ADVERTISEMENT

ಸರ್ಕಾರದಿಂದ ತೆರಿಗೆ ಭಯೋತ್ಪಾದನೆ: ಅಶೋಕ

ಅನುದಾನ ಇಲ್ಲ, ಅಭಿವೃದ್ಧಿ ಶೂನ್ಯ– ವಿಪಕ್ಷಗಳು ಕಿಡಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 16:35 IST
Last Updated 20 ಆಗಸ್ಟ್ 2025, 16:35 IST
<div class="paragraphs"><p> ಆರ್‌. ಅಶೋಕ</p></div>

ಆರ್‌. ಅಶೋಕ

   

ಬೆಂಗಳೂರು: ‘ರಾಜ್ಯ ಸರ್ಕಾರ ಜನರಿಂದ ಹೆಚ್ಚುವರಿಯಾಗಿ ₹ 56 ಸಾವಿರ ಕೋಟಿ ತೆರಿಗೆ ವಸೂಲಿ ಮಾಡುತ್ತಿದೆ. ಇದೊಂದು ರೀತಿಯಲ್ಲಿ ತೆರಿಗೆ ಭಯೋತ್ಪಾದನೆ’ ಎಂದು ವಿರೋಧ ಪಕ್ಷದ ಆರ್‌. ಅಶೋಕ ಚಾಟಿ ಬೀಸಿದರು.

ವಿಧಾನಸಭೆಯಲ್ಲಿ ‘ಅನುದಾನ, ಅಭಿವೃದ್ಧಿ’ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸರ್ಕಾರ ಹೆಚ್ಚಿಸಿರುವ ವಿವಿಧ ತೆರಿಗೆಗಳ ವಿವರ ಬಿಚ್ಚಿಟ್ಟರು. ತೆರಿಗೆ, ಶುಲ್ಕ ಹೆಚ್ಚಿಸಿ ಭಾರಿ ಮೊತ್ತವನ್ನು ಸರ್ಕಾರ ಸಂಗ್ರಹಿಸುತ್ತಿದ್ದರೂ, ಆ ಹಣವನ್ನು ಅಭಿವೃದ್ಧಿಗೆ ಬಳಸುತ್ತಿಲ್ಲ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಕಸದ ಸೆಸ್‌ ದುಪ್ಪಟ್ಟು ಮಾಡಲಾಗಿದೆ. ಹಾಲಿನ ದರ ಎರಡು ಬಾರಿ ಏರಿಸಲಾಗಿದೆ. ಬಸ್‌ ಪ್ರಯಾಣ ದರ, ವಾಹನ ನೋಂದಣಿ ಶುಲ್ಕ, ಕಾವೇರಿ ನೀರು ಶುಲ್ಕ ಏರಿಕೆ, ಒಳಚರಂಡಿ ಶುಲ್ಕ, ಮದ್ಯದ ದರ, ಮದ್ಯದಂಗಡಿ ಪರವಾನಗಿ ಶುಲ್ಕ, ವಿದ್ಯುತ್‌ ಶುಲ್ಕ, ಮೆಟ್ರೊ ದರ, ಆಸ್ತಿ ಮಾರ್ಗಸೂಚಿ ದರ, ವೃತ್ತಿ ತೆರಿಗೆ, ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕ ಹೀಗೆ ಎಲ್ಲವನ್ನೂ ಸರ್ಕಾರ ಹೆಚ್ಚಿಸಿದೆ. ಆದರೆ, ಅಭಿವೃದ್ಧಿ ಮಾತ್ರ ಶೂನ್ಯ’ ಎಂದರು.

‘ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆಯನ್ನು ₹ 17 ಸಾವಿರ ಕೋಟಿ ವೆಚ್ಚ ಎಂದು ಪ್ರಸ್ತಾಪಿಸಲಾಗಿದೆ. ಇದಕ್ಕೆ ಟೋಲ್‌ ವಿಧಿಸಿದರೆ ಯಾರೂ ಬರುವುದಿಲ್ಲ. ಆಗ ಸುರಂಗದಲ್ಲೇ ಕಸವನ್ನು ತುಂಬಬಹುದು. ನಾನು ಅಭಿವೃದ್ಧಿಯ ವಿರೋಧಿಯಲ್ಲ. ಆದರೆ, ಸುರಂಗಕ್ಕಾಗಿ ಹಣ ಹಾಳು ಮಾಡಿದರೆ ನಗರದ ಅಭಿವೃದ್ಧಿ ಅಸಾಧ್ಯ’ ಎಂದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ‘ಶಾಸಕರಿಗೆ ಅನುದಾನ ನೀಡುವ ಭರವಸೆ ನೀಡಿ, ಕಾಮಗಾರಿಗಳಿಗೆ ಟೆಂಡರ್‌ ಕರೆಯುವಂತೆ ಸರ್ಕಾರ ಸೂಚಿಸಿದೆ’ ಎಂದರು. ತಾರತಮ್ಯ ಮಾಡದೆ ಅನುದಾನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಬಿಜೆಪಿಯ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ‘ಯಾವ ಕಾಯ್ದೆಯಲ್ಲೂ ‘ಎ’ ಖಾತಾ ‘ಬಿ’ ಖಾತಾ ಎನ್ನುವುದೇ ಇಲ್ಲ. ಆದರೆ, ಸರ್ಕಾರ ಈ ಖಾತೆ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದೆ. ತೆರಿಗೆ ಹಣದಲ್ಲಿ ಹುಡುಗಾಟಿಕೆ ಮಾಡುತ್ತಿದೆ’ ಎಂದು ದೂರಿದರು.

‘ಉತ್ತರ ಕರ್ನಾಟಕದಲ್ಲಿ‌ ಮಳೆಯಿಂದ ಬೆಳೆಗಳು ನಾಶವಾಗಿದೆ, ರೈತರು ಕಂಗಾಲಾಗಿದ್ದಾರೆ. ಎಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ಅಧ್ಯಯನ ನಡೆಸಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸರ್ಕಾರ ಆದೇಶ ಕೊಡಬೇಕು’ ಎಂದು ಆಗ್ರಹಿಸಿದ ಕಾಂಗ್ರೆಸ್‌ನ ಬಿ.ಆರ್‌. ಪಾಟೀಲ, ‘ರೈತರಿಗೆ ವಿಮೆ ಬಿಡುಗಡೆ ಆಗಿಲ್ಲ. ಈ ಬಗ್ಗೆ ಸರ್ಕಾರ ಹೇಳಿಕೆ ಕೊಡಬೇಕು’ ಎಂದು ಒತ್ತಾಯಿಸಿದರು.‌

ಬಿಜೆಪಿಯ ಶರಣು ಸಲಗರ, ಸುರೇಶ್ ಗೌಡ, ಜೆಡಿಎಸ್‌ನ ಶರಣಗೌಡ ಕಂದಕೂರ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.