
ಬೆಂಗಳೂರು: ರಾಜ್ಯ ಸರ್ಕಾರ ಪಾಪರ್ ಆಗಿರುವ ಕಾರಣದಿಂದಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖಾಲಿಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ದೂರಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಯು ಫೆಬ್ರುವರಿ 12ರಂದು ವಿಶೇಷ ವರದಿ ಪ್ರಕಟಿಸಿತ್ತು. ಅದನ್ನು ಅಶೋಕ ಅವರನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿಯೂ ಹಂಚಿಕೊಂಡಿದ್ದರು.
ಅದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ, ‘ಬೆಳಗಾವಿ ವಿಧಾನಮಂಡಲದ ಅಧಿವೇಶನದಲ್ಲೇ ಈ ವಿಷಯ ಪ್ರಸ್ತಾಪಿಸಿದ್ದೆ. ಕೂಡಲೇ ಔಷಧಿ ಖರೀದಿಸಲಾಗುವುದು ಎಂದು ಆರೋಗ್ಯ ಸಚಿವರು ಭರವಸೆ ನೀಡಿದ್ದರು. ಆದರೆ ಈವರೆಗೂ ಔಷಧಿ ಖರೀದಿ ಆಗಿಲ್ಲ ಎಂದು ಟೀಕಿಸಿದರು.
‘ಪ್ಯಾರಾಸಿಟಮಾಲ್‌ನಿಂದ ಆರಂಭವಾಗಿ ಅಗತ್ಯವಾದ 800ಕ್ಕೂ ಅಧಿಕ ಔಷಧಿಗಳು ಲಭ್ಯವಿಲ್ಲವೆಂದು ಈ ಹಿಂದೆಯೇ ಹೇಳಿದ್ದೆ. ಈಗಲೂ ಯಾವುದೇ ಔಷಧ ದಾಸ್ತಾನಿಲ್ಲ. ಈ ಮೂಲಕ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿದೆ. ಆಸ್ಪತ್ರೆಗಳ ನಿರ್ವಹಣೆಯ ಹಣದಿಂದ ಔಷಧಿ ಖರೀದಿಸುವ ದುಸ್ಥಿತಿಗೆ ಸರ್ಕಾರ ಬಂದಿದೆ. ಸಾಲ ಮಾಡಿ ಔಷಧಿ ಖರೀದಿಸುವ ಸ್ಥಿತಿ ಬಂದಿದೆ’ ಎಂದು ಅವರು ಹೇಳಿದರು.
‘ಬರುವ ಮಾರ್ಚ್‌ನಲ್ಲಿ ಟೆಂಡರ್ ಅಂತಿಮಗೊಳಿಸಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಅಂದರೆ ಮೇ, ಜೂನ್‌ವರೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಬಾರದೇ ಇದ್ದರೆ ರೋಗಿಗಳು ಸಾಯಬೇಕಾಗುತ್ತದೆ. ಅಪಘಾತವಾದರೆ ಬ್ಯಾಂಡೇಜ್ ಕೂಡ ಸಿಗುವುದಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ಅನಿವಾರ್ಯವಾಗಿ ಹೊರಗೆ ಔಷಧಿ ಖರೀದಿಗೆ ಚೀಟಿ ಬರೆದುಕೊಡುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಹೊರಗೆ ಔಷಧಿ ಖರೀದಿಗೆ ಚೀಟಿ ಬರೆಯಬಾರದೆಂದು ಸೂಚನೆ ನೀಡಲಾಗಿತ್ತು. ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ’ ಎಂದು ದೂರಿದರು.
ಕಳೆದ ಬಜೆಟ್‌ನಲ್ಲಿ ಆರೋಗ್ಯ ಇಲಾಖೆಗೆ ಶೇ 30 ರಷ್ಟು ಅನುದಾನ ಕಡಿತವಾಗಿದೆ. ಐದು ಗ್ಯಾರಂಟಿಗಳಿಗೆ ಹಣ ಹೊಂದಿಸಲು, ಜನರಿಗೆ ನೀಡುವ ಔಷಧಿಯನ್ನು ಕೊರತೆ ಮಾಡಲಾಗಿದೆ. ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿ ದ್ರಾವಣ, ನೋವು ನಿವಾರಕ ಔಷಧಿ ಇಲ್ಲದೆ ಆಪರೇಶನ್ ಮಾಡುವುದಿಲ್ಲ ಎಂದು ಹೇಳಲಾಗಿದೆ. ಕಮಿಷನ್ ತರುವ ಇಲಾಖೆಗಳಿಗೆ ಗಮನ ನೀಡಿ. ಜನರ ಸಮಸ್ಯೆ ಬಗೆಹರಿಸುವ ಇಲಾಖೆಗಳನ್ನು ಕಡೆಗಣಿಸಲಾಗಿದೆ ಎಂದು ಅಶೋಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.