ADVERTISEMENT

ಪಿಡಬ್ಲ್ಯುಡಿ ಎಇ: ಕಳ್ಳಮಾರ್ಗಕ್ಕೆ ‘ಬ್ಲೂ ಟೂತ್‌’

ಮೂವರು ಅಭ್ಯರ್ಥಿಗಳ ಡಿಬಾರ್‌ * ಕಿರಿಯ ಎಂಜಿನಿಯರ್‌ ಪರೀಕ್ಷೆಯಲ್ಲೂ ಅಕ್ರಮ?

ರಾಜೇಶ್ ರೈ ಚಟ್ಲ
Published 23 ಸೆಪ್ಟೆಂಬರ್ 2022, 2:53 IST
Last Updated 23 ಸೆಪ್ಟೆಂಬರ್ 2022, 2:53 IST
ವಿಕಾಸ್‌ ಕಿಶೋರ್‌ ಸುರಳ್ಕರ್‌
ವಿಕಾಸ್‌ ಕಿಶೋರ್‌ ಸುರಳ್ಕರ್‌   

ಬೆಂಗಳೂರು: ಎಲೆಕ್ಟ್ರಾನಿಕ್‌ ಉಪಕರಣ ‘ಬ್ಲೂ ಟೂತ್‌’ ಬಳಸಿ, ಕಳ್ಳಮಾರ್ಗದ ಮೂಲಕ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಸಹಾಯಕ ಎಂಜಿನಿಯರ್‌ (ಎಇ) ಹುದ್ದೆ ಗಿಟ್ಟಿಸಲು ಮೂವರು ಅಭ್ಯರ್ಥಿಗಳು ಯತ್ನಿಸಿರುವುದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ.

ಪಿಡಬ್ಲ್ಯುಡಿ ಕಿರಿಯ ಎಂಜಿನಿಯರ್‌ (ಜೆಇ) 330 ಮತ್ತು ಸಹಾಯಕ ಎಂಜಿನಿಯರ್‌ 660 ಹುದ್ದೆಗಳಿಗೆ ಕೆಪಿಎಸ್‌ಸಿ ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಕೆಪಿಎಸ್‌ಸಿ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌, ‘ಪರೀಕ್ಷಾ ಅಕ್ರಮ ಎಸಗಿರುವುದು ಸಾಬೀತಾದ ಕಾರಣ ಮೂವರು ಅಭ್ಯರ್ಥಿಗಳು ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಹುದ್ದೆಗೆ ಅರ್ಹರಲ್ಲವೆಂದು ಡಿಬಾರ್‌ ಮಾಡಲಾಗುವುದು. ಜೆಇ ಹುದ್ದೆಗೆ ನಡೆದ ಪರೀಕ್ಷೆಯಲ್ಲೂ ಕೆಲವರು ಅಕ್ರಮ ನಡೆಸಿರುವ ಅನುಮಾನವಿದ್ದು, ಆಂತರಿಕ ತನಿಖೆ ನಡೆಯುತ್ತಿದೆ’ ಎಂದರು.

ADVERTISEMENT

ಎಇ ಹುದ್ದೆಗಳ ನೇಮಕಾತಿಗಾಗಿ 2021ರ ಡಿ. 14ರಂದು ಬೆಂಗಳೂರಿನ ನಾಗರಬಾವಿಯ ಪಾಪರೆಡ್ಡಿ ಪಾಳ್ಯದಲ್ಲಿರುವ ಸೆಂಟ್ ಜಾನ್ ಪ್ರೌಢ ಶಾಲೆಯ ಕೇಂದ್ರದಲ್ಲಿ ಬ್ಲೂ ಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ವೀರಣಗೌಡ ದೇವೇಂದ್ರಪ್ಪ ಚಿಕ್ಕನಗೌಡ ಎಂಬಾತನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದರು. ಈತನ ನೀಡಿದ ಮಾಹಿತಿಯಂತೆ ಇತರ ಇಬ್ಬರು ಅಭ್ಯರ್ಥಿಗಳನ್ನು ಬಂಧಿಸಲಾಗಿತ್ತು. ಪೊಲೀಸ್ ತನಿಖೆ ನಡೆಯುತ್ತಿರುವ ಮಧ್ಯೆ, ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು ನೀಡಿದ ವರದಿ ಆಧರಿಸಿ ಕೆಪಿಎಸ್‌ಸಿ ಆಂತರಿಕವಾಗಿ ವಿಚಾರಣೆ ನಡೆಸಿತ್ತು.

