ADVERTISEMENT

ರಾಗಿ ಖರೀದಿ: ಬಾರದ ಆದೇಶ ಶುರುವಾಗದ ನೋಂದಣಿ

ಅಧಿಕಾರಿಗಳ ಕೈಸೇರದ ಸರ್ಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 7 ಮೇ 2022, 4:53 IST
Last Updated 7 ಮೇ 2022, 4:53 IST

ಬೆಂಗಳೂರು: ರೈತರಿಂದ ಮೂರನೇ ಹಂತದಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ನೋಂದಣಿ ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರೂ, ಈ ಬಗ್ಗೆ ಇನ್ನೂ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿಲ್ಲ. ಹಾಗಾಗಿ, ಶುಕ್ರವಾರ ನೋಂದಣಿ ಪ್ರಕ್ರಿಯೆ ಆರಂಭವಾಗಿಲ್ಲ.

ರೈತರು ಬೆಳಿಗ್ಗೆಯೇ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೆರೆದಿರುವ ಖರೀದಿ ಕೇಂದ್ರಗಳಿಗೆ ಹೆಸರು ನೋಂದಣಿಗೆ ಆಗಮಿಸಿದ್ದರು. ಸರ್ಕಾರದ ಆದೇಶ ಇನ್ನೂ ಕೈಸೇರದಿರುವ ಬಗ್ಗೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಟ್ಟರು.

‘ಸರ್ಕಾರದಿಂದ ಆದೇಶ ಬಂದ ತಕ್ಷಣ ನೋಂದಣಿ ಮಾಡಿಕೊಂಡು ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ತುಮಕೂರು ಜಿಲ್ಲಾ ಆಹಾರ ಹಾಗೂ ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ಸಿದ್ಧಲಿಂಗಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ವಿಜಯನಗರ ಜಿಲ್ಲೆ ಹರಪನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ, ಮೈಸೂರು, ಕೊಡಗು, ಹಾಸನ, ಚಾಮರಾಜ ನಗರ, ಮಂಡ್ಯ, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಕೂಡ ರೈತರ ನೋಂದಣಿ ಸಾಧ್ಯವಾಗಲಿಲ್ಲ.

‘ಪೋರ್ಟಲ್‌ನಲ್ಲಿ ನೋಂದಣಿ ಮಾಡಲು ಸಾಧ್ಯವಾಗದೇ ಇರುವುದರಿಂದ ರೈತರ ಮಾಹಿತಿಯನ್ನು ಲಿಖಿತವಾಗಿ ದಾಖಲಿಸಿಕೊಳ್ಳಲಾಯಿತು’ ಎಂದು ಅಧಿಕಾರಿಗಳು ದಾವಣಗೆರೆಯಲ್ಲಿ ಹೇಳಿದ್ದಾರೆ.

ಎರಡನೇ ಹಂತದ ಖರೀದಿಯು ಏ. 28ಕ್ಕೆ ಕೊನೆಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.