ಬೆಂಗಳೂರು: ‘ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಐ ಫೋನ್ ತಯಾರಿಕಾ ಘಟಕದಲ್ಲಿ ಕೆಲವು ಕಾರ್ಮಿಕರು ನಡೆಸಿದ ದಾಂದಲೆ ಬಗ್ಗೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಅವರನ್ನು ಮಾಜಿ ಕೈಗಾರಿಕಾ ಸಚಿವರೂ ಆಗಿರುವ ಕಾಂಗ್ರೆಸ್ ಶಾಸಕ ಆರ್.ವಿ ದೇಶಪಾಂಡೆ ಒತ್ತಾಯಿಸಿದ್ದಾರೆ.
‘ಈ ಘಟನೆ ಆಘಾತಕಾರಿ ಸಂಗತಿ. ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದು. ಕಾರ್ಮಿಕರು ಬೇಡಿಕೆಗಳು ನ್ಯಾಯಯುತವಾಗಿದ್ದರೆ, ಈ ವಿಷಯವನ್ನು ಕಾರ್ಮಿಕ ಸಂಘಟನೆಗಳ ಮೂಲಕ ಚರ್ಚಿಸಿ ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ಕಂಪನಿಯ ಆಡಳಿತ ಮಂಡಳಿ ಮತ್ತು ಸರ್ಕಾರ ಮುಂದಾಗಬೇಕು. ಸೂಕ್ತ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳದೆ, ಇಂಥ ಕೃತ್ಯ ನಡೆದರೆ ಹೂಡಿಕೆದಾರರಿಗೆ ತಪ್ಪು ಸಂದೇಶ ಹೋಗಲಿದೆ. ಇಂಥ ಘಟನೆಗಳಿಂದ ಹೂಡಿಕೆದಾರರು ಹಿಂಜರಿಯಬಹುದು. ಹೂಡಿಕೆದಾರರಿದ್ದರೆ ಮಾತ್ರ ಉದ್ಯೋಗಾವಕಾಶ ಸಾಧ್ಯ. ಇಂಥ ಘಟನೆಯಿಂದ ರಾಜ್ಯಕ್ಕೆ ಅರ್ಥಿಕವಾಗಿ ತೀವ್ರ ಹಿನ್ನಡೆ ಆಗಬಹುದು’ ಎಂದೂ ಅವರ ಆತಂಕ ದೇಶಪಾಂಡೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.