ಈ ಮಧ್ಯೆ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಹುದ್ದೆ ಗಿಟ್ಟಿಸಿಕೊಳ್ಳಲು ಒಎಂಆರ್ ಹಾಳೆ ತಿದ್ದುಪಡಿ ಮಾಡಿ ಅಕ್ರಮ ಎಸಗಿರುವ ಮಾದರಿಯಲ್ಲಿಯೇ ಲೋಕೋಪಯೋಗಿ ಇಲಾಖೆಯ ಎಇ ಮತ್ತು ಜೆಇ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿರುವ ಸಂದೇಹ ವ್ಯಕ್ತಪಡಿಸಿರುವ ಹಲವು ಹುದ್ದೆ ಉದ್ಯೋಗಾಂಕ್ಷಿಗಳು, ತಾತ್ಕಾಲಿಕ ಪಟ್ಟಿಗೆ ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಯ ವೇಳೆ ಒಎಂಆರ್‌ ಹಾಳೆಯ ಕಾರ್ಬನ್‌ ಪ್ರತಿ ಕಡ್ಡಾಯವಾಗಿಪರಿಶೀಲಿಸಬೇಕು ಎಂದು ಕೆಪಿಎಸ್‌ಸಿ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ಕೆಪಿಎಸ್‌ಇ ಹೊರಡಿಸಿರುವ ಪರೀಕ್ಷೆಯ ಸೂಚನಾ ಪತ್ರದಲ್ಲಿ, ಒಎಂಆರ್‌ ಹಾಳೆಯ ಕಾರ್ಬನ್‌ ಪ್ರತಿಯನ್ನು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವವರೆಗೂ ಅಭ್ಯರ್ಥಿಗಳು ಸಂರಕ್ಷಿಸಿ ಇಡಬೇಕು. ಆಯೋಗ ಯಾವುದೇ ಸಂದರ್ಭದಲ್ಲಿ ಹಾಜರುಪಡಿಸುವಂತೆ ಸೂಚಿಸಿದರೆ ತಪ್ಪದೆ ಅದೇ ಪ್ರತಿಯನ್ನು ಹಾಜರುಪಡಿಸುವಂತೆ ಸೂಚಿಸಿದೆ. ನೇಮಕಾತಿಯನ್ನು ಹೆಚ್ಚು ಪಾರದರ್ಶಕವಾಗಿ ಮಾಡಲು ಜೆಇ ಮತ್ತು ಎಇ ಹುದ್ದೆಗಳ ನೇಮಕಾತಿಯ ದಾಖಲಾತಿಗಳ ಪರಿಶೀಲನೆಯ ವೇಳೆ ಒಎಂಆರ್‌ ಹಾಳೆಯ ಕಾರ್ಬನ್‌ ಪ್ರತಿಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಸಲ್ಲಿಸುವಂತೆ ತಿಳಿಸಬೇಕು. ಒಎಂಆರ್‌ ತಿದ್ದಿ ಕಳ್ಳ ಮಾರ್ಗದ ಮೂಲಕ ಹುದ್ದೆ ಗಿಟ್ಟಿಸಿಕೊಳ್ಳುವ ಅಭ್ಯರ್ಥಿಗಳನ್ನು ಈ ಮೂಲಕ ಸುಲಭವಾಗಿ ಗುರುತಿಸಿ, ಆಯ್ಕೆಪಟ್ಟಿಯಿಂದ ಹೊರಗಿಡಬಹುದು’ ಎಂದೂ ಪತ್ರದಲ್ಲಿ ಕೋರಿದ್ದಾರೆ.

***

ನಾವು ಈಗಾಗಲೇ ಪ್ರಕಟಿಸಿದ ವೇಳಾ‍ಪಟ್ಟಿಯಂತೆ ಫಲಿತಾಂಶಗಳನ್ನು ನೀಡುತ್ತಿದ್ದೇವೆ. ಪಿಡಬ್ಲ್ಯುಡಿ ಜೆಇ ಹುದ್ದೆಗೆ ನಡೆಸಿದ ಪರೀಕ್ಷೆಯ ಫಲಿತಾಂಶ ಶುಕ್ರವಾರ (ಸೆ. 23) ಪ್ರಕಟವಾಗಲಿದೆ

-ವಿಕಾಸ್‌ ಕಿಶೋರ್‌ ಸುರಳ್ಕರ್‌, ಕೆಪಿಎಸ್‌ಸಿ ಕಾರ್ಯದರ್ಶಿ

***

‘‌ಸಂದರ್ಶನಕ್ಕೆ ಕನಿಷ್ಠ, ಗರಿಷ್ಠ ಅಂಕ ನಿಗದಿಪಡಿಸಬೇಕು’

ಗೆಜೆಟೆಡ್‌ ಪ್ರೊಬೇಷನರಿ 106 ಹುದ್ದೆಗಳ ನೇಮಕಾತಿಗೆ ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಪಿ.ಸಿ. ಹೋಟಾ ಸಮಿತಿಯ ನಿಯಮದಂತೆ, 1:3 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ 50 ಅಂಕಗಳಿಗೆ ಸಂದರ್ಶನ ನಡೆಸಿ, ಕನಿಷ್ಠ ಶೇ 40 (20) ಮತ್ತು ಗರಿಷ್ಠ ಶೇ 80 (40) ಅಂಕಗಳನ್ನು ನೀಡಲಾಗಿದೆ. ಅದೇ ನಿಯಮವನ್ನು ಎಇ ಹುದ್ದೆಗಳ ಸಂದರ್ಶನಕ್ಕೂ ಅನ್ವಯಿಸಬೇಕು. 2020ರಲ್ಲಿ ಅಧಿಸೂಚನೆ ಹೊರಡಿಸಿದ್ದ ಜಲಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್‌ ಹುದ್ದೆಗಳಿಗೆ 2021ರ ನವಂಬರ್‌ನಲ್ಲಿ ನಡೆದ ಸಂದರ್ಶನದಲ್ಲಿ ಈ ನಿಯಮ ಅನ್ವಯಿಸಿಲ್ಲ. ಹೀಗಾಗಿ, ಕನಿಷ್ಠ 8, 9 ಅಂಕಗಳಿಂದ 48, 49 ಅಂಕ ಗಳಿಸಿದವರು ಆಯ್ಕೆ ಆಗಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ, ಲೋಕೋಪಯೋಗಿ ಇಲಾಖೆಯ ಸಂದರ್ಶನದಲ್ಲಿ ಯಾವುದೇ ಅನುಮಾನಗಳಿಗೆ ಎಡೆ ಆಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಕೆಪಿಎಸ್ಸಿ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಹುದ್ದೆ ಆಕಾಂಕ್ಷಿಗಳು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.