ADVERTISEMENT

2035ರ ವೇಳೆಗೆ ಕರ್ನಾಟಕ ಕ್ವಾಂಟಮ್‌ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿ: ಬೋಸರಾಜು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 23:51 IST
Last Updated 13 ಅಕ್ಟೋಬರ್ 2025, 23:51 IST
ಎನ್ ಎಸ್ ಬೋಸರಾಜು
ಎನ್ ಎಸ್ ಬೋಸರಾಜು   

ಬೆಂಗಳೂರು: 2035ರ ವೇಳೆಗೆ ಕರ್ನಾಟಕವನ್ನು 20 ಶತಕೋಟಿ ಡಾಲರ್‌ ಮೊತ್ತದ ವಹಿವಾಟಿನ ‘ಕ್ವಾಂಟಮ್‌ ಆರ್ಥಿಕ ರಾಜ್ಯ’ವಾಗಿ ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ, ಬೆಂಗಳೂರು ನಗರದಲ್ಲಿ ಕ್ಯೂ–ಸಿಟಿ (ಕ್ವಾಂಟಮ್‌ ಸಿಟಿ) ಸ್ಥಾಪಿಸಲು ಭೂಮಿ ನಿಗದಿಪಡಿಸಲಾಗಿದೆ ಎಂದು ವಿಜ್ಞಾನ–ತಂತ್ರಜ್ಞಾನ ಸಚಿವ ಎನ್‌ ಎಸ್‌ ಬೋಸರಾಜು ಹೇಳಿದ್ದಾರೆ.

ಸ್ವಿಟ್ಜರ್ಲೆಂಡ್‌ನ ಜಿನಿವಾದ ಬಯೋಟೆಕ್‌ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ‘ಸ್ವಿಸ್‌ನೆಕ್ಟ್ಸ್ ಕ್ವಾಂಟಮ್‌ ಸಮಿಟ್‌’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕ್ವಾಂಟಮ್‌ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ವಿಪುಲ ಅವಕಾಶಗಳಿದ್ದು, ಸಹಭಾಗಿತ್ವದ ಸಂಶೋಧನೆಗೆ ಕರ್ನಾಟಕ ರಾಜ್ಯ ಸರ್ಕಾರದ ಜೊತೆ ಕೈಜೋಡಿಸುವಂತೆ ಭೋಸರಾಜು ಸಲಹೆ ನೀಡಿದರು.

ADVERTISEMENT

ಭಾರತ ಸರ್ಕಾರ ಸುಮಾರು ₹6,000 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಕ್ವಾಂಟಮ್‌ ಮಿಷನ್‌ ಆರಂಭಿಸಿದೆ. ಈ ಮಿಷನ್ ನಾವೀನ್ಯ, ಕೌಶಲ ಮತ್ತು ಸ್ಟಾರ್ಟ್‌ ಅಪ್ ಬೆಂಬಲದ ಮೂಲಕ 50ರಿಂದ 1000 ಕ್ಯೂ ಬಿಟ್‌ ಕ್ವಾಂಟಮ್‌ ಕಂಪ್ಯೂಟರ್‌ಗಳನ್ನು ಅಭಿವೃದ್ಧಿಪಡಿಸುವುದು, ಸುರಕ್ಷಿತ ಕ್ವಾಂಟಮ್ ಸಂವಹನ ಜಾಲಗಳನ್ನು ನಿರ್ಮಿಸುವುದು ಮತ್ತು ಕಂಪ್ಯೂಟಿಂಗ್‌, ಸಂವಹನ, ಸಂವೇದನೆ ಮತ್ತು ಸಾಮಗ್ರಿಗಳಿಗಾಗಿ ರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ ಈ ರಾಷ್ಟ್ರಿಯ ದೃಷ್ಟಿಕೋನವನ್ನು ಅಳವಡಿಸಿಕೊಂಡಿರುವ ಪ್ರಮುಖ ರಾಜ್ಯವಾಗಿ ಹೊರ ಹೊಮ್ಮಿದೆ ಎಂದರು.

ಇದೇ ಸಂದರ್ಭದಲ್ಲಿ ಬೋಸರಾಜು ಅವರು ಕ್ಯೂ–ಸಿಟಿ ಫೇಸ್‌ ಒನ್‌ನ ಪರಿಕಲ್ಪನೆಯ ವಿಡಿಯೊವನ್ನು ಅನಾವರಣಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.