
ಬೆಂಗಳೂರು: ‘ಟ್ಯಾಂಕರ್ ಮಾಫಿಯಾಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಕಾರಣಕ್ಕೆ ಕೊಳವೆ ಬಾವಿಗಳ ದುರಸ್ತಿ ಮಾಡಿಸಲು ಸಿದ್ದರಾಮಯ್ಯ ಸರ್ಕಾರ ಆಸಕ್ತಿ ತೋರುತ್ತಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ದೂರಿದ್ದಾರೆ.
‘ಪ್ರಜಾವಾಣಿ’ಯ ವರದಿಯನ್ನು ಉಲ್ಲೇಖಿಸಿ ‘ಎಕ್ಸ್’ ಮಾಡಿರುವ ಅವರು, ‘ಕೊಳವೆ ಬಾವಿಗಳ ದುರಸ್ತಿ ಮಾಡದೆ, ಜನರನ್ನು ಸಂಕಷ್ಟಕ್ಕೆ ತಳ್ಳಲಾಗಿದೆ. ನೀರಿನ ವಿಚಾರದಲ್ಲಿ ಈ ರೀತಿ ತೊಂದರೆ ಕೊಟ್ಟು ದುಡ್ಡು ಮಾಡುವ ಕೀಳು ಮಟ್ಟಕ್ಕೆ ಸರ್ಕಾರ ಇಳಿದಿರುವುದು ನಾಚಿಕೆಗೇಡು’ ಎಂದಿದ್ದಾರೆ.
‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಶೇ 50ರಷ್ಟು ಜನ ಪ್ರಾಮಾಣಿಕರಲ್ಲ, ಕಾನೂನು ಪಾಲನೆ ಮಾಡುವುದಿಲ್ಲ ಎಂದು ಆರೋಪ ಮಾಡಿದ್ದಾರೆ. ಮೊದಲಿಗೆ ತಾವು ಎಷ್ಟು ಪ್ರಾಮಾಣಿಕರು ಎಂದು ತಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಕೇಳಿಕೊಳ್ಳಲಿ. ಎರಡು ವರ್ಷಗಳಿಂದ ಕೊಳವೆ ಬಾವಿ ದುರಸ್ತಿ ಏಕೆ ಆಗುತ್ತಿಲ್ಲ? ಇದಕ್ಕಾಗಿ ಟ್ಯಾಂಕರ್ ಮಾಫಿಯಾದಿಂದ ಎಷ್ಟು ಕಮಿಷನ್ ಬರುತ್ತಿದೆ? ಇದರಲ್ಲಿ ಹೈಕಮಾಂಡ್‌ಗೆ ಎಷ್ಟು ಪಾಲು ಹೋಗುತ್ತಿದೆ’ ಎಂದು ಅಶೋಕ ಪ್ರಶ್ನಿಸಿದ್ದಾರೆ.
ಸಾಧನೆ ಸೊನ್ನೆ: ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಅಹಿಂದ ಜಪ ಮಾಡುವ ಸಿದ್ದರಾಮಯ್ಯ ಅವರು ಕಳೆದ ಮೂರು ವರ್ಷಗಳಿಂದ ಪರಿಶಿಷ್ಟರು, ಹಿಂದುಳಿದ ಸಮುದಾಯಗಳ ಅಭಿವೃದ್ಧಿ ನಿಗಮಗಳು ಅನುದಾನವಿಲ್ಲದೆ ಸೊರಗಿದ್ದೇ ದೊಡ್ಡ ಸಾಧನೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.