ADVERTISEMENT

ಬೆಂಗಳೂರು ವಲಯಮಟ್ಟ: ಜ್ಞಾನದ ಹಸಿವು ತಣಿಸಿದ ರಸಪ್ರಶ್ನೆ

ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕ್ರೈಸ್ಟ್ ಅಕಾಡೆಮಿ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 2:01 IST
Last Updated 31 ಜನವರಿ 2020, 2:01 IST
ಬೆಂಗಳೂರಿನಲ್ಲಿ ಗುರುವಾರ ನಡೆದ ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್‌ನ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಗುರುವಾರ ನಡೆದ ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಷಿಪ್‌ನ ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಷಿಪ್‌ನ ವಲಯಮಟ್ಟದ ಸ್ಪರ್ಧೆಯಲ್ಲಿ ಜಯಭೇರಿ ಬಾರಿಸಿ ಬಂದವರಿಗೆ ಗುರುವಾರ ಕ್ರಿಕೆಟ್‌ ವಿಶ್ವಕಪ್‌ ‘ಫೈನಲ್‌’ ಆಡಿದ ಅನುಭವವಾಯಿತು. ಬೆಂಗಳೂರಿನ ಕ್ರೈಸ್ಟ್‌ ಅಕಾಡೆಮಿಯ ಆದಿತ್ಯ ಮತ್ತು ಆದಿತ್ಯ ಸೆಮಿಫೈನಲ್‌ ಮತ್ತು ಫೈನಲ್‌ ಒಂದೇ ದಿನ ಆಡಿದರೂ, ಚಾಂಪಿಯನ್‌ ಆಗುವಲ್ಲಿ ಯಶಸ್ವಿಯಾದರು.

‘ಪ್ರಜಾವಾಣಿ’ ಪತ್ರಿಕಾ ಬಳಗದಿಂದ, ‘ದೀಕ್ಷಾ’ ಫೌಂಡೇಷನ್‌ಸಹಯೋಗದಲ್ಲಿ ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಬೆಂಗಳೂರು ವಲಯಮಟ್ಟ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳು ನಡೆದವು. ವಲಯಮಟ್ಟದಲ್ಲಿ ಅಂತಿಮ
ವಾಗಿ ಆರು ತಂಡಗಳು ಸೆಣಸಿದರೆ, ರಾಜ್ಯಮಟ್ಟದಲ್ಲಿ 12 ವಲಯಗಳ 12 ತಂಡಗಳು ಚಾಂಪಿಯನ್‌ಷಿಪ್‌ಗಾಗಿ ಹೋರಾಟ
ನಡೆಸಿದವು.

ತುಂಬಿದ ಸಭಾಂಗಣ

ADVERTISEMENT

ಬೆಳಿಗ್ಗೆ 8ಕ್ಕೆ ತಮ್ಮ ಪೋಷಕರು– ಶಿಕ್ಷಕರು, ಸ್ನೇಹಿತರ ಜತೆಗೂಡಿ ತಂಡೋಪತಂಡವಾಗಿ ವಿದ್ಯಾರ್ಥಿಗಳು ಬರುತ್ತಿದ್ದರು. ಬೇರೆ ವಲಯದ ವಿದ್ಯಾರ್ಥಿಗಳು ಬುಧವಾರ ರಾತ್ರಿಯೇ ನಗರಕ್ಕೆ ಬಂದು ತಂಗಿದ್ದರು.

ಸ್ಪರ್ಧೆಯ ಉದ್ದಕ್ಕೂ ವಿದ್ಯಾರ್ಥಿಗಳ ಕುತೂಹಲ ಎದ್ದು ಕಾಣುತ್ತಿತ್ತು. ಕ್ವಿಜ್‌ ಮಾಸ್ಟರ್‌ ಪ್ರಶ್ನೆ ಪೂರ್ಣಗೊಳಿಸುವ ಮುನ್ನವೇ ಉತ್ತರಿಸಬೇಕೆನ್ನುವ ಕಾತರ, ಅದ್ಭುತವೆನ್ನಬಹುದಾದ ಜಾಣ್ಮೆ, ತರ್ಕಬದ್ಧ ಆಲೋಚನೆ, ಒಂದಿಷ್ಟು ತಳಮಳ, ಮತ್ತೊಂದಿಷ್ಟು ಕುತೂಹಲಕ್ಕೆ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಬೆಂಗಳೂರು, ಕೋಲಾರ ವ್ಯಾಪ್ತಿಯ 400 ಶಾಲೆಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ನೂರಾರು ಪೋಷಕರು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನೋಂದಣಿಯ ನಂತರ ಕ್ವಿಜ್‌ನ ಪ್ರಾಥಮಿಕ ಹಂತ ಲಿಖಿತ ಪರೀಕ್ಷೆ ಆರಂಭವಾಯಿತು. ಪರದೆಯ ಮೇಲೆ ಮೂಡಿದ 20 ಪ್ರಶ್ನೆಗಳನ್ನು ಒಂದೊಂದಾಗಿ ಕ್ವಿಜ್‌ ಮಾಸ್ಟರ್‌ ಮೇಘವಿ ಅವರು ಕೇಳುತ್ತಿದ್ದಂತೆ ವಿದ್ಯಾರ್ಥಿಗಳು ಯೋಚಿಸಿ ಉತ್ತರಗಳನ್ನು ಬರೆದಿಟ್ಟುಕೊಳ್ಳಲು ಆರಂಭಿಸಿದರು.

