ADVERTISEMENT

ಪಿಡಬ್ಲ್ಯೂಡಿ: ಬಡ್ತಿ ನೀಡಲು ಗಡಿಬಿಡಿ

34 ಎಸ್‌ಇಗಳ ‍ಪಟ್ಟಿ ಸಿದ್ಧ l ಮುಖ್ಯ ಎಂಜಿನಿಯರ್‌ ಹುದ್ದೆ ಬಡ್ತಿಗೆ ಒತ್ತಡ?

ಮಂಜುನಾಥ್ ಹೆಬ್ಬಾರ್‌
Published 14 ಜುಲೈ 2019, 20:15 IST
Last Updated 14 ಜುಲೈ 2019, 20:15 IST
   

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತಿರುವ ಹೊತ್ತಿನಲ್ಲೇ ಲೋಕೋಪಯೋಗಿ ಇಲಾಖೆಯ 34 ಅಧಿಕಾರಿಗಳಿಗೆ ಮುಖ್ಯ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಲು ಸಿದ್ಧತೆ ನಡೆದಿದೆ.

ಬಡ್ತಿ ಮೀಸಲಾತಿ ಕಾಯ್ದೆ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರಿಗೆ ಬಡ್ತಿ ನೀಡಲು ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸುವ ಮುನ್ನವೇ 400 ಎಂಜಿನಿಯರ್‌ಗಳಿಗೆ ತರಾತುರಿಯಲ್ಲಿ ಕೆಲವು ದಿನಗಳ ಹಿಂದೆ ಬಡ್ತಿ ನೀಡಲಾಗಿತ್ತು. ಅದರ ಬೆನ್ನಲ್ಲೇ, ಮತ್ತೊಂದು ಸುತ್ತಿನ ಬಡ್ತಿ ಪ್ರಕ್ರಿಯೆ ಆರಂಭವಾಗಿದೆ.

ಬಡ್ತಿ ಮೀಸಲಾತಿ ಕಾಯ್ದೆ ಪ್ರಕಾರ ‍ಅಂತಿಮ ಜ್ಯೇಷ್ಠತಾ ಪಟ್ಟಿ ‍ಪ್ರಕಟಿಸಿದ ಬಳಿಕವೇ ಬಡ್ತಿ ಪ್ರಕ್ರಿಯೆ ನಡೆಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ನಿರ್ದೇಶನ ನೀಡಿದ್ದರು. ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದ ಬಳಿಕ ಉಳಿದ ಇಲಾಖೆಗಳು ಬಡ್ತಿ ಪ್ರಕ್ರಿಯೆ ಆರಂಭಿಸಿದ್ದವು. ಆದರೆ, ಲೋಕೋಪಯೋಗಿ ಇಲಾಖೆಯಲ್ಲಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ‍ಪ‍್ರಕಟಿಸಿದ ಕೂಡಲೇ ಬಡ್ತಿ ಪ್ರಕ್ರಿಯೆ ನಡೆಸಿರುವುದು ಆಕ್ಷೇಪಕ್ಕೆ ಕಾರಣವಾಗಿತ್ತು.

ADVERTISEMENT

ಇಲಾಖೆಯಲ್ಲಿ ಪ್ರಸ್ತುತ ಮುಖ್ಯ ಎಂಜಿನಿಯರ್‌ ವೃಂದದಲ್ಲಿ 15 ಹುದ್ದೆಗಳು ಖಾಲಿ ಇದ್ದು, ಸೂಪರಿಂಟೆಂಡೆಂಟ್‌ ಎಂಜಿನಿಯರ್‌
ಗಳಿಗೆ ಬಡ್ತಿ ನೀಡುವ ಮೂಲಕ ಭರ್ತಿ ಮಾಡಬೇಕಿದೆ. ಕರ್ನಾಟಕ ಸಿವಿಲ್‌ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 3 (2) ಎ ಅನ್ವಯ ಅರ್ಹ ಅಭ್ಯರ್ಥಿಗಳ ಸೇವಾ ವಿವರ ಹಾಗೂ ದಾಖಲೆಗಳನ್ನು ಒಳಗೊಂಡ ಪ್ರಸ್ತಾವನೆ ಸಲ್ಲಿಸುವಂತೆ ಸಿಬ್ಬಂದಿ ಹಾಗೂ ಸುಧಾರಣಾ ಇಲಾಖೆ ಜುಲೈ 9ರಂದು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿತು.

ಇಲಾಖೆ 34 ಎಂಜಿನಿಯರ್‌ಗಳ ಪಟ್ಟಿಯನ್ನು ಜುಲೈ 12ರಂದು ಸಿದ್ಧಪಡಿಸಿದೆ. ಈ ಅಧಿಕಾರಿಗಳ ಸೇವಾ ವಿವರ, ಕಾರ್ಯನಿರ್ವಹಣಾ ವರದಿಗಳು, ಇಲಾಖಾ/ ಕ್ರಿಮಿನಲ್ ವಿಚಾರಣೆ/ ದಂಡನಾ ಅವಧಿ ಬಾಕಿ ಇದೆಯಾ ಎಂಬ ಮಾಹಿತಿ ಒದಗಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

‘ನಾಲ್ಕೈದು ದಿನಗಳಲ್ಲಿ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ರಹಸ್ಯ ಸ್ಥಳದಲ್ಲಿ ಶನಿವಾರ ಎಂಜಿನಿಯರ್‌ಗಳ ಸಭೆ ನಡೆಸಿದ್ದಾರೆ. ಬಡ್ತಿ ಪಟ್ಟಿಯಲ್ಲಿರುವ ಸುಮಾರು 10 ಅಧಿಕಾರಿಗಳು ಸಚಿವ ಎಚ್‌.ಡಿ. ರೇವಣ್ಣ ಪರಮಾಪ್ತರು. ಐವರು ಮುಖ್ಯ ಎಂಜಿನಿಯರ್‌ಗಳಿಗೆ ಐದಾರು ತಿಂಗಳು ಹುದ್ದೆಯನ್ನೇ ನೀಡದೆ ಈ ಪಟ್ಟಿಯಲ್ಲಿರುವ ಕೆಲವು ಎಸ್‌ಇಗಳಿಗೆ 2–3 ಹುದ್ದೆಗಳನ್ನು ನೀಡಲಾಗಿದೆ. 34 ಮಂದಿಗೂ ಬಡ್ತಿ ನೀಡಲು ಡಿಪಿಎಆರ್‌ ಮೇಲೆ ಒತ್ತಡ ಹೇರಲಾಗುತ್ತಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

150 ಮಂದಿಯ ಹೆಸರು ಕೈಬಿಟ್ಟರು: ‘ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವೃಂದದಿಂದ ಕಾರ್ಯಪಾಲಕ ಎಂಜಿನಿಯರ್‌ ವೃಂದಕ್ಕೆ 240 ಮಂದಿಗೆ ಬಡ್ತಿ ನೀಡಲಾಗಿದೆ. ಈ ವೇಳೆ, 150 ಎಂಜಿನಿಯರ್‌ಗಳ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ’ ಎಂಬ ಆರೋಪ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.