ADVERTISEMENT

108 ಆಂಬುಲೆನ್ಸ್‌ ಸೇವೆಗೆ ಶೀಘ್ರ ಚಿಕಿತ್ಸೆ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್

6 ರಾಜ್ಯಗಳ ಸೇವೆ ಪರಿಶೀಲಿಸಿ ವರದಿ ನೀಡಲಿದೆ ಅಧಿಕಾರಿಗಳ ತಂಡ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 16:22 IST
Last Updated 29 ನವೆಂಬರ್ 2023, 16:22 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರವಹಿಸುವ 108 ಆಂಬುಲೆನ್ಸ್‌ಗಳು ಇನ್ನು ಮುಂದೆ ನ್ಯೂನತೆ ರಹಿತವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಎರಡು ತಿಂಗಳಲ್ಲಿ ಸೂಕ್ತ ‘ಚಿಕಿತ್ಸೆ’ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು.

ಸುಧಾರಿತ ಆಂಬುಲೆನ್ಸ್‌ ಸೇವೆ ಒದಗಿಸುವ ಸಲುವಾಗಿ ದೇಶದ ಇತರೆ ರಾಜ್ಯಗಳ ಮಾದರಿಗಳನ್ನು ಅಧ್ಯಯನ ಮಾಡಲು ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿತ್ತು. ಗುಜರಾತ್‌, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್‌ ಹಾಗೂ ಮಹಾರಾಷ್ಟ್ರಗಳಿಗೆ ತಂಡ ಭೇಟಿ ನೀಡಿದೆ. ವರದಿ ಆಧಾರದ ಮೇಲೆ ಅಂತರರಾಷ್ಟ್ರೀಯಮಟ್ಟದ ಅತ್ಯಾಧುನಿಕ ಸೇವೆ ಒದಗಿಸಲಾಗುವುದು. ಡಿ.30ರಿಂದಲೇ ಸುಧಾರಿತ ಜೀವರಕ್ಷಕ ಒಳಗೊಂಡ 262 ಹೊಸ ಆಂಬುಲೆನ್ಸ್‌ಗಳನ್ನು ನೀಡಲಾಗುತ್ತಿದೆ. ₹82.02 ಕೋಟಿ ಮೌಲ್ಯದ ವಾಹನಗಳ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವರು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರಸ್ತುತ ಇರುವ ಗುತ್ತಿಗೆದಾರರು 2008ರಿಂದ ಸೇವೆ ನೀಡುತ್ತಿದ್ದಾರೆ. ಹಲವು ದೂರುಗಳು ದಾಖಲಾದರೂ, ತುರ್ತು ಸೇವೆಯ ಕಾರಣ ದುಡುಕಿನ ನಿರ್ಧಾರ ತೆಗೆದುಕೊಂಡಿರಲಿಲ್ಲ. ಹೊಸ ಸೇವಾದಾರರ ಆಯ್ಕೆಗೆ ಈಗಾಗಲೇ ತಾಂತ್ರಿಕ ಸಮಿತಿ  ರಚಿಸಲಾಗಿದೆ. ಜನವರಿ ನಂತರ ಆಯ್ಕೆ ನಡೆಯಲಿದೆ ಎಂದರು.

ADVERTISEMENT

46 ತಾಲ್ಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರ:

ಪ್ರಸ್ತುತ ರಾಜ್ಯದಲ್ಲಿ 173 ಡಯಾಲಿಸಿಸ್‌ ಕೇಂದ್ರಗಳು ಇದ್ದವು. ಈಗ ಅವುಗಳ ಸಂಖ್ಯೆಯನ್ನು 219ಕ್ಕೆ ಹೆಚ್ಚಿಸಲಾಗಿದೆ. 46 ತಾಲ್ಲೂಕುಗಳಲ್ಲಿ ಹೊಸ ಡಯಾಲಿಸಿಸ್ ಕೇಂದ್ರಗಳ ಸ್ಥಾಪಸಲು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಹೊಸದಾಗಿ 5 ಸಿ.ಟಿ, 15 ಎಂಆರ್‌ಐ ಸ್ಕ್ಯಾನಿಂಗ್‌ ಯಂತ್ರ ಖರೀದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

ಅಂಗಾಂಗ ದಾನಿಗಳಿಗೆ ಗೌರವ ಸಮರ್ಪಣೆ:

ಅಂಗಾಂಗ ದಾನ ಮಾಡುವವರ ಮನೆಗೇ ಇಲಾಖೆಯ ಅಧಿಕಾರಿಗಳು ತೆರಳಿ ಗೌರವ ಸಮರ್ಪಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಆಯುಷ್ಮಾನ್‌ ಭಾರತ್‌–ಆರೋಗ್ಯ ಕರ್ನಾಟಕ ಯೋಜನೆ ಅಡಿ 16,79,433 ಪ್ರಕರಣಗಳ ಚಿಕಿತ್ಸೆಗೆ ₹1079.29 ಕೋಟಿ ನೀಡಲಾಗಿದೆ. 7 ವರ್ಷಗಳ ನಂತರ ದರ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಚೀನಾದ ಮಕ್ಕಳಲ್ಲಿ ಕಂಡುಬಂದ ನ್ಯುಮೋನಿಯಾ ಪ್ರಕರಣಗಳಿಂದ ಜನರು ಆತಂಕಪಡುವ ಅಗತ್ಯವಿಲ್ಲ. ರಾಜ್ಯದ ಕೆಲಭಾಗಗಳಲ್ಲಿ ವರದಿಯಾಗಿರುವುದು ಚಳಿಗಾಲದಲ್ಲಿ ಸಾಮಾನ್ಯವಾದ ಶೀತ ಪ್ರಕರಣಗಳು ಅಷ್ಟೆ.
–ದಿನೇಶ್‌ ಗುಂಡೂರಾವ್ ಆರೋಗ್ಯ ಸಚಿವ

ಎಲ್ಲ ಶಾಲೆಗಳಲ್ಲೂ ಕಣ್ಣು ಪರೀಕ್ಷೆ

ಅಂಧತ್ವ ನಿವಾರಣೆಗಾಗಿ ರಾಜ್ಯದ ಎಲ್ಲ ಶಾಲೆಗಳಲ್ಲೂ ಕಣ್ಣು ಪರೀಕ್ಷಾ ಕಾರ್ಯ ನಡೆಸಲಾಗುವುದು. ಮೊದಲ ಹಂತದಲ್ಲಿ ಎಂಟು ಜಿಲ್ಲೆಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಇದೇ ಶೈಕ್ಷಣಿಕ ವರ್ಷದ ಒಳಗೆ ತಪಾಸಣಾ ಕಾರ್ಯ ಪೂರ್ಣಗೊಳಿಸಲಾಗುವುದು. ಶಾಲೆಗಳಲ್ಲದೇ ಈಗಾಗಲೇ 11 ಲಕ್ಷ ಜನರಿಗೆ ಪರೀಕ್ಷೆ ನಡೆಸಲಾಗಿದೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಭ್ರೂಣ ತಪಾಸಣೆ: ಕಠಿಣ ಕ್ರಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಗರ್ಭಿಣಿಯರು ಹಾಗೂ ಜನನ ದಾಖಲೆಯ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು. ಭ್ರೂಣ ತಪಾಸಣೆ ಹತ್ಯೆಯ ಪ್ರಕರಣಗಳು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಮಂಡ್ಯ ಪ್ರಕರಣದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಲೋಪ ಕಂಡು ಬಂದರೆ ಅಮಾನತು ಮಾಡಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.