು ತಪ್ಪಿಸಲು ಕಟ್ಟೆಚ್ಚರ ವಹಿಸಬೇಕು. ಫ್ಯಾಕ್ಟ್ ಚೆಕ್ ನಿರಂತರವಾಗಿ ಮಾಡಬೇಕು. ಸುಳ್ಳು ಸುದ್ದಿಗಳ ಬಗ್ಗೆ ಮೂಲದಲ್ಲೇ ಅಧಿಕೃತ ಸ್ಪಷ್ಟೀಕರಣ ನೀಡಬೇಕು’ ಎಂದು ಮುಖ್ಯಮಂತ್ರಿ ಆದೇಶಿಸಿದರು.

‘ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ದೇಶದ, ರಾಜ್ಯದ ಸಹಬಾಳ್ವೆಗೆ ಧಕ್ಕೆ ತರುವ, ಕೋಮುಭಾವನೆ ಕೆರಳಿಸಿ, ಕೋಮು ವಿಭಜನೆಗೆ, ದೇಶದ ಭದ್ರತೆಗೆ ಅಪಾಯ ತರಲು ಷಡ್ಯಂತ್ರ ನಡೆಸುತ್ತಿರುವವರ ಪಟ್ಟಿ ಸಿದ್ಧಪಡಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಭಾರತ– ಪಾಕಿಸ್ತಾನ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಕಾರಣ ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸರ್ವಸನ್ನದ್ಧರಾಗಿರಬೇಕು. ಕಾನೂನು ಸುವ್ಯವಸ್ಥೆಗಿಂತ ಯಾವುದೂ ದೊಡ್ಡದಲ್ಲ. ರಾಜ್ಯದ ಜನರ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಈ ಕಾರಣಕ್ಕೆ‌ ಗುಪ್ತಚರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು’ ಎಂದರು.

ಕೋಮು ಸಾಮರಸ್ಯ ಕದಡಲು ಯತ್ನಿಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೋಮು ಗೂಂಡಾಗಳ ಪಟ್ಟಿ ನವೀಕರಿಸಿ ಅಂಥವರ ಮೇಲೆ ನಿಗಾ ಇಡಬೇಕು
ಸಿದ್ದರಾಮಯ್ಯ, ಮುಖ್ಯಮಂತ್ರಿ

‘ಪೌರ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿ, ಅವರಿಗೆ ಸೂಕ್ತ ತರಬೇತಿಯನ್ನು ಒದಗಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಪೌರ ರಕ್ಷಣಾ ವ್ಯವಸ್ಥೆಗೆ ಸ್ವಯಂಸೇವಕರನ್ನು ನೇಮಕ ಮಾಡುವ ಕಾರ್ಯ ಆರಂಭಿಸಬೇಕು. ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಲು ವ್ಯವಸ್ಥೆ ಕಲ್ಪಿಸಬೇಕು. ಅಗತ್ಯ ವಸ್ತುಗಳ ದರ ಹೆಚ್ಚಳ ಆಗದಂತೆ ನಿಗಾ ವಹಿಸುವ ಜೊತೆಗೆ, ಅಕ್ರಮ ದಾಸ್ತಾನು, ಕಾಳಸಂತೆ ಮೇಲೆ ನಿರಂತರವಾಗಿ ನಿಗಾ ಇರಿಸಬೇಕು’ ಎಂದು ಸೂಚನೆ ನೀಡಿದರು.

ಗೃಹ ಸಚಿವ ಜಿ. ಪರಮೇಶ್ವರ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ. ರೇವಣ್ಣ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.