ಬಳಿಕ ಮೌಲ್ಯಮಾಪನ ನಡೆಸಿ, ಆರು ತಂಡಗಳನ್ನು ಪ್ರಧಾನ ಸುತ್ತಿಗೆ ಆಯ್ಕೆಮಾಡಲಾಯಿತು.ಅಂತಿಮ ಸುತ್ತಿನ ಸ್ಪರ್ಧೆಯಲ್ಲಿದ್ದ ತಂಡಗಳು ಉತ್ತರ ನೀಡಲು ತಡಬಡಾಯಿಸುತ್ತಿದ್ದಾಗ, ‘ನಾವು ಉತ್ತರ ನೀಡುತ್ತೇವೆ’ ಎಂದು ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳು ಕೈ ಎತ್ತುತ್ತಿದ್ದುದು ಸಾಮಾನ್ಯವಾಗಿತ್ತು.

ಕೋಲಾರಕ್ಕಿಂತ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಶಾಲೆಗಳೇ ವಲಯಮಟ್ಟದ ಅಂತಿಮ ಸುತ್ತಿಗೆ ಆಯ್ಕೆಯಾದವು. ಈ ಸ್ಪರ್ಧೆಯಲ್ಲಿ ಕ್ರೈಸ್ಟ್‌ ಅಕಾಡೆಮಿ, ರ‍್ಯಾನ್‌ ಇಂಟರ್‌ನ್ಯಾಷನಲ್‌ ಹಾಗೂಪ್ರೆಸಿಡೆನ್ಸಿ ಶಾಲೆಯ ತಂಡಗಳು ಮೊದಲ ಮೂರು ಸ್ಥಾನ ಪಡೆದವು.

ಶೂನ್ಯ ಸಾಧನೆ

ವಲಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದ ತಂಡಗಳ ಪೈಕಿ, ಮೂರು ತಂಡಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ‘ಶೂನ್ಯ’ ಸಾಧನೆ ಮಾಡಿದ್ದು ಸ್ಪರ್ಧೆಯ ಗುಣಮಟ್ಟವನ್ನು ಸೂಚಿಸುವಂತಿತ್ತು. ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳು ಇದ
ಕ್ಕಾಗಿ ಪಟ್ಟ ಪರಿಶ್ರಮ ಎಂಥದ್ದು ಎಂಬುದು ಇದರಿಂದ ತಿಳಿಯುತ್ತಿತ್ತು.

ಜಯಗಳಿಸಲು ಸಾಧ್ಯವಾಗದಿದ್ದರೂ, ಸಾಕಷ್ಟು ಜ್ಞಾನ ಗಳಿಸಿದ ಸಂತೃಪ್ತಿಯಲ್ಲಿ ವಿದ್ಯಾರ್ಥಿಗಳಿದ್ದರು. ಮಕ್ಕಳು ಅಥವಾ ವಿದ್ಯಾರ್ಥಿಗಳಿಗೆ ಹೆಚ್ಚು ತರಬೇತಿ ನೀಡಿ, ಮುಂದಿನ ವರ್ಷ ಅಂತಿಮ ಸುತ್ತಿಗೆ ಆಯ್ಕೆಯಾಗುವಂತೆ ಅವರನ್ನು ತಯಾರು ಮಾಡುವ ಸಂಕಲ್ಪದೊಂದಿಗೆ ಪೋಷಕರು, ಶಿಕ್ಷಕರು ಹಿಂದಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.