ADVERTISEMENT

ಪ್ರಶ್ನೆಪತ್ರಿಕೆ ಸೋರಿಕೆ: ಸೌಮ್ಯಾ ಬಂಧನ

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2022, 18:59 IST
Last Updated 25 ಏಪ್ರಿಲ್ 2022, 18:59 IST

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಂಬಂಧ ಆರೋಪಿ ಆರ್‌. ಸೌಮ್ಯಾ ಅವರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಮೈಸೂರಿನಲ್ಲಿ ಭಾನುವಾರ ರಾತ್ರಿ ಬಂಧಿಸಿದ್ದಾರೆ. ಅವರುಮೈಸೂರು ವಿಶ್ವವಿದ್ಯಾಲಯದ ಭೂಗೋಳ ವಿಜ್ಞಾನ ವಿಭಾಗದಲ್ಲಿ ‘ಪೋಸ್ಟ್‌ ಡಾಕ್ಟೊರಲ್‌ ಫೆಲೊ’ ಆಗಿ ಸಂಶೋಧನೆ ನಡೆಸುತ್ತಿದ್ದಾರೆ.

ಮಾರ್ಚ್‌ 14 ರಂದು ನಿಗದಿಯಾಗಿದ್ದ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆಯು ಪರೀಕ್ಷೆ ಆರಂಭಕ್ಕೆ ಕೆಲ ಗಂಟೆಗಳ ಮುಂಚೆ (ಬೆಳಿಗ್ಗೆ 8.30) ಸೋರಿಕೆಯಾಗಿ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡಿತ್ತು.

ಸೌಮ್ಯಾ ಅವರ ಮೊಬೈಲ್ ಸಂಖ್ಯೆಯಿಂದಲೇ 18 ಪ್ರಶ್ನೆಗಳು ಸೋರಿಕೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ಮಲ್ಲೇಶ್ವರ ಠಾಣೆಗೆ ಇದೇ 22 ರಂದು ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದರು.

ADVERTISEMENT

‘ಸೌಮ್ಯಾ ಅವರನ್ನು ಮೈಸೂರಿನಲ್ಲಿ ಬಂಧಿಸಿ ಭಾನುವಾರ ರಾತ್ರಿ ನಗರಕ್ಕೆ ಕರೆತರಲಾಗಿದೆ. ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆಕೆಯನ್ನು ನಮ್ಮ ಸುಪರ್ದಿಗೆ ಪಡೆದು ವಿಚಾರಣೆ ಮುಂದುವರಿಸಲಿದ್ದೇವೆ. ಈ ಸಂಬಂಧ 32ನೇ ಎಸಿಎಂಎಂ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ’ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಆರೋಪಿಯು ಮೈಸೂರಿನ ಕುವೆಂಪುನಗರದ ಅನಿಕೇತನ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ಆರಂಭಕ್ಕೆ 1 ಗಂಟೆ ಮುಂಚೆ ವಾಟ್ಸ್‌ ಆ್ಯಪ್‌ ಮೂಲಕ ಗೆಳತಿಯೊಬ್ಬಳಿಗೆ 18 ಪ್ರಶ್ನೆಗಳ ಮಾಹಿತಿಯನ್ನು ರವಾನಿಸಿದ್ದರು’ ಎಂದು ಹೇಳಿದರು.

‘ಬೆಂಗಳೂರಿನ ರಾಮಕೃಷ್ಣ ಎಂಬುವರ ವಾಟ್ಸ್‌ ಆ್ಯಪ್‌ ಸಂಖ್ಯೆಗೂ ಈ ಪ್ರಶ್ನೆಗಳ ಮಾಹಿತಿ ಬಂದಿತ್ತು. ಇದನ್ನು ಗಮನಿಸಿದ್ದ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದ್ದರು’ ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.